ಜು. 25ರಂದು ಪುತ್ತೂರು ಸಹಾಯಕ ಸಹಕಾರಿ ನಿಬಂಧಕರ ಕಚೇರಿ ಚಲೋ ಕಾರ್ಯಕ್ರಮ; ಸಾಲ ಮನ್ನಾ ವಂಚಿತರ ಪರವಾಗಿ ಹೋರಾಟ – ಮಲೆನಾಡು ಹಿತ ರಕ್ಷಣಾ ವೇದಿಕೆ

0

ಸುಬ್ರಹ್ಮಣ್ಯ: ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಪ್ರದೇಶಗಳನ್ನು ಒಳಗೊಂಡ ಮಲೆನಾಡು ಹಿತ ರಕ್ಷಣಾ ವೇದಿಕೆ ವತಿಯಿಂದ 2018ನೇ ವರ್ಷದ ಸಾಲ ಮನ್ನಾ ಯೋಜನೆಯು ಕಾರ್ಯಗತಗೊಳ್ಳದ ಹಾಗೂ ಸಾಲ ಮನ್ನಾ ವಂಚಿತ ರೈತರೆಲ್ಲರೂ ಸೇರಿ ಜು. 25ರಂದು ಪುತ್ತೂರು ಸಹಾಯಕ ಸಹಕಾರಿ ನಿಬಂಧಕರ ಕಚೇರಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಮಲೆನಾಡು ಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಪತ್ರಿಕಾಗೋಷ್ಠಿಯಲ್ಲಿ ಜು.11ರಂದು ಹೇಳಿದರು. ಅವರು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2018ನೇ ವರ್ಷದಲ್ಲಿ ಸರಕಾರವು ರೈತರಿಗೆ ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ಸುಮಾರು 2,000 ಫಲಾನುಭವಿ ರೈತರು ಸಾಲ ಮನ್ನಾ ಯೋಜನೆಯಿಂದ ವಂಚಿತರಾಗಿದ್ದಾರೆ. ಹಾಗೆಯೇ ಸುಮಾರು 1500 ರೈತರು ಗ್ರೀನ್‌ ಲಿಸ್ಟಿನಲ್ಲಿರುವವರು. ಸುಮಾರು 200 ಮಂದಿ ತಾಂತ್ರಿಕ ಸಮಸ್ಯೆಯಿಂದ ಬಾಕಿ ಉಳಿದಿದ್ದಾರೆ. ಈ ಕುರಿತು ಹಲವು ಬಾರಿ ಸರಕಾರಕ್ಕೆ ಮನವಿಗಳನ್ನು ಸಲ್ಲಿಸಿದರೂ ಸರಕಾರ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಸಮಾಜದ ಕಟ್ಟ ಕಡೆಯ ರೈತರಿಗೂ ಸಾಲ ಸೌಲಭ್ಯ ನೀಡಬೇಕೆಂದು ನಮ್ಮ ಬೇಡಿಕೆ ಎಂದು ಕಿಶೋರ್ ಶಿರಾಡಿ ಹೇಳಿದರು.

ಈ ಬಗ್ಗೆ ಮಲೆನಾಡು ಹಿತ ರಕ್ಷಣಾ ವೇದಿಕೆ ವತಿಯಿಂದ ನಿರಂತರ ಹೋರಾಟ ನಡೆಯುತ್ತಲೇ ಬಂದಿದೆ. 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಯೋಜನೆ ಆದೇಶವಾಗಿತ್ತು. ಆದರೆ ಹಲವು ವರ್ಷ ಕಳೆದರೂ ಕೂಡ ರೈತರಿಗೆ ಆ ಯೋಜನೆ ಭಾಗ್ಯ ಇನ್ನೂ ದೊರೆತಿಲ್ಲ. ಕೆಲವೊಂದು ಸೊಸೈಟಿಗಳಲ್ಲಿ ಫಲಾನುಭವಿಗಳ ಪಟ್ಟಿಯನ್ನುಕೂಡ ಕೊಟ್ಟಿದ್ದಾರೆ. ಆದರೆ ಸರಕಾರದಿಂದ ಇಲ್ಲಿಯವರೆಗೆ ಮಂಜೂರಾಗಿಲ್ಲ. ಈಗ ಯಾವ ರೀತಿ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿವರೆಗೆ ಇದೆಯೋ ಅದೇ ರೀತಿ 2 ಲಕ್ಷ ರೂ ಹೆಚ್ಚಿಸಿ ಮಾಡಿರುವ ವ್ಯವಸ್ಥೆಯನ್ನು ಅದೇ ಪದ್ಧತಿಯಲ್ಲಿ ಕೊಡಬೇಕೆಂದು ವೇದಿಕೆ ಆಗ್ರಹಿಸುತ್ತಿದ್ದು, ಈ ಕುರಿತು ಸಭೆಯಲ್ಲಿ ನಿರ್ಣಯ  ಕೈಗೊಳ್ಳಲಾಗಿದೆ. ಫಲಾನುಭವಿಗಳ ಕಡತವು ಕಚೇರಿಯಲ್ಲಿ ಇದ್ದು ಇದರಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ಕೂಡ ನಡೆದಿದೆ ಎಂದು ಕಿಶೋ‌ರ್ ಶಿರಾಡಿ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಹಿತ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಜಯಪ್ರಕಾಶ್‌ ಕೂಜುಗೋಡು, ಸದಸ್ಯರಾದ ಅಚ್ಯುತ ಗೌಡ ಸುಬ್ರಹ್ಮಣ್ಯ ಹರೀಶ ಬಳ್ಳ, ಮನುದೇವ್ ಪರಮಲೆ, ಭುಕ್ಷಿತ್ ಐನೆಕಿದು, ಯಶೋಧರ ಕೊನಾಜೆ, ರುಕ್ಮಯ ಗೌಡ ಕೊನಾಜೆ, ಧರ್ಮಪಾಲ ಗೌಡ ಪೈಲಾಜೆ, ಮುತ್ತಪ್ಪ ಗೌಡ ಸುಬ್ರಹ್ಮಣ್ಯ, ಸೂರಪ್ಪ ಗೌಡ ಪೈಲಾಜೆ, ಕಾರ್ತಿಕ್ ಕೂಜುಗೋಡು, ಪದ್ಮನಾಭ ಕೆದಿಲ ಹಾಗೂ ಶೇಖರಪ್ಪ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here