ಲಂಚ, ಭ್ರಷ್ಟಾಚಾರ ವಿರುದ್ಧದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಹೋರಾಟಕ್ಕೆ ಪೂರ್ಣ ಬೆಂಬಲ

0

ಲಂಚ, ಭ್ರಷ್ಟಾಚಾರದ ವಿರುದ್ಧ ಮತದಾರರ ಜಾಗೃತಿ ಬಗ್ಗೆ ನಾವು ನಡೆಸುತ್ತಿರುವ ಜನಾಂದೋಲನದ ಕುರಿತು ಹಲವಾರು ಬಾರಿ ಪ್ರಸ್ತಾಪ ಮಾಡಿದ್ದೇವೆ. ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಮತದಾರರ ಜಾಗೃತಿಗಾಗಿ ಮೋದಿಯವರ, ರಾಹುಲ್ ಗಾಂಧಿಯವರ ಕ್ಷೇತ್ರದಲ್ಲಿ, ಮುಖ್ಯಮಂತ್ರಿ ಸಿದ್ಧರಾಮಯ್ಯರವರ, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಆಂದೋಲನದ ಪ್ರಚಾರ ಮಾಡಿದ್ದೇವೆ. ಈ ಸಲದ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೂ ವಾರಣಾಸಿ ಮತ್ತು ಡೆಲ್ಲಿಯಲ್ಲಿಯೂ ಮತದಾರರ ಮನ್ ಕಿ ಬಾತ್ ಪ್ರಚಾರ ಮಾಡಿದ್ಧೇವೆ. ಶಾಸಕರು, ಸಂಸದರು ರಾಜರಲ್ಲ – ಜನಸೇವಕರು, ಅಧಿಕಾರಿಗಳು ಜನಸೇವಕರು. ಜನರು – ರಾಜರು, ಈ ಊರು ನಮ್ಮದು, ಆಡಳಿತ ನಮಗಾಗಿ ಎಂದು ಹೇಳುತ್ತಾ ಬಂದಿದ್ದೇವೆ. ಅವುಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಅದರ ಪರಿಣಾಮ ಪುತ್ತೂರಿನಲ್ಲಿ ಆಗಿದೆ.


ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಲಂಚ, ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಹೇಳುತ್ತಿರುವುದು ಮಾತ್ರವಲ್ಲ ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿದ್ದಾರೆ. ಪುತ್ತೂರಿನ ಕಚೇರಿಗಳಲ್ಲಿ ಶೇ.90ರಷ್ಟು ಸುಲಿಗೆಯ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಸುಳ್ಯದಲ್ಲಿ ಶಾಸಕಿ ಭಾಗೀರಥಿ ಕೂಡ ಲಂಚ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಪ್ರಧಾನಿ ಮೋದಿಜೀಯವರು ಲಂಚ, ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ ಎಂದು ಹೇಳುತ್ತಾ ಬಂದಿದ್ದಾರೆ. ಇತ್ತೀಚಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರು ಜನಪ್ರತಿನಿಧಿಗಳು, ಅಧಿಕಾರಿಗಳು ರಾಜರಲ್ಲ, ಜನ ಸೇವಕರು ಅಧಿಕಾರಿಗಳ ಲಂಚ, ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.


ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ನಮಗೆ ದೊಡ್ಡ ಅಡಚಣೆ ಇದ್ದದ್ದು ಬೆಳ್ತಂಗಡಿಯಲ್ಲಿ ಆಗಿತ್ತು. ಅಲ್ಲಿಯೂ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. 3 ವರ್ಷಗಳ ಹಿಂದೆ ನಾವು ಬೆಳ್ತಂಗಡಿ ಜನರಲ್ಲಿ ಅತೀ ದೊಡ್ಡ ಸಮಸ್ಯೆ ಯಾವುದು ಎಂದು ಕೇಳಿದಾಗ ಲಂಚ, ಭ್ರಷ್ಟಾಚಾರ ಎಂದು ಹೇಳಿ ಅದರ ಪರಿಹಾರವಾಗಬೇಕೆಂದು ಕೇಳಿದ್ದರು. ಅದನ್ನು ಶಾಸಕ ಹರೀಶ್ ಪೂಂಜರ ಗಮನಕ್ಕೆ ತಂದಾಗ ಮತ್ತು ಲಂಚ, ಭ್ರಷ್ಟಾಚಾರದ ವಿರುದ್ಧದ ಮತದಾರರ ಜಾಗೃತಿ ಫಲಕವನ್ನು ಅವರಿಗೆ ನೀಡಿದಾಗ ಅವರು ಅದಕ್ಕೆ ಅಷ್ಟಾಗಿ ಸ್ಪಂದಿಸಿರಲಿಲ್ಲ. ನಗುತ್ತಾ ಅದನ್ನು ತೇಲಿಸಿದ್ದರು. ಮಾಜಿ ಶಾಸಕ ವಸಂತ ಬಂಗೇರರು ಮಾತ್ರ ಲಂಚ, ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದರು. ಅವರಿಂದಾಗಿ ಸ್ವಲ್ಪ ನಿಯಂತ್ರಣದಲ್ಲಿತ್ತು. ಇದೀಗ ಶಾಸಕ ಹರೀಶ್ ಪೂಂಜರು ಇಲಾಖೆಗಳಲ್ಲಿಯ ಲಂಚ, ಭ್ರಷ್ಟಾಚಾರದ ವಿರುದ್ಧ ಸಿಡಿದಿದ್ದಾರೆ.


ಮೇ 20ರಂದು ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಲಂಚ, ಭ್ರಷ್ಟಾಚಾರದ ಕಥೆಯನ್ನು ಶಾಸಕ ಹರೀಶ್ ಪೂಂಜರು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನೂರು ರೂ. ಪಡೆಯುತ್ತಿದ್ದವರು ಸಾವಿರ, ಸಾವಿರ ಪಡೆಯುವವರು ಐದು ಸಾವಿರ ಕೇಳುತ್ತಿದ್ದಾರೆ. ಬೆಳ್ತಂಗಡಿ ಲೂಟಿ ತಾಲೂಕಾಗಿದೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಬಿಜೆಪಿ ಜಿಲ್ಲಾ ಯುವಮೋರ್ಚಾದ ಉಪಾಧ್ಯಕ್ಷ ಪ್ರಮೋದ್ ಗೌಡ, ತಹಶೀಲ್ದಾರರಿಗೆ ಹಫ್ತ (ಲಂಚ) ನೀಡಲಿಲ್ಲವೆಂದು ಕೇಸ್ ಮಾಡಿರುವುದು ಅದಕ್ಕೆ ಸಾಕ್ಷಿ ಎಂದಿದ್ದಾರೆ. ಕಚೇರಿ ಮುತ್ತಿಗೆ ಹಾಕುವುದಾಗಿ ತಹಶೀಲ್ದಾರರಿಗೆ, ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಅನ್ಯಾಯ ಮಾಡಿದರೆ ಪೊಲೀಸರ ಕಾಲರ್ ಹಿಡಿದು ಎಳೆದು ಹಾಕುವುದಾಗಿ, ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣ ಮಾಡುವುದಾಗಿ ಹೇಳಿದ್ದಾರೆ. ಒಂದು ವಾರದ ಒಳಗೆ ಅಕ್ರಮ ನಿಲ್ಲದಿದ್ದರೆ ತಾವೇ ರೇಡ್ ಮಾಡುವುದಾಗಿ, ಕೇಸ್ ಆದರೆ ಬೇಲ್ ತೆಗೆದುಕೊಳ್ಳದೇ ಜೈಲಿಗೆ ಹೋಗುವುದಾಗಿ, ಲಂಚ, ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಕುವುದಾಗಿ ಪೂಂಜರು ಘೋಷಿಸಿದ್ದಾರೆ. ಇದೀಗ ಆ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ಕಚೇರಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾರೆ. ವರ್ಷಾನುಗಟ್ಟಲೆ ಉಳಿದಿದ್ದ ಫೈಲ್‌ಗಳು ಮುಂದೆ ಬರುತ್ತಿದೆ. ವಿದ್ಯಾರ್ಥಿಗಳ, ರಸ್ತೆಗುಂಡಿಗಳ ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದಾರೆ.


ಪೂಂಜರು ಘೋಷಣೆ ಮಾಡಿ ತಿಂಗಳಾದರೂ ಲಂಚ, ಭ್ರಷ್ಟಾಚಾರಕ್ಕೆ, ಅಕ್ರಮಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪರಿಹಾರ ಸಿಗದೇ ಇರುವುದರಿಂದ, ಪೂಂಜರಿಗೆ ಜನಬೆಂಬಲ ನೀಡಬೇಕಾಗಿದೆ. ಅದಕ್ಕಾಗಿ ಸುದ್ದಿ ಜನಾಂದೋಲನ ವೇದಿಕೆಯಿಂದ ಶಾಸಕ ಹರೀಶ್ ಪೂಂಜರಿಗೆ ಹೂಗುಚ್ಛ ನೀಡಿ ಅವರ ಹೋರಾಟಕ್ಕೆ (ಕಾನೂನು ಬಾಹಿರ ವಿಷಯಗಳನ್ನು ಹೊರತುಪಡಿಸಿ) ಬೆಂಬಲ ನೀಡುವುದಾಗಿ ತಿಳಿಸಿದ್ದೇವೆ. ಗ್ರಾಮ-ಗ್ರಾಮಗಳಲ್ಲಿಯೂ ಕಚೇರಿ-ಕಚೇರಿಗಳಲ್ಲಿ ಜನಜಾಗೃತಿ ಮಾಡುವುದಾಗಿ ಪೂಂಜರಿಗೆ ತಿಳಿಸಿ ಲಂಚ, ಭ್ರಷ್ಟಾಚಾರದ, ಮತದಾರರ ಜಾಗೃತಿ ಫಲಕವನ್ನು ಅವರಿಗೆ ನೀಡಿದ್ದೇವೆ. ಅಷ್ಟು ಮಾತ್ರವಲ್ಲ, ಸ್ವತಃ ಪತ್ರಿಕೆ ಹೊಂದಿರುವ, ಪತ್ರಿಕೆ ನಡೆಸಿ ಅನುಭವವಿರುವ ಪೂಂಜರು ಹೇಳಿದ ನೆಗೆಟಿವ್ ಪತ್ರಿಕೋದ್ಯಮ ಬದುಕುವುದಿಲ್ಲ, ಪಾಸಿಟಿವ್ ಜರ್ನಲಿಸಂ ಜನ ಸ್ವೀಕರಿಸುತ್ತಾರೆ ಎಂಬ ಮಾತಿಗೆ ಸಹಮತ ವ್ಯಕ್ತಪಡಿಸಿದ್ದೇವೆ. ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ 40 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿರುವ ಸುದ್ದಿಬಿಡುಗಡೆಯ ಯಶಸ್ಸಿಗೆ ಪಾಸಿಟಿವ್ ಜರ್ನಲಿಸಂ ಕಾರಣ ಎಂದು ಪೂಂಜರು ಪರೋಕ್ಷವಾಗಿ ಹೇಳಿ, ಬೆಂಬಲ ಸೂಚಿಸಿದ್ದಾರೆ. ಅದಕ್ಕಾಗಿ ಪೂಂಜರಿಗೆ ಕೃತಜ್ಞತೆಗಳನ್ನು ಮಾತ್ರವಲ್ಲ, ಬೆಂಬಲವನ್ನು ನೀಡುತ್ತಿದ್ದೇವೆ. ಯಾರ ಕಡೆಯೂ ನಿಲ್ಲದೇ, ಯಾರಿಗೂ ವಿರೋಧ ಮಾಡದೇ ಇರುವ ನಿಷ್ಪಕ್ಷಪಾತ ವರದಿಯೇ ಪಾಸಿಟಿವ್ ಜರ್ನಲಿಸಂ ಎಂದು ಪೂಂಜರ ಮೂಲಕ ಜನರಿಗೆ ತಿಳಿಸುತ್ತಿದ್ದೇವೆ.


ಮೇ 20ರಂದು ಬೆಳ್ತಂಗಡಿಯಲ್ಲಿ ಹರೀಶ್ ಪೂಂಜರು ಮಾಡಿದ ಲಂಚ, ಭ್ರಷ್ಟಾಚಾರದ ವಿರುದ್ಧದ ಭಾಷಣವನ್ನು, ನೆಗೆಟಿವ್, ಪಾಸಿಟಿವ್ ಜರ್ನಲಿಸಂ ಬಗ್ಗೆ ಮಾತನಾಡಿದ ವೀಡಿಯೋವನ್ನು ನಿಮಗೆ ನೀಡಲಿದ್ದೇವೆ. ಅದು ಸುದ್ದಿ ಚಾನೆಲ್‌ನಲ್ಲಿ ದೊರಕುವಂತೆ ಮಾಡಿದ್ದೇವೆ. ಲಂಚ, ಭ್ರಷ್ಟಾಚಾರದ ವಿರುದ್ಧದ ಪೂಂಜರ ಹೋರಾಟಕ್ಕೆ ಕೈಜೋಡಿಸಬೇಕಾಗಿ, ಪಾಸಿಟಿವ್ ಜರ್ನಲಿಸಂಗೆ ಬೆಂಬಲ ನೀಡಬೇಕಾಗಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.


ಲಂಚ, ಭ್ರಷ್ಟಾಚಾರ ವಿರುದ್ಧದ ಈ ಆಂದೋಲನ ದ.ಕ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಹರಡಲಿ. ಅಗಸ್ಟ್ 15 (ನಿಜವಾದ ಅರ್ಥದಲ್ಲಿ ಜನರಿಗೆ ಸ್ವಾತಂತ್ರ್ಯ ನೀಡುವ) ಲಂಚ, ಭ್ರಷ್ಟಾಚಾರ ಮುಕ್ತ ದಿನವಾಗಿ ಘೋಷಣೆಯಾಗಲಿ.

ಡಾ| ಯು.ಪಿ. ಶಿವಾನಂದ. ಸುದ್ದಿ ಜನಾಂದೋಲನ ವೇದಿಕೆ

LEAVE A REPLY

Please enter your comment!
Please enter your name here