ಉಪ್ಪಿನಂಗಡಿ: ಶಾಲಾ ಮಕ್ಕಳ ಬಿಸಿಯೂಟದ ಮಿಕ್ಸಿ ಮತ್ತು ಗ್ಯಾಸ್ ಸಿಲಿಂಡರ್ಗಳನ್ನು ಕಳವುಗೈಯಲಾದ ಬೆಳ್ತಂಗಡಿ ತಾಲೂಕಿನ ಪಿಲಿಗೂಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಜಿರೆಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕರು ಹಾಗೂ ಉದ್ಯಮಿ ಮೋಹನ್ ಕುಮಾರ್ ಅವರು ಇಂದು ಮಿಕ್ಸಿ ಹಾಗೂ ಗ್ಯಾಸ್ ಸಿಲಿಂಡರ್ ಕೊಡುಗೆಯಾಗಿ ನೀಡಿ ಮಕ್ಕಳ ಬಿಸಿಯುಟ ಅಭಾದಿತವಾಗಿ ನಡೆಯುವಂತೆ ಸಹಕರಿಸಿದ್ದಾರೆ.
ಪಿಲಿಗೂಡಿನ ಸರಕಾರಿ ಶಾಲೆಯಲ್ಲಿ ಜೂ.5ರ ರಾತ್ರಿ ಕಳ್ಳತನ ನಡೆದಿದ್ದು, ಖದೀಮರು ಶಾಲೆಯ ಬೀಗ ಒಡೆದು ಮಿಕ್ಸಿ, ಗ್ಯಾಸ್ ಸಿಲಿಂಡರ್ ದೋಚಿದ್ದರು. ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಮಸ್ಯೆಯುಂಟಾಗಿತ್ತು. ಈ ಬಗ್ಗೆ ಬಿತ್ತರವಾದ ಪತ್ರಿಕಾ ವರದಿಯನ್ನು ಗಮನಿಸಿದ ಉದ್ಯಮಿ ಮೋಹನ್ ಕುಮಾರ್ ಅವರು ತಕ್ಷಣ ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್ ಸಿಲಿಂಡರ್ ನೀಡುವ ಸಂಕಲ್ಪ ತೊಟ್ಟರು. ಅದರಂತೆ ಜೂ.7ರಂದು ಶಾಲೆಗೆ ತೆರಳಿ ಎಸ್ಡಿಎಂಸಿ ಅಧ್ಯಕ್ಷರ, ಶಿಕ್ಷಕರ, ಮಕ್ಕಳ ಸಮ್ಮುಖದಲ್ಲಿ ಶಾಲೆಗೆ ಮಿಕ್ಸರ್ ಗ್ರೈಂಡರ್ ಹಾಗೂ ಗ್ಯಾಸ್ ಸಿಲಿಂಡರ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ಪಿಲಿಗೂಡು ಶಾಲೆಯಲ್ಲಿ ಕಳ್ಳತನವಾದ ವಿಚಾರ ತಿಳಿದು ಬೇಸರವಾಯಿತು. ಮಕ್ಕಳು ಹಸಿವಲ್ಲಿರಬಾರದು. ಈ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಮಿಕ್ಸಿ ನೀಡಲಾಗಿದೆ. ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ತೊಂದರೆಯಾದರೆ ಕೂಡಲೆ ಸ್ಪಂದಿಸುತ್ತೇನೆ. ಶಾಲೆಯಿಂದ ಯಾರು ಕಳ್ಳತನ ಮಾಡಿದ್ದಾರೋ ಆ ವ್ಯಕ್ತಿಗಳು ಒಂದು ಕ್ಷಣ ಕೂತು ಯೋಚಿಸಿದರೆ ಅವರಿಗೆ ತಮ್ಮ ತಪ್ಪಿನ ಅರಿವಾಗಬಹುದು. ದೇವರು ಅವರಿಗೆ ಮುಂದೆ ಇಂತಹ ಕೆಲಸ ಮಾಡದಂತೆ ಬುದ್ದಿ ಕೊಡಲಿ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪ್ಲೇವಿಯ ಡಿಸೋಜ ಮಾತನಾಡಿ, ಮೋಹನ್ ಕುಮಾರ್ರವರ ಸ್ಪಂದನ ಸರಕಾರಿ ಶಾಲಾ ಮಕ್ಕಳ ಪಾಲಿಗೆ ಸಂತಸದಾಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಚಂದ್ರಾ.ಕೆ, ಶಿಲ್ಪಾ, ಉಷಾ, ಎಸ್.ಡಿ.ಎಂ.ಸಿ. ಅಧ್ಯಕ್ಷ ಇಸ್ಮಾಯಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್, ಎಸ್.ಡಿ.ಎಂ.ಸಿ ಸದಸ್ಯರಾದ ಬಾಲಕೃಷ್ಣ, ವನಿತಾ ಹಾಗೂ ಪೋಷಕರು ಉಪಸ್ಥಿತರಿದ್ದರು.