ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ದ.ಕ.ಜಿ.ಪಂ. ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಡಿಪಾಡಿ ಇಲ್ಲಿನ ಬಾಲಕಿಯರಿಗೆ ಎಪಿಎಂಸಿ ರಸ್ತೆಯ ಜೆ.ಎಂ.ಜೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವರ್ಷಾಚರಣೆಯ ಸವಿನೆನಪಿಗೆ ‘ನಲಿದು ಕಲಿಯೋಣ ಬದುಕು ರೂಪಿಸೋಣ’ಎಂಬ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಒಂದು ವರ್ಷದ ಸ್ಯಾನಿಟರಿ ಪ್ಯಾಡ್ ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಜು.11 ರಂದು ಶಾಲೆಯಲ್ಲಿ ನೆರವೇರಿತು.
ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ವಿಕ್ಟರ್ ಶರೂನ್ ಡಿ’ಸೋಜರವರು ಸ್ಯಾನಿಟರಿ ಪ್ಯಾಡ್ ಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿ, ಶಾಲೆಯ ಪ್ರಭಾರ ಮುಖ್ಯ ಗುರು ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ರವರು ಸ್ವಂತ ಖರ್ಚಿನಲ್ಲಿ ಹಾಗೂ ಇತರ ಸಂಘಟನೆಗಳನ್ನು ಒಗ್ಗೂಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯವಾಗಿದ್ದು ಜೊತೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿದೆ ಎಂದರು.
ಕುಡಿಪಾಡಿ ಗ್ರಾಮ ಪಂಚಾಯತ್ ಸಿ.ಎಚ್.ಒ ರಾಧಾ ಪಾಟೀಲ್ ಮಾತನಾಡಿ, ಆರೋಗ್ಯದ ದೃಷ್ಟಿಯಲ್ಲಿ ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್ ಬಹಳ ಉಪಯುಕ್ತವಾಗಿದೆ. ಆಭ್ಯುದಯ ಸೌಹಾರ್ದ ಸೊಸೈಟಿಯವರು ಒಂದು ವರ್ಷದ ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸಿಕೊಟ್ಟಿದ್ದು ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಸಿಸ್ಟೆಂಟ್ ಮ್ಯಾನೇಜರ್ ವಿಲ್ಮಾ ಡಿ’ಸೋಜ, ಕುಡಿಪಾಡಿ ಗ್ರಾಮ ಪಂಚಾಯತ್ ಆರೋಗ್ಯ ಸಹಾಯಕಿ ತೇಜಸ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣೇಶ್ ವಂದಿಸಿದರು.