ಅಂಬಿಕಾದಲ್ಲಿ ಪ್ರಾತ್ಯಕ್ಷತೆ ಸಹಿತ ಮನೋದೈಹಿಕ ಸಾಧ್ಯತೆಗಳ ಅನಾವರಣ

0

ಭವಿಷ್ಯ ಮತ್ತು ಗತ ಜೀವನಗಳನ್ನು ಹೇಳುವ ಶಕ್ತಿ ಮನುಷ್ಯನಿಗಿದೆ : ಡಾ.ರಾಮಚಂದ್ರ ಗುರೂಜಿ

ಪುತ್ತೂರು: ಮನುಷ್ಯನೊಳಗೆ ಅಪರಿಮಿತವಾದ ಸಾಮರ್ಥ್ಯಗಳಿವೆ. ಹಿಂದಿನ ಮತ್ತು ಮುಂದಿನ ಎರಡೂ ಜೀವನಗಳನ್ನು ನಿಖರವಾಗಿ ಹೇಳಬಲ್ಲ ಶಕ್ತಿಗಳಿವೆ. ಒಮ್ಮೆ ಆ ಬಗೆಗಿನ ಅಧ್ಯಯನ, ಆಸಕ್ತಿ ಬೆಳೆಸಿಕೊಂಡರೆ ಅದರಿಂದ ವಿಮುಖರಾಗುವುದು ಕಷ್ಟ. ಅದೊಂದು ಅದ್ಭುತ ಮನೋಲೋಕ. ಅದರೊಳಗೆ ತಜ್ಞರಾದವರು ಪ್ರವೇಶಿಸಿ ಮನುಷ್ಯನನ್ನು ಸಾಧನೆಯ ಪಥದೆಡೆಗೆ ಅಡಿಯಿಡುವಂತೆ ಪ್ರೇರೇಪಿಸುವುದಕ್ಕೆ ಸಾಧ್ಯ ಎಂದು ಬೆಂಗಳೂರಿನ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು ಡಾ.ರಾಮಚಂದ್ರ ಗುರೂಜಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಅಂಬಿಕಾ ಹಾಗೂ ನರಿಮೊಗರಿನ ಸಾಂದೀಪನಿ ಶಿಕ್ಷಣ ಸಂಸ್ಥೆಗಳ ಬೋಧಕರಿಗಾಗಿ ಆಯೋಜಿಸಲಾದ ಎರಡು ದಿನಗಳ ಬೋಧನಾ ಸಾಮರ್ಥ್ಯ ಉತ್ತೇಜನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭಾನುವಾರ ಮಾತನಾಡಿದರು.

ಮನುಷ್ಯ ಸಾಮರ್ಥ್ಯ ಎಷ್ಟಿದೆಯೆಂದರೆ ನಮ್ಮನ್ನೇ ನಾವು ಸಮ್ಮೋಹನಗೊಳಿಸಿ ನಿರ್ದಿಷ್ಟ ಕಾರ್ಯಸಾಧನೆಯೆಡೆಗೆ ಮುನ್ನಡೆಸಬಹುದು. ಮತ್ತೊಬ್ಬರ ದೇಹಗಂಧದ ಆಧಾರದ ಮೇಲೆ ವ್ಯಕ್ತಿತ್ವ ನಿರ್ಣಯಿಸಬಹುದು. ಅಪರಾಧಿಗಳನ್ನು ಗುರುತಿಸಬಹುದು. ವಾಸನೆ ಗ್ರಹಿಕೆಯ ಮೂಲಕ ನಿರ್ದಿಷ್ಟ ವ್ಯಕ್ತಿಗಳನ್ನು ಕಂಡುಹಿಡಿಯುವುದಕ್ಕೆ ಶ್ವಾನಗಳನ್ನು ಬಳಸುವುದು ಸಹಜ. ಅದನ್ನೇ ಮನುಷ್ಯರ ಮೂಲಕವೂ ಸಾಧಿಸಬಹುದು ಮತ್ತು ಶ್ವಾನಗಳಿಗಿಂತ ಹೆಚ್ಚು ಸಾಮರ್ಥ್ಯವನ್ನು ಮನುಷ್ಯರಲ್ಲಿ ಕಾಣಬಹುದು ಎಂದರು.

ಸಮ್ಮೋಹನಗೊಳಿಸುವುದು ಒಂದು ಕಲೆ. ಅದನ್ನು ಯಾರು ಬೇಕಾದರೂ ಕರಗತ ಮಾಡಿಕೊಳ್ಳಬಹುದು. ಆದರೆ ಒಂದಷ್ಟು ನಿಯಮಾವಳಿಗಳನ್ನು ಪಾಲಿಸುವುದು ಅನಿವಾರ್ಯ. ಯೋಚನೆ, ಭಾವನೆಗಳಿಂದ ಕೂಡಿದ ಮನಸ್ಸು ಮಾತ್ರ ಮಾಹಿತಿಯನ್ನು ತನಗೆ ಬೇಕಾದಂತೆ ಪರಿವರ್ತಿಸಿ ಹೊರಚೆಲ್ಲುತ್ತದೆ. ಆದರೆ ಸ್ವಪ್ನಾವಸ್ಥೆಗೆ ತೆರಳಿದ ಮನಸ್ಸು ಸತ್ಯವನ್ನಷ್ಟೇ ನುಡಿಯುತ್ತದೆ. ಸಮ್ಮೋಹನಕ್ಕೆ ಒಳಗಾಗುವ ವ್ಯಕ್ತಿ ಸ್ಪಂದಿಸುವವನಾಗಿದ್ದರೆ ಯಾವುದೇ ಔಷಧಗಳ ಅವಶ್ಯಕತೆ ಇಲ್ಲದೆ ಮಾಹಿತಿ ಪಡೆಯಬಹುದು. ಆದರೆ ಅಪರಾಧಿಗಳು, ತಪ್ಪಿಸಿಕೊಳ್ಳುವ ಮನಸ್ಥಿತಿಯುಳ್ಳವರು ಸ್ಪಂದಿಸದಿದ್ದಾಗ ಔಷಧಗಳ ಮೂಲಕ ಮಂಪರು ಪರೀಕ್ಷೆಯಂತಹದ್ದನ್ನು ನಡೆಸಬೇಕಾಗುತ್ತದೆ ಎಂದರು.

ಮೊದಲು ನಮ್ಮ ನಮ್ಮ ಮನೆಗಳಲ್ಲಿ ನಮ್ಮ ಮಕ್ಕಳ ಮೇಲೆ ಸಮ್ಮೋಹನ ಸಾಧ್ಯತೆಯನ್ನು ಜಾರಿಗೊಳಿಸಬೇಕು. ನಿಧಾನಕ್ಕೆ ಅದರಲ್ಲಿ ಪಕ್ವತೆ ಸಾಧಿಸುತ್ತಾ ಮುಂದಿನ ವ್ಯಕ್ತಿಯ ಬದುಕು, ವೈಯಕ್ತಿಕ ಕಷ್ಟ ಸುಖ, ಸಾಧನೆ ಇತ್ಯಾದಿಗಳಲ್ಲದೆ ಸಾವಿನ ಕುರಿತಾಗಿಯೂ ನಿಖರ ವಿಚಾರಗಳನ್ನು ಪಡೆದುಕೊಳ್ಳಬಹುದು. ಹದಿನೈದು ವರ್ಷದೊಳಗಿನ ಮಕ್ಕಳನ್ನು ಸುಲಭಕ್ಕೆ ಸಮ್ಮೋಹನಕ್ಕೆ ಒಳಪಡಿಸಬಹುದು ಎಂದು ಸಮ್ಮೋಹನದ ಕಲೆಯನ್ನು ಕಲಿಸಿಕೊಟ್ಟರು.

ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ಮುಖ್ಯ ಗುರು ಜಯಮಾಲಾ, ಬೋಧಕ – ಬೋಧಕೇತರ ವೃಂದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here