ನರೇಗಾದಲ್ಲಿ ತಡೆಗೋಡೆ ನಿರ್ಮಿಸಲು ಅವಕಾಶ ನೀಡಬೇಕು- ಸದಸ್ಯರ ಆಗ್ರಹ
ನಿಡ್ಪಳ್ಳಿ :ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷ ವೆಂಕಟರಮಣ ಬೋರ್ಕರ್ ಅಧ್ಯಕ್ಷತೆಯಲ್ಲಿ ಜು.5 ರಂದು ನಡೆಯಿತು.ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅವಿನಾಶ್ ರೈ ನರೇಗಾ ಯೋಜನೆಯಲ್ಲಿ ತಡೆಗೋಡೆ ನಿರ್ಮಿಸಲು ಹಿಂದೆ ಅವಕಾಶ ಇತ್ತು. ಆದರೆ ಈಗ ಅದನ್ನು ರದ್ದುಗೊಳಿಸಿದ್ದು ಅದಕ್ಕೆ ಮತ್ತೆ ಇಲಾಖೆ ಅವಕಾಶ ನೀಡಬೇಕು ಎಂದು ಹೇಳಿದರು. ಅದಕ್ಕೆ ಅಧ್ಯಕ್ಷರು ಮಾತನಾಡಿ ತಡೆಗೋಡೆ ಮತ್ತು ಕಿಂಡಿ ಅಣೆಕಟ್ಟು ನಿರ್ಮಿಸಲು ನರೇಗಾದಲ್ಲಿ ಅವಕಾಶ ನೀಡಲಾಗಿತ್ತು.ಆದರೆ ಅದರ ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ಅದನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.
ವಸತಿ ಯೋಜನೆಗಳ ಮೊತ್ತ ಹೆಚ್ಚಿಸಲು ಆಗ್ರಹ;
ಸರಕಾರದ ವಿವಿಧ ವಸತಿ ಯೋಜನೆಗಳಲ್ಲಿ ಸಿಗುವ ಅನುದಾನದ ಮೊತ್ತ ಕೇರಳಕ್ಕೆ ಹೋಲಿಸಿದರೆ ಇಲ್ಲಿ ಸಿಗುವುದು ಬಹಳ ಕಡಿಮೆ. ಕಚ್ಚಾ ವಸ್ತುಗಳ ಬೆಲೆ ಮತ್ತು ಕೂಲಿ ವೆಚ್ಚ ಏರಿಕೆಯಾದ ಕಾರಣ ಈಗ ಕೊಡುವ ಮೊತ್ತ ಏನೇನೂ ಸಾಲದು. ಆದುದರಿಂದ ಅನುದಾನ ಮೊತ್ತವನ್ನು ಹೆಚ್ಚಿಸುವಂತೆ ಸರಕಾರಕ್ಕೆ ಬರೆಯಲು ಸದಸ್ಯರು ಆಗ್ರಹಿಸಿದರು.
ಚೆಲ್ಯಡ್ಕ ಸೇತುವೆ ಮೇಲೆ ಶಾಲಾ ಬಸ್ಸಿಗೆ ಅವಕಾಶ ನೀಡಲಿ
ಜಿಲ್ಲಾಧಿಕಾರಿಗಳ ಆದೇಶದಂತೆ ಚೆಲ್ಯಡ್ಕ ಸೇತುವೆ ಮೇಲೆ ವಾಹನ ನಿಷೇಧಿಸಿರುವದರಿಂದ ಆ ಭಾಗದ ಶಾಲಾ ಮಕ್ಕಳಿಗೆ ತೊಂದರೆ ಆಗಿದೆ. ಆದುದರಿಂದ ಮಕ್ಕಳ ಹಿತದೃಷ್ಟಿಯಿಂದ ಶಾಲಾ ಮಿನಿ ಬಸ್ಸ್ ಸಂಚರಿಸಲು ಅವಕಾಶ ನೀಡಬೇಕೆಂದು ಅಧ್ಯಕ್ಷ ವೆಂಕಟರಮಣ ಬೋರ್ಕರ್ ಹೇಳಿದರು.
ತಂಬುತ್ತಡ್ಕ ಘನ ತ್ಯಾಜ್ಯ ಘಟಕ ಸೋರುತ್ತಿದೆ
ತಂಬುತ್ತಡ್ಕದಲ್ಲಿರುವ ಘನ ತ್ಯಾಜ್ಯ ಘಟಕದ ಮಾಡು ಸೋರುತ್ತಿದೆ.ಅದರ ದುರಸ್ತಿ ಮಾಡಿ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಶಾಂತದುರ್ಗಾ ಸಂಜೀವಿನಿ ಒಕ್ಕೂಟದ ಭವ್ಯ ಹೇಳಿದರು.ಅದಕ್ಕೆ ಉತ್ತರಿಸಿದ ಅಧ್ಯಕ್ಷರು ಮಳೆಗಾಲ ಮುಗಿದ ತಕ್ಷಣ ಅದರ ದುರಸ್ತಿಗೆ ಅನುದಾನ ಇದೆ. ಸದ್ಯ ಮಾಡಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಮನೆಯಿಂದ ಘನತ್ಯಾಜ್ಯ ಸಂಗ್ರಹಿಸಲು ಈಗಾಗಲೇ ಸುಮಾರು 239 ಮನೆಗಳಿಗೆ ಚೀಲವನ್ನು ವಿತರಿಸಲಾಗಿದೆ. ಕೆಲವು ಮನೆಗಳಿಗೆ ವಿತರಿಸಲು ಬಾಕಿ ಇದೆ ಎಂದು ಹೇಳಿದ ಭವ್ಯರವರು ತ್ಯಾಜ್ಯ ವಿಲೇವಾರಿ ಶುಲ್ಕವನ್ನು ಹೆಚ್ಚಿಸ ಬೇಕು ಎಂದು ಮನವಿ ಮಾಡಿದರು.
ಸದಸ್ಯೆ ಗೀತಾ ಮಾತನಾಡಿ ಗ್ರಾಮದ ಎಲ್ಲಾ ಮನೆಗಳಿಗೆ ಚೀಲ ತಲುಪಿಸುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು. ತ್ಯಾಜ್ಯ ಸಂಗ್ರಹಿಸುವ ಸಂದರ್ಭದಲ್ಲಿ ವಾರ್ಡಿನ ಸದಸ್ಯರು ಕೂಡ ಪ್ರತಿ ಮನೆಗಳಿಗೆ ತೆರಳಬೇಕು ಎಂಬ ಪ್ರಸ್ತಾವವೂ ಕೂಡ ಬಂದಿದೆ ಎಂದು ಹೇಳಿದ ಅಧ್ಯಕ್ಷರು ಸಂಜೀವಿನಿ ಒಕ್ಕೂಟದ ಅಗ್ರಿಮೆಂಟ್ ಒಂದು ತಿಂಗಳಲ್ಲಿ ಮುಗಿಯಲಿದೆ. ನಂತರ ಸಂಬಳ ಮತ್ತು ಕೆಲಸ ಕಾರ್ಯ ಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಎಂದು ಹೇಳಿದರು.
ಉಪಾಧ್ಯಕ್ಷೆ ಸೀತಾ,ಸದಸ್ಯರಾದ ಅವಿನಾಶ್ ರೈ, ಬಾಲಚಂದ್ರ ನಾಯ್ಕ, ಸತೀಶ್ ಶೆಟ್ಟಿ, ಗೀತಾ.ಡಿ, ಗ್ರೇಟಾ ಡಿ’ ಸೋಜಾ, ನಂದಿನಿ ಅರ್.ರೈ ಉಪಸ್ಥಿತರಿದ್ದರು .ಪಿ ಡಿ ಒ ಸಂಧ್ಯಾಲಕ್ಷ್ಮಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು.