ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ “ಶೈಕ್ಷಣಿಕ ಕೌಶಲ್ಯಗಳು ಮತ್ತು ಯಶಸ್ಸು” ಉಪನ್ಯಾಸ

0

ಜೀವನದ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೂ ಕೌಶಲ್ಯಗಳು ಅತೀ ಅಗತ್ಯ- ಡಾ. ಹರಿಪ್ರಸಾದ್ ಎಸ್

ಕಾಣಿಯೂರು :- ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ “ಶೈಕ್ಷಣಿಕ ಕೌಶಲ್ಯಗಳು ಮತ್ತು ಯಶಸ್ಸು” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಜು 13ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹರಿಪ್ರಸಾದ್ ಎಸ್ ಉಪನ್ಯಾಸ ನೀಡಿದರು. ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ದುಡಿಯಲು ಮಾತ್ರವಲ್ಲ ಅದರಲ್ಲಿ ಯಶಸ್ಸು ಗಳಿಸಲು ಕೌಶಲ್ಯಗಳು ಅತೀ ಅಗತ್ಯ. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿಯೂ ಕೆಲವೊಂದು ಕೌಶಲ್ಯಗಳನ್ನು ತಿಳಿದುಕೊಂಡು ಪ್ರಯೋಗಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಕ್ಷಿತ್ ಬಂಡಾಜೆ ಮಾತನಾಡುತ್ತಾ ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಗೆ ಬದ್ಧರಾಗಿದ್ದುಕೊಂಡು ಮುಂದೆ ಮಾತೃಸಂಸ್ಥೆಗೆ ಚಿರಋಣಿಗಳಾಗಿ ತಮ್ಮಿಂದಾದ ಸಹಾಯ ಹಸ್ತವನ್ನು ನೀಡಬೇಕು ಎಂದರು. ವೇದಿಕೆಯಲ್ಲಿ ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ. ಶೆಟ್ಟಿ, ಸಹ ಆಡಳಿತಾಧಿಕಾರಿ ಹೇಮನಾಗೇಶ್ ರೈ ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತಿಸಿದರು. ವಿದ್ಯಾರ್ಥಿನಿ ಅನುಶ್ರೀ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಅಕ್ಷರ ಅಬಿಕಾರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here