ಸುದ್ದಿ ಬಿಡುಗಡೆ ಪತ್ರಿಕೆಯನ್ನು ಸುಳ್ಯದಲ್ಲಿ ಪ್ರಾರಂಭಿಸುವ ಮೊದಲೇ 1982ರಿಂದ ಸುಳ್ಯದಲ್ಲಿ ಬಳಕೆದಾರರ ವೇದಿಕೆ ವತಿಯಿಂದ ಬಳಕೆದಾರರ ಸಂಚಿಕೆಯನ್ನು ಹೊರತರುತ್ತಿದ್ದೆವು. ಸರಿಯಾದ ಮಾಹಿತಿಯ ಕೊರತೆ ಇರುವುದರಿಂದಲೇ ಜನ ಶೋಷಣೆಗೆ ಒಳಗಾಗುತ್ತಾರೆ ಎಂಬ ಕಾರಣಕ್ಕೆ ವೇದಿಕೆ ವತಿಯಿಂದ ಬಳಕೆದಾರರ ಹಕ್ಕುಗಳ ಹಾಗೂ ಅಧಿಕಾರಿಗಳ ಕರ್ತವ್ಯಗಳ, ಜವಾಬ್ದಾರಿಗಳ ಕುರಿತು ಮಾಹಿತಿಗಳನ್ನು ಅದರಲ್ಲಿ ನೀಡುತ್ತಿದ್ದೆವು. ಆದುದರಿಂದ ಸುದ್ದಿಬಿಡುಗಡೆ ಪತ್ರಿಕೆ ಪ್ರಾರಂಭಿಸುವಾಗ ಅದರೊಂದಿಗೆ ಉಚಿತ ಸುದ್ದಿ ಮಾಹಿತಿ ಕೇಂದ್ರ ಹಾಗೂ ಸೇವೆಗಳಿಗಾಗಿ ಸುದ್ದಿ ಸೆಂಟರ್‌ಗಳನ್ನು ಪ್ರಾರಂಭಿಸಿದ್ದೆವು.
ಪತ್ರಿಕೆಯ ವರದಿಗಿಂತ ಜನರಿಗೆ ಬೇಕಾದ ವಿವಿಧ ಮಾಹಿತಿಗಳು ಅದರಲ್ಲಿ ಹೆಚ್ಚಾಗಿ ಇರುತ್ತಿದ್ದವು. ಉದಾ: ಶಿಕ್ಷಣ, ಉದ್ಯೋಗ, ಆರೋಗ್ಯ, ಮಾಹಿತಿ, ಕೃಷಿ, ಮಾರಾಟ ಖರೀದಿಗಳ ವಿವರಗಳು, ದೈನಂದಿನ ಚಟುವಟಿಕೆಗಳು, ಶಾಸಕರ, ಜನಪ್ರತಿನಿಧಿಗಳ, ಇಲಾಖಾ ಮಾಹಿತಿಗಳು ಅದರಲ್ಲಿ ಪ್ರಾಮುಖ್ಯತೆ ಪಡೆದಿದ್ದವು. (ಈಗಲೂ ಅವುಗಳಲ್ಲಿ ಹೆಚ್ಚಿನವು ಮುಂದುವರಿದಿದೆ.) ತಾಲೂಕಿನ ಎಲ್ಲಾ ಕಸುಬುದಾರರ ವೃತ್ತಿ ವಿಳಾಸ, ಫೋನ್ ನಂಬರ್‌ಗಳನ್ನು ಗ್ರಾಮವಾರು ಸಂಗ್ರಹಿಸಿದ್ದೆವು. ಆ ಕುರಿತು ಮಾಹಿತಿ ಪುಸ್ತಕವನ್ನೂ ಬಿಡುಗಡೆಗೊಳಿಸಿದ್ದೆವು. ಒಂದು ಕಾಲದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿಗೆ ಬರುವವರು, ಮಂಗಳೂರು, ಬೆಂಗಳೂರಿಗೂ ಹೋಗುವವರು ತಮಗೆ ಬೇಕಾದ ಮಾಹಿತಿ ಮತ್ತು ಸೇವೆಗಾಗಿ ಸುದ್ದಿ ಸೆಂಟರ್ ಸಂಪರ್ಕಿಸುತ್ತಿದ್ದರು ಅಥವಾ ಭೇಟಿ ನೀಡುತ್ತಿದ್ದರು. ಸುದ್ದಿ ಪತ್ರಿಕೆ ಮತ್ತು ವೆಬ್‌ಸೈಟ್ ಮಾಹಿತಿ ಸಂಗ್ರಹಕ್ಕೆ ವಿತರಣೆಗೆ ಸಹಕಾರಿಯಾಗಿತ್ತು. ತಂತ್ರಜ್ಞಾನದ ಬೆಳವಣಿಗೆಯಿಂದ ಮೊಬೈಲ್ ಫೋನ್‌ಗಳು, ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದ ಮೇಲೆ ಹಾಗೂ ನಾವು ಪತ್ರಿಕೆ ಮತ್ತು ಸುದ್ದಿ ಚಾನೆಲ್‌ಗೆ ಒತ್ತು ಕೊಡುವ ಅನಿವಾರ್ಯತೆಯಿಂದ, ಸ್ಪರ್ಧೆಯಿಂದ ನಮ್ಮ ಉಚಿತ ಮಾಹಿತಿ ಸೇವೆ ಹಾಗೂ ಸುದ್ದಿ ಸೆಂಟರ್ ಸೇವೆಯನ್ನು ಸ್ವಲ್ಪ ಮಟ್ಟಿಗೆ ಕಡೆಗಣಿಸಿದ್ದೇವೆ.
ಇದೀಗ ಆ ಎಲ್ಲಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುದ್ದಿ ಮಾಹಿತಿಯನ್ನು ಸಮಗ್ರವಾಗಿ ಬೆಳೆಸಿ, ಸುದ್ದಿ ಸೆಂಟರ್‌ಗಳನ್ನು ವಿಶ್ವಾಸಪೂರ್ಣ ಉತ್ತಮ ಸೇವೆಯ ಸೆಂಟರ್‌ಗಳನ್ನಾಗಿ ಪುನರುಜ್ಜೀವನಗೊಳಿಸಲಿದ್ದೇವೆ. ಗ್ರಾಮ ಗ್ರಾಮಗಳಲ್ಲಿಯ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಿದ್ದೇವೆ. ಯಾವುದೇ ವ್ಯಕ್ತಿಯ, ಕಸುಬಿನ, ಸೇವೆಯ ಮಾಹಿತಿಗಳು ಸುದ್ದಿ ಸೆಂಟರ್‌ನಲ್ಲಿ ದೊರೆಯುವಂತೆ ಮಾಡಬೇಕೆಂದಿದ್ದೇವೆ. ಕೆಲವೊಂದು ಮಾಹಿತಿಗಳನ್ನು ಜನಾಂದೋಲನದ ರೂಪದಲ್ಲಿ ಜನತೆಗೆ ಪ್ರಯೋಜನಕಾರಿಯಾಗುವಂತೆ ಮಾಡಬೇಕೆಂದಿದ್ದೇವೆ. ಉದಾಃ ಮಳೆಕೊಯ್ಲು. ನೀರಿಲ್ಲದೆ ಜೀವನವೇ ಇಲ್ಲ ಎಂದಿರುವಾಗ ನಮ್ಮೂರಿನಲ್ಲಿ ಮಳೆಯಿಂದ ದೊರಕುವ ನೀರು ಹರಿದು ಸಮುದ್ರಕ್ಕೆ ಹೋಗುವ ಬದಲು ಜನರಿಗೆ ಉಪಯೋಗವಾಗುವಂತೆ ಮಾಡಲು ಛಾವಣಿ ಮಳೆಕೊಯ್ಲು, ಬಾವಿ ಮತ್ತು ಬೋರ್‌ವೆಲ್ ಮರುಪೂರಣ, ಅಂತರ್ಜಲ ವೃದ್ಧಿ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಭೂಮಿ ಮೇಲೆ ಬಿದ್ದ ನೀರು ಹೊರಗೆ ಹರಿದು ಹೋಗದಂತೆ ನಮ್ಮ ನೆಲದ ಅಡಿಯಲ್ಲಿಯೇ ಆ ನೀರನ್ನು ಶೇಖರಿಸಿ ಇಡುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ. ಆ ಜಾಗೃತಿಯ ಬಗ್ಗೆ ಜನಾಂದೋಲನವನ್ನು ಮಾಡುತ್ತಿದ್ದೇವೆ. ಇದರೊಂದಿಗೆ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ, ಮಾರುಕಟ್ಟೆ ಮಾಹಿತಿ, ಅಗತ್ಯವಿರುವ ತರಬೇತಿಗಳನ್ನು ನೀಡುವ ಸುದ್ದಿ ಕೃಷಿ ಅರಿವು ಕೇಂದ್ರವನ್ನು ಪ್ರಾರಂಭಿಸಿದ್ದೇವೆ.