ಪುಣಚ: ಮಹಿಷಮರ್ದಿನಿ ದೇವಸ್ಥಾನ ಪುಣಚ ಹಾಗೂ ಗ್ರಾಮ ವಿಕಾಸ ಸಮಿತಿ ಪುಣಚ ಇವುಗಳ ಜಂಟಿ ಆಶ್ರಯದಲ್ಲಿ ಮನೆಗೊಂದು ಗಿಡ ನೆಡುವ ಕಾರ್ಯಕ್ರಮದ ಪ್ರಯುಕ್ತ ಸಸಿ ವಿತರಣೆ ಜೂ.21ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮಂಗಳೂರು ಗ್ರಾಮಾಂತರ ಗ್ರಾಮವಿಕಾಸ ಸಮಿತಿ ಸಂಯೋಜಕ ಸುಜಿತ್ ಕಲ್ಲಡ್ಕ ಮಾತನಾಡಿ ಪರಿಸರ ಬೆಳವಣಿಗೆಯಿಂದ ಸ್ವಸ್ಥ ಸಮಾಜ, ಆರೋಗ್ಯ ಪೂರ್ಣ ಪರಿಸರ ಪಡೆಯುವಂತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ವಲಯ ಅರಣ್ಯಾಧಿಕಾರಿ ಬಿ.ಎಮ್ ಕಿರಣ್ ಅವರು ಪ್ರಕೃತಿಯ ಸಮತೋಲನ ತಪ್ಪಲು ಮುಖ್ಯ ಕಾರಣ ಕಾಡುಗಳ ನಾಶ. ಮನುಷ್ಯ ತನ್ನ ಸ್ವಾರ್ಥಕೋಸ್ಕರ ಮರ ಗಿಡಗಳನ್ನು ಕಡಿಯುವುದರಿಂದ ಪ್ರಕೃತಿಯ ಮೇಲೆ ಕೆಟ್ಟ ಪರಿಣಾಮ ಬೀರಿ ಮನುಷ್ಯ ಸಹಿತ ಪ್ರಾಣಿ ಪಕ್ಷಿಗಳಿಗೆ ಅಪಾಯ ತರುತ್ತಿದೆ. ಆದುದರಿಂದ ಮರ-ಗಿಡಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದರು.
ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಕೋಶಾಧಿಕಾರಿ ಶಂಕರ ನಾರಾಯಣ ಭಟ್, ಪುಣಚ ಗ್ರಾ.ಪಂ. ಅಧ್ಯಕ್ಷೆ ಬೇಬಿ ಪಟಿಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಣಚ ಗ್ರಾಮ ವಿಕಾಸ ಸಮಿತಿ ಸಂಯೋಜಕ ವಿನಯಚಂದ್ರ ನಟ್ಟಿ ಸ್ವಾಗತಿಸಿ, ಶಿಕ್ಷಕ ಪ್ರಸನ್ನ ಕುಮಾರ್ ವಂದಿಸಿದರು. ಶಿಕ್ಷಕರಾದ ರೋಹಿತ್ ಹಾಗೂ ವಿನೋದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಗ್ರಾಮದ ಹಲವಾರು ಮಂದಿ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕ್ಷೇತ್ರದಲ್ಲಿ ಬೆಳಿಗ್ಗೆ ಮಹಿಷಮರ್ದಿನಿ ಯಕ್ಷ ವೃಂದ ಪುಣಚ ತಂಡದವರಿಂದ ತಿಂಗಳ ಸರಣಿ ಯಕ್ಷಗಾನ ತಾಳಮದ್ದಳೆ ಪ್ರಸಂಗ “ಪಾದುಕ ಪ್ರದಾನ” ಪ್ರಸಂಗ ನಡೆಯಿತು. ಬಳಿಕ ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.