ವಿಟ್ಲ: ಕೇರಳ ಕಡೆಗೆ ಅಕ್ರಮವಾಗಿ ಹೊರಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಸಹಿತ ಮೂವರನ್ನು ವಿಟ್ಲ ಠಾಣಾ ಪೊಲೀಸರು ಕನ್ಯಾನ ಸಮೀಪ ವಶಕ್ಕೆ ಪಡೆದ ಘಟನೆ ನಡೆದಿದೆ.
ಜೂ.26ರಂದು ಸಾಯಂಕಾಲ ವಿಟ್ಲ ಠಾಣಾ ಎಸ್.ಐ. ರತ್ನಕುಮಾರ್ ರವರು ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕನ್ಯಾನ ಶಿವಶಕ್ತಿ ಬಾರ್ ಬಳಿ ವಾಹನ ತಪಾಸಣೆಗಾಗಿ ನಿಂತಿದ್ದ ವೇಳೆ ದೇಲಂತಬೆಟ್ಟು ಕಡೆಯಿಂದ ಸಂಶಯಾಸ್ಪದವಾಗಿ ಬಂದ ಮಹೇಂದ್ರ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಅಕ್ರಮವಾಗಿ ಹೋರಿಯೊಂದನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಳಿಕ ವಾಹನದಲ್ಲಿದ್ದ ಅದರ ಚಾಲಕ ಮೊಹಮ್ಮದ್ ಜೊತೆಗಿದ್ದ ಪುರುಷೋತ್ತಮ ಹಾಗೂ ಯೋಗೀಶ್ ರವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೋರಿಯನ್ನು ಕೇರಳಕ್ಕೆ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೊಂಡುಹೋಗುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಸಹಿತ ಹೋರಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ವನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.