*ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಸರಿಯಾಗಿ ಬರಲಿ-ಸರಕಾರಕ್ಕೆ ಮನವಿ
*ಅಜ್ಜಿನಡ್ಕ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಆಗ್ರಹ
ಪುತ್ತೂರು: ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಬರುತ್ತಿದ್ದ ಸ್ಕಾಲರ್‌ಶಿಪ್ ಕಳೆದೆರಡು ವರ್ಷಗಳಿಂದ ಸರಿಯಾಗಿ ಬರುತ್ತಿಲ್ಲ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಪುಣಚ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಪುಣಚ ಗ್ರಾಮ ಪಂಚಾಯತ್‌ನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ಯಶೋಧಾ ಯಾನೆ ಬೇಬಿಯವರ ಅಧ್ಯಕ್ಷತೆಯಲ್ಲಿ ಜೂ.26 ರಂದು ಗ್ರಾಪಂ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು. ವೆಂಕಟ್ರಮಣ ಪುಣಚರವರು ವಿಷಯ ಪ್ರಸ್ತಾಪಿಸಿ, ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬರಬೇಕಾದ ಸ್ಕಾಲರ್‌ಶಿಪ್ ಸರಿಯಾಗಿ ಬರುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರು, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೂ ಸರಿಯಾದ ಸಮಯದಲ್ಲಿ ಸ್ಕಾಲರ್‌ಶಿಪ್ ಬರುತ್ತಿಲ್ಲ ಎಂದು ರಹೀಮ್ ನಟ್ಟಿ ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಗ್ರಾಪಂ ಅಭಿವೃದ್ದಿ ಅಧಿಕಾರಿ ರವಿಯವರು, ಗ್ರಾಮಸ್ಥರ ಬೇಡಿಕೆಯಂತೆ ನಾವು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಈ ಬಗ್ಗೆ ಬರೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಅದರಂತೆ ನಿರ್ಣಯಿಸಲಾಯಿತು.
ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ
ಪುಣಚ ಗ್ರಾಮವು ಸುಮಾರು 9 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮವಾಗಿದ್ದು ಇಲ್ಲಿನ ಅಜ್ಜಿನಡ್ಕದಲ್ಲಿರುವ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಶ್ರೀಧರ ಶೆಟ್ಟಿ ಬೈಲುಗುತ್ತು ಆಗ್ರಹಿಸಿದರು. ಇದಕ್ಕೆ ದ್ವನಿಗೂಡಿಸಿದ ವಿಶ್ವನಾಥ ರೈ ಕೋಡಂದೂರುರವರು, ಅಜ್ಜಿನಡ್ಕ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಬಹಳ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ ಎಂದು ಅಭಿನಂದನೆ ತಿಳಿಸಿ, ಆಸ್ಪತ್ರೆಗೆ ಸರಿಯಾದ ಔಷಧಿಗಳು ಬರುವ ವ್ಯವಸ್ಥೆ ಆಗಬೇಕು ಇದೊಂದು ಒಳ್ಳೆಯ ಆಸ್ಪತ್ರೆಯಾಗಿದೆ. ಇದನ್ನು ಮೇಲ್ದರ್ಜೆಗೆ ಏರಿಸುವುದು ಅತೀ ಅವಶ್ಯವಾಗಿದೆ ಎಂದು ಹೇಳಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸಿ
ರಾಜ್ಯ ವಿಧಾನಸಭಾ ಅಧಿವೇಶನದಲ್ಲೂ ಶಾಸಕ ಅಶೋಕ್ ಕುಮಾರ್ ರೈ, ಸ್ಪೀಕರ್ ಯು.ಟಿ ಖಾದರ್‌ರವರು ತುಳು ಭಾಷೆಯನ್ನು ಮಾತನಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ತುಳು ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರಿಸುವ ಬಗ್ಗೆ ಹೋರಾಟ ನಡೆಯುತ್ತಾ ಬಂದಿದ್ದರೂ ಇಂದಿಗೂ ಸಾಧ್ಯವಾಗಿಲ್ಲ ಆದ್ದರಿಂದ ಗ್ರಾಮಸಭೆಯ ಮೂಲಕ ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ, ತುಳು ಭಾಷೆಯನ್ನು ಈ ಕೂಡಲೇ 8 ನೇ ಪರಿಚ್ಛೇಧಕ್ಕೆ ಸೇರಿಸುವ ಕೆಲಸ ಆಗಬೇಕು ಎಂದು ವಿಶ್ವನಾಥ ರೈ ಕೋಡಂದೂರು ಆಗ್ರಹಿಸಿದರು. ಇವರು ಈ ಹಿಂದೆಯೂ ಗ್ರಾಮಸಭೆಯಲ್ಲಿ ಈ ಬಗ್ಗೆ ಆಗ್ರಹಿಸಿದ್ದು ಅಲ್ಲದೆ ತುಳುವಿನಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದರು.
13 ಕಿ.ಮೀಗೆ 25 ರೂಪಾಯಿ..!?
ಪರಿಯಾಲ್ತಡ್ಕದಿಂದ ಪುತ್ತೂರಿಗೆ ಇರುವ ದೂರ 13 ಕಿ.ಮೀ ಅದೇ ರೀತಿ ಪುತ್ತೂರಿನಿಂದ ಉಪ್ಪಿನಂಗಡಿಗೆ ಇರುವ ದೂರ ಕೂಡ 13 ಕಿ.ಮೀ ಆಗಿದೆ. ಪರಿಯಾಲ್ತಡ್ಕದಿಂದ ಪುತ್ತೂರಿಗೆ ಸರಕಾರಿ ಬಸ್ಸಿಗೆ ಒಬ್ಬರಿಗೆ ಟಿಕೇಟ್‌ಗೆ 25 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ. ಆದರೆ ಪುತ್ತೂರಿನಿಂದ ಉಪ್ಪಿನಂಗಡಿಗೆ ಒಬ್ಬರಿಗೆ 15 ರೂಪಾಯಿ. ಈ ರೀತಿಯ ತಾರತಮ್ಯ ಯಾಕೆ? ಎಂದು ಪ್ರಶ್ನಿಸಿದ ಶ್ರೀಧರ ಶೆಟ್ಟಿ ಬೈಲುಗುತ್ತುರವರು ಈ ಬಗ್ಗೆ ಆರ್‌ಟಿಓಗೆ ಬರೆದುಕೊಳ್ಳುವಂತೆ ತಿಳಿಸಿದರು.
ಪರಿಯಾಲ್ತಡ್ಕಕ್ಕೆ ಪೊಲೀಸರು ಬರಬೇಕು
ಪುಣಚ ಪರಿಯಾಲ್ತಡ್ಕ ಪೇಟೆಯಲ್ಲಿ ಸಂಜೆ ಸಮಯ ಸಮಯ ಬೇಕಾಬಿಟ್ಟಿ ವಾಹನ ಚಾಲನೆ ಮಾಡುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸಂಚಾರ ನಿಯಂತ್ರಣಕ್ಕಾಗಿ ಸಂಜೆ ಸಮಯ ಪರಿಯಾಲ್ತಡ್ಕ ಪೇಟೆಗೆ ಪೊಲೀಸರು ಬರಬೇಕು ಎಂದು ಗ್ರಾಮಸ್ಥರು ತಿಳಿಸಿದರು.
ಅಗ್ರಾಳ-ಪದವು ಸಂಪರ್ಕ ರಸ್ತೆ ಶೀಘ್ರ ಆಗಲಿ
ಅಗ್ರಾಳ-ಪದವು ಸಂಪರ್ಕ ರಸ್ತೆ ಬಗ್ಗೆ ಏನಾಗಿದೆ ಎಂದು ವಿಶ್ವನಾಥ ರೈ ಕೋಡಂದೂರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಭಿವೃದ್ದಿ ಅಧಿಕಾರಿ ರವಿಯವರು ಈ ರಸ್ತೆ ವಿವಾದವು ಪ್ರಸ್ತುತ ಕೋರ್ಟ್‌ನಲ್ಲಿ ವಾದ ನಡೆಯುತ್ತಿದೆ ಎಂದು ತಿಳಿಸಿದರು. ಅದು ಏನೇ ಇರಲಿ ನಮಗೆ ಸಂಪರ್ಕ ರಸ್ತೆಯ ಅಗತ್ಯತೆ ಇದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಬೇಕು ಎಂದು ವಿಶ್ವನಾಥ ರೈ ಆಗ್ರಹಿಸಿದರು.
ರಸ್ತೆಗೆ ಕಾಂಕ್ರಿಟೀಕರಣ ಮಾಡಿ ಕೊಡಿ
ಬಾನು ಕುಮೇರಿ, ಪುಲಿತ್ತಡಿ, ದಂಡುಮೂಲೆ ವ್ಯಾಪ್ತಿಯಲ್ಲಿ ಸುಮಾರು 16 ಕ್ಕೂ ಅಧಿಕ ಎಸ್‌ಟಿ ಮನೆಗಳಿದ್ದು ಈ ಭಾಗದ ರಸ್ತೆಗೆ ಕಾಂಕ್ರಿಟೀಕರಣ ಹಾಗೂ ತಡೆಗೋಡೆಯ ಅವಶ್ಯಕತೆ ಇದೆ. 2005ರಿಂದ ಮನವಿ ಮಾಡುತ್ತಾ ಬಂದರೂ ರಸ್ತೆ ಸಂಪೂರ್ಣ ಕಾಂಕ್ರಿಟೀಕರಣವಾಗಿಲ್ಲ ಎಂದು ತಿಮ್ಮಣ್ಣ ನಾಯ್ಕ ತಿಳಿಸಿದರು.
ಮಿಂಚು ನಿರೋಧಕ ಟವರ್ ಬೇಕು
ಈಗಾಗಲೇ ಶಾಸಕರು ಕೆಲವು ಕಡೆಗಳಲ್ಲಿ ಮಿಂಚು ನಿರೋಧಕ ಟವರ್ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ. ನಮ್ಮ ವಿಟ್ಲ ಗ್ರಾಮದ ಪುಣಚಕ್ಕೂ ಒಂದು ಮಿಂಚು ಬಂಧಕ ಟವರ್‌ನ ಅವಶ್ಯಕತೆ ಇದೆ ಈ ಬಗ್ಗೆ ಶಾಸಕರ ಗಮನಕ್ಕೆ ತರುವ ಅವಶ್ಯಕತೆ ಇದೆ ಎಂದು ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದರು.
ನೋಡೆಲ್ ಅಧಿಕಾರಿಯಾಗಿ ಸಮಾಕಲ್ಯಾಣ ಇಲಾಖೆಯ ಅಧಿಕಾರಿ ವಿನಯ ಕುಮಾರಿ ಸಭೆಯನ್ನು ನಡೆಸಿಕೊಟ್ಟರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರುಗಳಾದ ಲಲಿತಾ, ಗಿರಿಜ, ಪ್ರತಿಭಾ ಜಗನ್ನಾಥ, ಗಂಗಮ್ಮ, ರವಿ, ರಾಮಕೃಷ್ಣ ಪೂಜಾರಿ ಮೂಡಂಬೈಲು, ಹರೀಶ್ ಪೂಜಾರಿ, ಸರೋಜಿನಿ, ಸುಜಾತ, ರೇಖಾ, ತೀರ್ಥಾರಾಮ, ಅಶೋಕ್ ಕುಮಾರ್, ಆನಂದ ನಾಯ್ಕ, ವಾಣಿಶ್ರೀ, ರಾಜೇಶ್ ನಾಯ್ಕ, ಶಾರದಾರವರುಗಳು ಉಪಸ್ಥಿತರಿದ್ದರು. ಗ್ರಂಥಪಾಲಕಿ ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಅಭಿವೃದ್ಧಿ ಅಧಿಕಾರಿ ರವಿ ಸ್ವಾಗತಿಸಿ, ಪಂಚಾಯತ್ ಬಗ್ಗೆ ಮಾಹಿತಿ ನೀಡಿದರು. ದ್ವಿತೀಯ ದರ್ಜೆ ಲೆಕ್ಕಸಹಾಯಕಿ ಪಾರ್ವತಿ ವರದಿ ವಾಚನ ಮಾಡಿದರು. ಸಿಬ್ಬಂದಿ ಸತ್ಯಪ್ರಕಾಶ ವಂದಿಸಿದರು. ಸಿಬ್ಬಂದಿಗಳಾದ ಮಮತಾ ಕಜೆಮಾರ್, ರೇಷ್ಮಾ ಕೂರೇಲು, ಉಸ್ಮಾನ್, ಅಭಿಷೇಕ್,ಮುರಳೀಧರ ಸಹಕರಿಸಿದ್ದರು.
ಪುಣಚ ಗ್ರಾಮವನ್ನು ಡಿವೈಡ್ ಮಾಡಿ,ಪ್ರತ್ಯೇಕ ಪಂಚಾಯತ್‌ನ ಅವಶ್ಯಕತೆ ಇದೆ
ತಾಲೂಕಿನ ಎರಡನೇ ಅತೀ ದೊಡ್ಡ ಗ್ರಾಮ ಎಂದೇ ಗುರುತಿಸಿಕೊಂಡಿರುವ ಪುಣಚ ಗ್ರಾಮದಲ್ಲಿ 9 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ.ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮವನ್ನು ಡಿವೈಡ್ ಮಾಡಿ ಪ್ರತ್ಯೇಕ ಪಂಚಾಯತ್‌ನ ಮಾಡಬೇಕಾದ ಅಗತ್ಯತೆ ಇದೆ.ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಪತ್ರಕರ್ತ ರಮೇಶ್ ಕೋಡಂದೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಭಿಕ್ಷುಕರ ಬಗ್ಗೆ ಪುನರ್ವಸತಿ ಕೇಂದ್ರ ಗಮನ ಹರಿಸಬೇಕು
ಪ್ರತಿ ಪಂಚಾಯತ್‌ನಲ್ಲಿ ಒಂದು ಭಿಕ್ಷುಕರ ಕರ ಎಂದು ಇದೆ. ಇದು ಎಂತದ್ದು? ಈ ಕರ ಎಲ್ಲಿಗೆ ಹೋಗುತ್ತದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒರವರು ಇದು ಸರಕಾರಕ್ಕೆ ಸಲ್ಲಿಸಬೇಕಾದ ತೆರಿಗೆ ಆಗಿದೆ ಎಂದರು. ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಈ ತೆರಿಗೆ ಹೋಗುತ್ತಿದ್ದರೂ ಭಿಕ್ಷುಕರ ಬಗ್ಗೆ ಪುನರ್ವಸತಿ ಕೇಂದ್ರದವರು ಗಮನ ಹರಿಸುತ್ತಿಲ್ಲ, ಎಲ್ಲಾದರೂ ಭಿಕ್ಷುಕರ ಕಂಡು ಬಂದರೆ ಆ ಊರಿನವರೇ ಅವರನ್ನು ಉಪಚರಿಸಬೇಕಾಗುತ್ತದೆ. ಈ ರೀತಿಯಾಗಿ ಸರಕಾರಕ್ಕೆ ಪ್ರತಿ ಪಂಚಾಯತ್‌ನಿಂದ ಭಿಕ್ಷುಕರ ಕರ ಸಂದಾಯ ಆಗುತ್ತಿದ್ದರೂ ಸರಕಾರ ಭಿಕ್ಷುಕರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
400 ಕೆ.ವಿ ವಿದ್ಯುತ್ ಲೈನ್‌ಗೆ ಆಕ್ಷೇಪ ಕಾಮಗಾರಿ ನಿಲ್ಲಿಸುವಂತೆ ಆಗ್ರಹ
400ಕೆ.ವಿ ಉಡುಪಿ ಕಾಸರಗೋಡು ಟ್ರಾನ್ಸ್‌ಮಿಷನ್ ಲೈನ್(ಯುಕೆಟಿಎಲ್) ಕಾಮಗಾರಿ ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ ಆರಂಭವಾಗುತ್ತಿರುವುದರಿಂದ ರೈತರಲ್ಲಿ ಆತಂಕ ಉಂಟಾಗಿದೆ. ಈ ಲೈನ್ ಪುಣಚ ಗ್ರಾಮದ ಕೊಲ್ಲಪದವು ಮೂಲಕ ಹಾದು ಹೋಗುತ್ತಿದೆ. ಇದರಿಂದ ಜನರಿಗೆ ಬಹಳಷ್ಟು ರೋಗ ಬಾಧೆಗಳು ಕೂಡ ಬರುವ ಅಪಾಯವಿದೆ. ಆದ್ದರಿಂದ ಇದಕ್ಕೆ ಕೃಷಿಕರ, ಗ್ರಾಮಸ್ಥರ ತೀವ್ರ ವಿರೋಧ ಇದೆ, ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಎನ್ನುವ ನಮ್ಮ ಆಗ್ರಹ ಎಂದ ಶ್ರೀಧರ ಶೆಟ್ಟಿ ಬೈಲುಗುತ್ತುರವರು ಈ ಬಗ್ಗೆ ಗ್ರಾಮಸ್ಥರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.