ಭಾರತದ ಜನರು ವಿಶಿಷ್ಟ ಫಲಿತಾಂಶ ನೀಡಿದ್ದಾರೆ: ವಿಕಾಸ್ ಪಿ.
ಪುತ್ತೂರು: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶವು ಮತ್ತೊಂದು ಸಮ್ಮಿಶ್ರ ಸರಕಾರ ರಚನೆಗೆ ಮುನ್ನುಡಿ ಬರೆದಿದೆ. ಸಮ್ಮಿಶ್ರ ಸರಕಾರಗಳು ನಮ್ಮ ದೇಶಕ್ಕೆ ಹೊಸ ವಿಚಾರವಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಸಮ್ಮಿಶ್ರ ಸರಕಾರಗಳು ಹೊಸದಲ್ಲ. ಅವರು ಕಳೆದ 10 ವರ್ಷದಲ್ಲಿ ಸಮ್ಮಿಶ್ರ ಮಾದರಿಯ ಸರಕಾರವನ್ನೇ ಮುನ್ನಡೆಸಿದ್ದಾರೆ. ಆದರೆ ಈ ಭಾರಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೊಸ ಮಾದರಿ ಸಮ್ಮಿಶ್ರ ಸರಕಾರ ಈ ದೇಶವನ್ನು ಮುನ್ನಡೆಸಲಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ವಿಕಾಸ್ ಪಿ. ರವರು ಹೇಳಿದರು.
ಅವರು ನೆಹರುನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಡಿಬೇಟ್ ಸೊಸೈಟಿ ವತಿಯಿಂದ ನಡೆದ ‘ಲೋಕಸಭಾ ಚುನಾವಣೆ -2024ರ ವಿಶ್ಲೇಷಣಾ ಕಾರ್ಯಕ್ರಮ’ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ರಾಜ್ಯಶಾಸ್ತ್ರ ವಿಭಾಗದ ಜ್ಞಾನಬಿಂಬ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆಯನ್ನು ಅನಾವರಣ ಮಾಡುವ ಮೂಲಕ ಉದ್ಘಾಟಿಸಿ ಆಮೇಲೆ ವಿಶೇಷ ಉಪನ್ಯಾಸ ನೀಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭಾರತದ ಜನರು ವಿಶಿಷ್ಟ ಫಲಿತಾಂಶ ನೀಡಿದ್ದಾರೆ. ವೈವಿಧ್ಯತೆಗಳ ತವರೂರು ಭಾರತದಲ್ಲಿ ಭಾರತೀಯ ಜನತಾ ಪಕ್ಷದ 10 ವರ್ಷಗಳ ಆಡಳಿತವನ್ನು ಒಪ್ಪಿಕೊಂಡಿರುವ ಜನರು ಮತ್ತೆ ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು ನೀಡಿದ್ದಾರೆ. ಇಂತಹ ಉತ್ತಮ ರೀತಿಯ ಫಲಿತಾಂಶ ಭಾರತದ ಇತಿಹಾಸದಲ್ಲಿ ಯಾವುದೇ ಪಕ್ಷ ಪಡೆದುಕೊಂಡಿಲ್ಲ ಎಂದರು. ಜೊತೆಗೆ ಚುನಾವಣೆಯ ವಿವಿಧ ಆಯಾಮಗಳನ್ನು ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ. ಪಿ. ಮಾತನಾಡಿ, ಭಾರತದ ಪ್ರಜಾಪ್ರಭುತ್ವದ ಅಂತ:ಸತ್ವ ಇಲ್ಲಿ ನಡೆಸುವ ಚುನಾವಣೆಯಲ್ಲಿದೆ. ಪ್ರತಿಯೊಂದು ಲೋಕಸಭಾ ಚುನಾವಣೆಯು ಅದರದ್ದೇ ಆಗಿರುವ ವಿಶೇಷತೆಯನ್ನು ಒಳಗೊಂಡಿದೆ. ಕಾನೂನು ವಿದ್ಯಾರ್ಥಿಗಳು ಇಂತಹ ಪ್ರಚಲಿತ ವಿದ್ಯಾಮಾನಗಳ ಕುರಿತು ಸರಿಯಾದ ಮಾಹಿತಿಯನ್ನು ಪಡೆದುಕೊಂಡಿರಬೇಕು. ಈ ಉದ್ದೇಶಕ್ಕೆ ನಮ್ಮಲ್ಲಿ ಈ ರೀತಿಯ ವಿಶ್ಲೇಷಣಾ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಎಂಟು ಕಾನೂನು ವಿದ್ಯಾರ್ಥಿಗಳು ಲೋಕಸಭಾ ಚುನಾವಣೆಯ ಕುರಿತಾಗಿ ಎಂಟು ವಿಶಿಷ್ಟ ಮಾದರಿಯ ವಿಷಯ ಮಂಡನೆ ಮಾಡಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕ ಲಕ್ಷ್ಮೀಕಾಂತ ಎ. ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ. ಎಂ., ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಎಂ. ಯಶ್ಮಿತಾ ಸ್ವಾಗತಿಸಿ, ವಿದ್ಯಾರ್ಥಿನಿ ಗಣ್ಯ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವಿದ್ಯಾಶ್ರೀ ನಿರೂಪಿಸಿದರು.