ಪುತ್ತೂರು: ಗ್ರಾಮದಲ್ಲಿ ಯಾವುದೇ ಅವಘಡ ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಕೆಯ್ಯೂರು ಗ್ರಾಪಂ ಅಧಿಕಾರಿಗಳು ಗ್ರಾಮ ಭೇಟಿ ಮಾಡಿ ಅಪಾಯವಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ‘ಅಪಾಯವಿದೆ ಎಚ್ಚರಿಕೆ’ ಎಂಬ ಸೂಚನಾ ಫಲಕ ಅಳವಡಿಸಿದ್ದಾರೆ. ಗ್ರಾಮದ ಪಲ್ಲತ್ತಡ್ಕ ಎಂಬಲ್ಲಿರುವ ಕಿಂಡಿ ಅಣೆಕಟ್ಟು ಬಳಿ, ದೇರ್ಲ ಎಂಬಲ್ಲಿ ತೋಡಿಗೆ ಅಡಿಕೆ ಮರದ ಪಾಲ ಅಳವಡಿಸಿದ್ದು, ದೇರ್ಲ ನೆಟ್ಟಾಳ ಸಂಪರ್ಕ ರಸ್ತೆಯಲ್ಲಿ ಧರೆ ಕುಸಿತದ ಹಿನ್ನೆಲೆಯಲ್ಲಿ ಹಾಗೇ ಮಾಡಾವು ಕಜೆ ಎಂಬಲ್ಲಿ ಅಪಾಯಕಾರಿ ಕೆರೆ ಇದ್ದು ಈ ಕಡೆಗಳಲ್ಲಿ ಅಪಾಯವಿದೆ ಎಚ್ಚರಿಕೆ ಎಂಬ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ತುಂಬಿ ಹರಿಯುತ್ತಿರುವ ನದಿ, ತೋಡು ಇತ್ಯಾದಿ ಕಡೆಗಳಲ್ಲಿ ಫಲಕ ಅಳವಡಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದು ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಅದರಂತೆ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹಾಗೂ ಸಿಬ್ಬಂದಿ ರಾಕೇಶ್‌ರವರುಗಳ ಗ್ರಾಮ ಭೇಟಿ ಮಾಡುವ ಮೂಲಕ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಫಲಕ ಅಳವಡಿಸಿದ್ದಾರೆ.
‘ ಗ್ರಾಮದಲ್ಲಿ ಯಾವುದೇ ಅಪಾಯ, ಜೀವ ಹಾನಿ ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡುವ ಸಲುವಾಗಿ ಗ್ರಾಮದಲ್ಲಿರುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ್ದೇವೆ. ಭಾರೀ ಮಳೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ. ಗ್ರಾಮಸ್ಥರು ನಮ್ಮೊಂದಿಗೆ ಸಹಕರಿಸಬೇಕಾಗಿದೆ.’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ