ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಬೋಧನಾ ಸಾಮರ್ಥ್ಯ ಉತ್ತೇಜನ ಕಾರ್ಯಕ್ರಮ

0

ವಿದ್ಯಾರ್ಥಿಗಳ ಮನಸ್ಸನ್ನು ನಿಯಂತ್ರಿಸುವ ಕಲೆ ಸಿದ್ಧಿಸಬೇಕು : ಡಾ.ರಾಮಚಂದ್ರ ಗುರೂಜಿ

ಪುತ್ತೂರು: ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಮಾಡಬೇಕಾದರೆ ಮನಸ್ಸಿನ ಸ್ಥಿತಿಗಳನ್ನು ಮೊದಲಿಗೆ ಅರ್ಥಮಾಡಿಕೊಳ್ಳಬೇಕು. ನಮ್ಮೆದುರಿಗಿರುವ ಮಕ್ಕಳ ಮನಸ್ಸನ್ನು ಹತೋಟಿಗೆ ತೆಗೆದುಕೊಂಡರೆ ನಾವು ಬೋಧಿಸಿದ ಸಂಗತಿಗಳು ಸುಲಭ ಸಾಧ್ಯವಾಗಿ ಮಕ್ಕಳ ತಲೆಯೊಳಗೆ ಅಚ್ಚೊತ್ತಿಬಿಡುತ್ತವೆ. ಹಾಗಾಗಿ ಶಿಕ್ಷಕರಾದವರು ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗಗುರು ಡಾ.ರಾಮಚಂದ್ರ ಗುರೂಜಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಅಂಬಿಕಾ ಹಾಗೂ ನರಿಮೊಗರಿನ ಸಾಂದೀಪನಿ ಶಿಕ್ಷಣ ಸಂಸ್ಥೆಗಳ ಬೋಧಕರಿಗಾಗಿ ಆಯೋಜಿಸಲಾದ ಎರಡು ದಿನಗಳ ಬೋಧನಾ ಸಾಮರ್ಥ್ಯ ಉತ್ತೇಜನ ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿ ನೀಡಿದರು.


ಜಾಗೃತ್, ಸ್ವಪ್ನಾ, ಸುಶುಪ್ತಿ ಹಾಗೂ ತುರೀಯಾ ಎಂಬ ನಾಲ್ಕು ಬಗೆಯ ಪ್ರಜ್ಞಾವಸ್ಥೆಗಳಿವೆ. ಜಾಗೃತಾವಸ್ಥೆಯಲ್ಲಿರುವಾಗ ಮನಸ್ಸು ಚಂಚಲವಾಗಿರುತ್ತದೆ. ಹಾಗಾಗಿ ಬೋಧಿಸಿದ ವಿಚಾರಗಳು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳನ್ನು ತಲಪುವುದಿಲ್ಲ. ಆದ್ದರಿಂದಲೇ ಸ್ವಪ್ನಾವಸ್ಥೆಯನ್ನು ಕಲಿಕೆಯ ಅತ್ಯಂತ ಉತ್ಕೃಷ್ಟ ಮನಃಸ್ಥಿತಿ ಎಂದು ಗುರುತಿಸಲಾಗಿದೆ. ಕಣ್ತೆರೆದಿದ್ದರೂ ಮನಸ್ಸನ್ನು ಸ್ವಪ್ನಾವಸ್ಥೆಗೆ ಒಯ್ದು ಬೋಧಿಸುವ ಕಲೆ ಶಿಕ್ಷಕರಿಗೆ ಸಿದ್ಧಿಯಾದಾಗ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಾಕಷ್ಟು ಉನ್ನತಿ ಕಾಣದೊರಕುತ್ತದೆ ಎಂದರು.


ಕಷ್ಟಪಟ್ಟು ಓದಬೇಕು ಎಂಬ ಮಾತು ಓದನ್ನು ಅತ್ಯಂತ ಕ್ಲಿಷ್ಟಕರವಾದ ಸಂಗತಿ ಎಂಬಂತೆ ಬಿಂಬಿಸಿಬಿಡುತ್ತದೆ. ಹಾಗಾಗಿ ಇಷ್ಟಪಟ್ಟು ಓದು ಎಂಬ ಕಲ್ಪನೆಯನ್ನು ಮಕ್ಕಳಲ್ಲಿ ತುಂಬಬೇಕು. ಒಮ್ಮೆ ಈ ಚಿಂತನೆ ಮಕ್ಕಳಲ್ಲಿ ಮೂಡಿದರೆ ಓದು ಅವರ ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ ಮಾತ್ರವಲ್ಲದೆ ಓದಿದ್ದು, ಕೇಳಿದ್ದು ಮನಃಪಟಲದಲ್ಲಿ ದೀರ್ಘಕಾಲಿಕವಾಗಿ ಉಳಿದುಬಿಡುತ್ತದೆ ಎಂದರಲ್ಲದೆ ಪರೀಕ್ಷೆ ಪೋಬಿಯಾದಿಂದ ವಿದ್ಯಾರ್ಥಿಗಳನ್ನು ಹೊರತಂದಾಗಲಷ್ಟೇ ನಿರೀಕ್ಷಿತ ಅಂಕಗಳನ್ನು ಅವರು ಪಡೆದುಕೊಳ್ಳಬಹುದು. ಈ ನೆಲೆಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಹಿಂದಾರು ಭಾಸ್ಕರ ಆಚಾರ್ಯ ಮಾತನಾಡಿ ನಾವು ತಿಳಿದವರು ಎಂಬ ಭಾವಕ್ಕಿಂತ ತಿಳಿದುಕೊಳ್ಳುವುದಕ್ಕಿರುವವರು ಎಂಬ ಯೋಚನೆಯೊಂದಿಗೆ ಮುಂದುವರೆದಾಗ ಅತ್ಯುತ್ತಮ ಶಿಕ್ಷಕರಾಗುವುದಕ್ಕೆ ಸಾಧ್ಯ. ಶಿಕ್ಷಣ ಕ್ಷೇತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡವರು ನಿರಂತರವಾಗಿ ಜ್ಞಾನಾರ್ಜನೆ ಮಾಡಿಕೊಳ್ಳುತ್ತಲೇ ಇರಬೇಕು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಹಿಂದೆ ನಳಂದಾ ವಿಶ್ವವಿದ್ಯಾನಿಲಯದಲ್ಲಿ ದ್ವಾರರಕ್ಷಕರು ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಆಯ್ಕೆ ಮಾಡುತ್ತಿದ್ದರೆನ್ನುವ ಇತಿಹಾಸ ನಮ್ಮ ದೇಶದಲ್ಲಿದೆ. ದ್ವಾರರಕ್ಷಕರಿಗೇ ಅಷ್ಟರಮಟ್ಟಿಗಿನ ಜ್ಞಾನವಿದ್ದಿದ್ದರೆ ಬೋಧಕರಿಗೆ ಮತ್ತೆಷ್ಟಿದ್ದಿರಬಹುದೆಂದು ನಾವು ಊಹಿಸಬಹುದು. ಇಂತಹ ಉತ್ಕೃಷ್ಟ ಶಿಕ್ಷಕರಿದ್ದಾಗ ಮಾತ್ರ ದೇಶ ರೂಪುಗೊಳ್ಳುತ್ತದೆ. ಆ ನೆಲೆಯಲ್ಲಿ ಶಿಕ್ಷಕರು ಪ್ರತಿಕ್ಷಣವೂ ತಮ್ಮನ್ನು ತಾವು ಎತ್ತರಕ್ಕೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ದೇಶಭಕ್ತಿ, ಧರ್ಮ ಜಾಗೃತಿಯಂತಹ ಸಂಗತಿಗಳು ಶಿಕ್ಷಕರ ಮುಖೇನ ಆಗಬೇಕಿದೆ. ನಮ್ಮ ಮುಂದಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ಪೂರಕವಾಗಿ ಬೆಳೆಸುವ ಹೊಣೆ ನಮ್ಮೆದುರಿಗಿದೆ. ಆದ್ದರಿಂದ ಶಿಕ್ಷಕರು ನಿರಂತರವಾಗಿ ತಮ್ಮನ್ನು ತಾವು ಹೊಸ ವಿನೂತನ ಸಂಗತಿಗಳೆಡೆಗೆ ತೆರೆದುಕೊಳ್ಳುತ್ತಲೇ ಇರಬೇಕು. ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಬೋಧಿಸಬಲ್ಲ ಅತ್ಯುತ್ತಮ ಶಿಕ್ಷಕರಾಗುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಶಿಕ್ಷಕಿ ಗೌರಿ ಸ್ವಾಗತಿಸಿದರು. ಶಿಕ್ಷಕಿ ರಮ್ಯ ಪ್ರಾರ್ಥಿಸಿದರು. ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ.ರಾಮಚಂದ್ರ ಗುರೂಜಿಯವರಿಂದ ಎರಡು ದಿನಗಳ ತರಬೇತಿ ಕಾರ್ಯಕ್ರಮ ಆರಂಭಗೊಂಡಿತು.


LEAVE A REPLY

Please enter your comment!
Please enter your name here