ನುಳಿಯಾಲು ಸಂಜೀವ ರೈ ಬಾಜುವಳ್ಳಿ ಮತ್ತು ಸುಗುಣ ಎಸ್. ರೈ ದಾಂಪತ್ಯ ಸುವರ್ಣ ಸಂಭ್ರಮಾಚರಣೆ

0

ಪುತ್ತೂರು: ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಹಿರಿಯ ಯಕ್ಷಗಾನ ಕಲಾವಿದ ನುಳಿಯಾಲು ಸಂಜೀವ ರೈ ಮತ್ತು ಸುಗುಣ ಎಸ್. ರೈ ಕೆಲ್ಲಾಡಿ ಬಾಲ್ಯೊಟ್ಟುಗುತ್ತು ರವರ ವೈವಾಹಿಕ ಸುವರ್ಣ ಸಂಭ್ರಮಾಚರಣೆ ಜೂ. 8 ರಂದು ಪುತ್ತೂರಿನ ಅಶ್ವಿನಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.


ರೈ ದಂಪತಿ ಪರಸ್ಪರ ಹಾರ ವಿನಿಮಯಿಸಿಕೊಂಡು ವೈವಾಹಿಕ ಸುವರ್ಣ ಸಂಭ್ರಮಾಚರಿಸಿಕೊಂಡರು.ಬಳಿಕ ಮಾತನಾಡಿದ ಸಂಜೀವ ರೈಯವರು ‘ನನ್ನ ಹಿರಿಯರ, ದೇವರ ಅನುಗ್ರಹದಿಂದ ದೊರೆತ ಪ್ರೇರಣೆ ನನ್ನ ಬದುಕು ವಿವಿಧ ಆಯಾಮಗಳಲ್ಲಿ ಹೋಗುವಂತೆ ಮಾಡಿತು. ಹೆಸರಿಗಾಗಿ, ಸಾಧನೆಗಾಗಿ ಯಾವುದೂ ಮಾಡಿಲ್ಲ. ಬದುಕು ಜಟಕಾ ಬಂಡಿಯಂತೆ ಸಾಗಿ ಹೋಗಿದೆ. ಆಯಾ ಕಾಲಘಟ್ಟದಲ್ಲಿ ನನ್ನಿಂದ ಏನಾಗಬೇಕೋ ಅವೆಲ್ಲವೂ ಆಗಿದೆ ಎನ್ನುವ ಸಾರ್ಥಕ ಭಾವ ನನ್ನಲ್ಲಿದೆ. ನನ್ನ ಬದುಕಿನಲ್ಲಿ ಅನೇಕರು ನನಗೆ ಪ್ರೇರಣೆ ನೀಡಿದವರು, ಸಾಥ್ ನೀಡಿದವರಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿ ತಮ್ಮ ಸಾಂಸಾರಿಕ ಜೀವನ ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಯಕ್ಷಗಾನದ ಭೀಷ್ಮರಾಗಿ ಮೆರೆದವರು – ಸುಂದರ ಶೆಟ್ಟಿ
ಸಭಾಧ್ಯಕ್ಷತೆ ವಹಿಸಿದ್ದ ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಮಾತನಾಡಿ ಸಂಜೀವ ರೈಯವರು ಯಕ್ಷಗಾನ ರಂಗದಲ್ಲಿ ಉನ್ನತ ಕಲಾವಿದರ ಸಮಾನವಾಗಿ ಬೆಳೆದು ಯಕ್ಷಗಾನದ ಭೀಷ್ಮರಾಗಿ ಮೆರೆದವರು. ಬೆಟ್ಟಂಪಾಡಿಯಲ್ಲಿ ಯಕ್ಷಗಾನ ರಂಗ ಬೆಳೆದು ಬರುವಲ್ಲಿ ಇಂದಿಗೂ ಸಂಜೀವ ರೈಯವರ ನಿರ್ದೇಶನ ಕಾರಣವಾಗಿದೆ’ ಎಂದರು.
ಸಂಜೀವ ರೈಯವರ ಮೊಮ್ಮಗ ರಾಮ್‌ಧ್ಯಾನ್ ರೈ ಅಜ್ಜ ಮತ್ತು ದೊಡ್ಡನ ಬಗ್ಗೆ ಮಾತನಾಡಿ, ಅಜ್ಜನಂತೆ ಆಗಬೇಕೆಂಬುದು ನನ್ನ ಆಸೆ, ದೊಡ್ಡನ ತಾಳ್ಮೆ, ಸಹನೆ ಎಲ್ಲರಿಗೂ ಮಾದರಿ’ ಎಂದರು.


ಸನ್ಮಾನ
ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್ ರೈ ದಂಪತಿಯನ್ನು ಸಂಜೀವ ರೈಯವರು ಸನ್ಮಾನಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಪ್ರಮಿತ್ ರೈ ಹಾಗೂ ಸಂಗೀತ ಕ್ಷೇತ್ರದಲ್ಲಿ ಮಿಂಚಿದ ಸಮನ್ವಿ ರೈ ಮದಕರವರನ್ನು ಇದೇ ವೇಳೆ ಸನ್ಮಾನಿಸಲಾಯಿತು.


ಉತ್ತಮ ದೇಹದಾರ್ಢ್ಯ ಕೊಟ್ಟವರು – ಕಡಮಜಲು
ಸನ್ಮಾನಿತರ ಪರವಾಗಿ ಕಡಮಜಲು ಸುಭಾಸ್ ರೈ ಮಾತನಾಡಿ ‘ಕೃಷಿಯಲ್ಲಿ ಸಾಧನೆಗೈಯಲು ನನಗೆ ದೇಹದಾರ್ಢ್ಯ ಒದಗಿಸಿಕೊಟ್ಟವರು ನನ್ನು ಗುರುಗಳಾದ ಸಂಜೀವ ರೈಯವರು. ಹಾಗಾಗಿ ಅವರ 50 ರ ವೈವಾಹಿಕ ಸಂಭ್ರಮದ ವೇಳೆ ಗುರುದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ’ ಎಂದರು.

ರೈವರ ಯೌವನದ ಹಿಂದೆ ಸಂತೋಷವಿದೆ – ಭಾಸ್ಕರ ರೈ ಕುಕ್ಕುವಳ್ಳಿ
ವೇದಿಕೆಯಲ್ಲಿದ್ದ ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿಯವರು ಮಾತನಾಡಿ, ಸಂತೋಷವೇ ಯೌವನ, ಚಿಂತೆಯೇ ಮುಪ್ಪು. ಸಂಜೀವ ರೈಯವರ ಸಂತೋಷಭರಿತ ಜೀವನ ಅವರನ್ನು ಇನ್ನೂ ಯೌವನವಾಗಿರಿಸಿದೆ. ಶಿಕ್ಷಕನಾಗಿ, ಬಂಧುವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಮಗೆಲ್ಲರಿಗೂ ಪ್ರೇರಣೆ ನೀಡಿದವರು ಸಂಜೀವ ರೈಯವರು. ಗುರುಭಕ್ತಿ ಸಲ್ಲಿಸಲು ಯೋಗ್ಯ ವ್ಯಕ್ತಿಯಾಗಿ ತನ್ನ ಜೀವನವನ್ನು ರೂಪಿಸಿಕೊಂಡವರು’ ಎಂದರು.


ಜೀವನದ ಶಿಸ್ತು ಎಂದಿಗೂ ಮಾಯವಾಗಿಲ್ಲ – ಶಶಿಕುಮಾರ್ ರೈ
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಮಾತನಾಡಿ ‘ಓರ್ವ ಗುರುವಾಗಿ ಅವರು ಎಲ್ಲಾ ಕ್ಷೇತ್ರದಲ್ಲಿಯೂ ತಿದ್ದಿ ತೀಡಿದವರು. ಕೃಷಿಯಲ್ಲಿ ತಾನು ಸ್ವತಃ ದುಡಿದು ಪರಿಶ್ರಮವಹಿಸಿದವರು. ಇಂದಿಗೂ ತನ್ನ ಜೀವನದಲ್ಲಿ ಶಿಸ್ತು ಹೊಂದಿದವರಾದುದರಿಂದ ಕೃಷಿಯಲ್ಲಿಯೂ ಯಶಸ್ಸು ಕಂಡವರು. ಸರ್ವರಿಗೂ ಬೇಕಾದವರಾಗಿ ಜೀವನ ಸಾಗಿಸಿದವರು’ ಎಂದರು.


ವ್ಯಕ್ತಿಯಲ್ಲ, ಶಕ್ತಿಯಾಗಿ ನಮಗೆ ಕಂಡವರು – ದಯಾನಂದ ರೈ
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರು ಮಾತನಾಡಿ ‘ಸಂಜೀವ ರೈಯವರು ವ್ಯಕ್ತಿಯಲ್ಲ ಅವರು ಶಕ್ತಿ. ನನ್ನ ಜೀವನದಲ್ಲಿ ಶಿಸ್ತು ಕಲಿತದ್ದೇ ಅವರಿಂದಲೇ. ಯಾವ ರೀತಿಯ ಆಧುನಿಕ ವ್ಯವಸ್ಥೆಗಳೂ ಇಲ್ಲದ ಆ ಕಾಲದಲ್ಲಿ ನಮ್ಮನ್ನೆಲ್ಲ ಕ್ರೀಡೆಯಲ್ಲಿ ಪಳಗಿಸಿದವರು ಸಂಜೀವ ರೈಯವರು. ಅವರ ಮೂಲಕ ಪಳಗಿದ ನಮ್ಮ ಕ್ರಿಕೆಟ್ ತಂಡ ಬಲಿಷ್ಟವಾಗಿತ್ತು’ ಎಂದರು.


ಸುಗುಣ ಎಸ್. ರೈಯವರ ಸಹೋದರ ನಾರಾಯಣ ರೈ ಕೆಲ್ಲಾಡಿಯವರು ತನ್ನ ತಂಗಿ ಮತ್ತು ಬಾವನ ಮದುವೆ ಸಂಬಂಧ ಬೆಳೆದು ಬಂದ ಬಗ್ಗೆ ಮಾತನಾಡಿದರು. ಸಂಜೀವ ರೈಯವರ ಸಹೋದರ ಮನೋಹರ ರೈ ಬಾಜುವಳ್ಳಿಯವರು ‘ಬಾಲ್ಯ ಜೀವನದಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳು, ಅಂದಿನ ಸಂದರ್ಭ ಅಣ್ಣ ಸಂಜೀವ ರೈಯವರು ಸ್ಪೂರ್ತಿ ಮತ್ತು ಪ್ರೇರಣಾ ಶಕ್ತಿಯಾಗಿ ನಮಗೆ ಕಂಗೊಳಿಸಿದವರು’ ಎಂದು ಹೇಳಿ ಆ ಕಾಲಘಟ್ಟವನ್ನು ಮೆಲುಕು ಹಾಕಿದರು.ವೇದಿಕೆಯಲ್ಲಿದ್ದ ತನ್ನ ಶಿಷ್ಯವೃಂದವನ್ನು ಸಂಜೀವ ರೈ ದಂಪತಿ ಸನ್ಮಾನಿಸಿ ಗೌರವಿಸಿದರು.


ರಾಜಯೋಗದ ಸುಸಂದರ್ಭ – ಪ್ರಶಾಂತ್ ರೈ
ಸಂಜೀವ ರೈ ದಂಪತಿ ಪುತ್ರ ಪ್ರಶಾಂತ್ ರೈಯವರು ಮಾತನಾಡಿ ‘ರಾಜಯೋಗದ ಸುಸಂದರ್ಭ ನಮಗೆ ಒದಗಿಬಂದಿದೆ. ಈ ಆನಂದ, ಸಂತೋಷವನ್ನು ಹೇಳತೀರಲಾಗದು‌. ಕಣ್ಣಂಚಿನಿಂದ ಜಾರಿದ ಹನಿಗಳೇ ಇದಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿ ಪಾಲ್ಗೊಂಡ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಜೀವ ರೈಯವರ ಸಹೋದರಿ ಸುಹಾಸಿನಿ ರೈ ಮತ್ತು ಕುದ್ಪಂಗುಳಿ ಬಾಲಕೃಷ್ಣ ರೈ ಯವರನ್ನು ಸನ್ಮಾನಿಸಿದರು. ಕೆಲ್ಲಾಡಿ ಬಾಲ್ಯೊಟ್ಟುಗುತ್ತು ಕುಟುಂಬಿಕರು ಸಂಜೀವ ರೈ ದಂಪತಿಯನ್ನು ಸನ್ಮಾನಿಸಿದರು.ರೈಯವರ ಮೊಮ್ಮಕ್ಕಳಾದ ತ್ವಿಷಾ ಮತ್ತು ದಿಶಾ ಪ್ರಾರ್ಥಿಸಿದರು. ಅಳಿಯ ಡಾ.‌ ಗಂಗಾಧರ ಶೆಟ್ಟಿ ಸ್ವಾಗತಿಸಿ, ಪುತ್ರ ಪ್ರಶಾಂತ್ ರೈ ವಂದಿಸಿದರು. ನಿವೃತ್ತ ಶಿಕ್ಷಕ, ಯಕ್ಷಗಾನ ಅರ್ಥಧಾರಿ ಭಾಸ್ಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಳಿಯ ಪ್ರದೀಪ್ ಕುಮಾರ್ ಶೆಟ್ಟಿ ಅಮೈ, ಪುತ್ರಿಯರಾದ ರೇಷ್ಮಾ ಶೆಟ್ಟಿ ಮತ್ತು ರಶ್ಮಿ ಮತ್ತು ಸೊಸೆ ಸುಮತಿ, ಮೊಮ್ಮಕ್ಕಳು ಸಹಕರಿಸಿದರು.


ಕಾರ್ಯಕ್ರಮದಲ್ಲಿ ಗುಲ್ಬರ್ಗ ಪೊಲೀಸ್ ವರಿಷ್ಟಾಧಿಕಾರಿ ಜಗನ್ನಾಥ ರೈ ಬಜನಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ ಬಳಜ್ಜ, ಮಂಗಳೂರು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್ ಗೌಡ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಹರೀಶ್ ರೈ, ಮಾಣಿ ಲಯನ್ಸ್ ಅಧ್ಯಕ್ಷ ಗಂಗಾಧರ ರೈ ಮಾಣಿ, ಬೈಲಾಡಿ ವಿಠಲ ರೈ, ಬಾಲ್ಯೊಟ್ಟುಗುತ್ತು ಯಜಮಾನ ಬಾಳಪ್ಪ ರೈ ಸೇರಿದಂತೆ ಬಂಧು ಮಿತ್ರರು, ಕುಟುಂಬಿಕರು ದಂಪತಿಗೆ ಶುಭ ಹಾರೈಸಿದರು.‌ ಬಳಿಕ ಔತಣಕೂಟ ಜರಗಿತು.

ಸಂಜೀವ ರೈಯವರು ಅಪ್ರತಿಮ ಸಾಧಕ
ಕ್ರೀಡೆ, ಶಿಕ್ಷಣ, ಯಕ್ಷಗಾನ ಮತ್ತು ಕೃಷಿ ಕ್ಷೇತ್ರದಲ್ಲಿ ಸಂಜೀವ ರೈಯವರು ಓರ್ವ ಅಪ್ರತಿಮ ಸಾಧಕರೆನೆಸಿಕೊಂಡವರು. ಶಿಸ್ತಿನ ಸಿಪಾಯಿಯಾಗಿದ್ದ ಅವರ ಗರಡಿಯಲ್ಲಿ ಪಳಗಿದ ಅನೇಕರು ಇಂದು ಕ್ರೀಡಾ ಕ್ಷೇತ್ರ ಮತ್ತು ಸಮಾಜದ ನಾನಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಮಾನದಲ್ಲಿದ್ದಾರೆ‌. ತಾಳ್ಮೆ ಮತ್ತು ಸಹನೆಗೆ ಇನ್ನೊಂದು ಹೆಸರಾಗಿದ್ದವರು ಸುಗುಣ ಎಸ್. ರೈಯವರು. ವೈವಾಹಿಕ ಬದುಕಿನ ಸಾರ್ಥಕ 50 ವರ್ಷ ಪೂರೈಸಿದ ಸಂಭ್ರಮದಲ್ಲಿ ಅವರ ಕುಟುಂಬಿಕರು, ಬಂಧುಗಳು, ಶಿಷ್ಯವೃಂದದವರು ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here