ನಗರೋತ್ಥಾನದ ಅಪೂರ್ಣ ರಸ್ತೆ ಕಾಮಗಾರಿ – ವಾಹನ ಸವಾರರಿಗೆ ಸಂಕಷ್ಟ

0

ಪುತ್ತೂರು: ನಗರದ ಕೇಂದ್ರ ಭಾಗವಾದ ಶ್ರೀಧರ ಭಟ್ ಮಳಿಗೆಯ ಬಳಿಯಿಂದ ಪರ್ಲಡ್ಕ ತನಕ ನಡೆದ ಮರುಡಾಮರೀಕರಣ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡಿದೆ. ಇದರ ಪರಿಣಾಮ ಇಲ್ಲಿ ಜಲ್ಲಿ ಎದ್ದುಹೋಗುತ್ತಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಅನುಭವಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ನಗರೋತ್ಥಾನದ ಅನುದಾನದಲ್ಲಿ ಮುಖ್ಯರಸ್ತೆಯ ಶ್ರೀಧರ ಭಟ್ ಅಂಗಡಿಯ ಬಳಿಯಿಂದ ಕಿಲ್ಲೆ ಮೈದಾನ, ಚೇತನ ಆಸ್ಪತ್ರೆಯ ಮುಂಭಾಗದ ಮೂಲಕ ಕಲ್ಲಿಮಾರು, ಪರ್ಲಡ್ಕದ ತನಕ ರಸ್ತೆಗೆ ಒಂದು ಹಂತದ ಡಾಮರೀಕರಣ ಕಾಮಗಾರಿ ನಡೆದಿದೆ. ಡಾಮರು ಹಾಕುವ ಸಮಯದಲ್ಲೇ ಮಳೆ ಪ್ರಾರಂಭವಾಗಿರುವುದರಿಂದ ಕಾಮಗಾರಿಯನ್ನು ಅಷ್ಟಕ್ಕೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಈಗ ಉಂಟಾಗಿರುವ ಅವ್ಯವಸ್ಥೆಯ ಪರಿಣಾಮವನ್ನು ವಾಹನ ಸವಾರು, ಸಾರ್ವಜನಿಕರು ಎದುರಿಸುವಂತಾಗಿದೆ.

ಹೊಸ ಡಾಮರೀಕರಣಗೊಂಡ ರಸ್ತೆಯ ಅಲ್ಲಲ್ಲಿ ಡಾಮರು ಮಿಶ್ರಿತ ಜಲ್ಲಿ ಎದ್ದು ಹೋಗಿ ರಸ್ತೆಯಲ್ಲಿ ಹರಡಿಕೊಂಡಿದೆ. ಮೀನು ಮಾರುಕಟ್ಟೆ ಮುಂಭಾಗದಲ್ಲಿ ಡಾಮರು ಸಂಪೂರ್ಣ ಹಾಕದೆ ಏರು ತಗ್ಗು ನಿರ್ಮಾಣವಾಗಿದೆ. ಕೋರ್ಟ್ ರಸ್ತೆ ಸೇರುವ ಜಾಗದಲ್ಲಿಯೂ ಸಮರ್ಪಕವಾಗಿ ಕೆಲಸ ನಿರ್ವಹಿಸಿಲ್ಲ. ಮೊಳಹಳ್ಳಿ ಶಿವರಾಯ ವೃತ್ತದ ಬಳಿಯಲ್ಲಿ ಡಾಮರು ಎದ್ದು ಹೋಗಿ ಹೊಂಡ ಗುಂಡಿ ನಿರ್ಮಾಣವಾಗಿದೆ. ಕೆಲವೆಡೆ ರಸ್ತೆಯ ಮಧ್ಯಭಾಗಕ್ಕೆ ಮಾತ್ರ ಡಾಮರು ಹಾಕಿ ಉಳಿದ ಭಾಗ ಹಾಗೆಯೇ ಬಿಡಲಾಗಿದೆ. ಡಾಮರೀಕರಣವನ್ನು ವೈಜ್ಞಾನಿಕ ರೀತಿಯಲ್ಲಿ ನಡೆಸದೇ ಇರುವುದರಿಂದ ರಸ್ತೆಯು ಏರು ತಗ್ಗುಗಳಿಂದ ಕೂಡಿದೆ. ಕೆಲವು ಭಾಗಗಳಲ್ಲಿ ರಸ್ತೆಯ ಮಧ್ಯ ಭಾಗಕ್ಕೆ ಮಾತ್ರ ಡಾಮರು ಹಾಕಿ ಉಳಿದ ಭಾಗ ಹಾಗೆಯೇ ಬಿಡಲಾಗಿದೆ.

ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ: ಅಪೂರ್ಣ ಕಾಮಗಾರಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಮರು ಡಾಮರೀಕರಣಗೊಂಡ ರಸ್ತೆಯ ಅಂಚಿನಲ್ಲಿ ಜಲ್ಲಿ ಎದ್ದು ಹೋಗಿದ್ದು ಬೈಕ್‌ನ್ನು ರಸ್ತೆಯಿಂದ ಇಳಿಸುವ ಸಂದರ್ಭದಲ್ಲಿ ಬೈಕ್ ಸವಾರ ಬೈಕ್ ಸಮೇತ ಜಾರಿಬಿದ್ದ ಅನೇಕ ಘಟನೆಗಳು ನಡೆದಿವೆ. ಕೆಲವೊಮ್ಮೆ ಜಲ್ಲಿ ಪಾದಚಾರಿಗಳ ಮೇಲೆಯೂ ಅಪ್ಪಳಿಸಿರುವ ಉದಾಹರಣೆಗಳೂ ಇವೆ.

ಹಿಂದಿನ ರಸ್ತೆಯೇ ಉತ್ತಮವಾಗಿತ್ತು: ಮಳೆಗಾಲದಲ್ಲೇ ರಸ್ತೆಗೆ ಡಾಮರು ಹಾಕುವಂತಹ ಜರೂರು ಏನಿತ್ತು. ಹೊಸದಾಗಿ ಡಾಮರೀಕರಣಗೊಂಡ ರಸ್ತೆಗಿಂತ ಹಿಂದಿನ ರಸ್ತೆಯೇ ಉತ್ತಮವಾಗಿತ್ತು. ರಸ್ತೆಯ ಕೆಲವು ಭಾಗದಲ್ಲಿ ಹೊಂಡಗುಂಡಿಗಳಿದ್ದವು. ಅವುಗಳಿಗೆ ತೇಪೆ ಹಾಕುತ್ತಿದ್ದರೆ ಸಾಕಾಗಿತ್ತು. ಹಿಂದಿನ ರಸ್ತೆಯಲ್ಲಿ ಇಷ್ಟೊಂದು ಸಮಸ್ಯೆಗಳಿರಲಿಲ್ಲ. ಅರ್ಧಂಬರ್ಧ ಕಾಮಗಾರಿ ನಡೆಸಿ ಜನರಿಗೆ ತೊಂದರೆ ಕೊಡುವುದಕ್ಕಿಂತ ಹಿಂದಿನ ರಸ್ತೆಯೇ ಉತ್ತಮವಾಗಿತ್ತು ಎನ್ನುತ್ತಾರೆ ವಾಹನ ಸವಾರರು.

ರಸ್ತೆ ಡಾಮರೀಕರಣವು ನಗರೋತ್ಥಾನ ದಡಿಯಲ್ಲಿ ನಡೆದ ಕಾಮಗಾರಿಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಕಾಮಗಾರಿ ನಡೆಸದಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆದರೂ ಅವರು ಕಾಮಗಾರಿ ನಡೆಸಿದ್ದಾರೆ. ಮಳೆಗಾಲದಲ್ಲಿ ಕಾಮಗಾರಿ ನಡೆಸಿರುವುದರಿಂದ ಎಲ್ಲಾ ರಸ್ತೆ ಮತ್ತೆ ದುರಸ್ತಿಗೆ ಬಂದಿದೆ. ಹೀಗಾಗಿ ಗುತ್ತಿಗೆದಾರನಿಗೆ ನೊಟೀಸ್ ನೀಡುವಂತೆ ಹಾಗೂ ರಸ್ತೆ ಮರು ಡಾಮರೀಕರಣ ಮಾಡುವಂತೆ ನಗರೋತ್ಥಾನದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಮಾಡಿದ್ದು ಅವರು ಗುತ್ತಿಗೆದಾರರಿಗೆ ನೊಟೀಸ್ ನೀಡಿದ್ದಾರೆ.
-ಮಧು ಎಸ್.ಮನೋಹರ್, ಪೌರಾಯುಕ್ತರು

ಡಾಮರೀಕರಣಗೊಂಡ ಜಲ್ಲಿ ಎದ್ದು ಹೋಗಿದ್ದು ಬೈಕ್ ಸವಾರಿ ಮಾಡಲು ಸಾಧ್ಯವಿಲ್ಲದಂತಾಗಿದೆ. ಬೈಕ್ ಸ್ಕಿಡ್ ಆಗುತ್ತದೆ. ಸೈಡ್‌ಗೆ ಹೋದರೆ ಜಾರುತ್ತದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ಕಾಮಗಾರಿ ನಡೆಸಿರುವುದು ವ್ಯರ್ಥ. ಇದರಿಂದ ಜನರಿಗೆ ತೊಂದರೆಯೇ ಹೆಚ್ಚು.
-ಹರೀಶ್ ರೈ, ಬೈಕ್ ಸವಾರ

ಅರ್ಧಂಬರ್ಧ ಕಾಮಗಾರಿ ನಡೆಸಿದ್ದಾರೆ. ಇದರಿಂದಾಗಿ ಬೈಕ್ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಜನರ ಸಮಸ್ಯೆ ಕೇಳುವವರೇ ಇಲ್ಲ. ಮೊದಲೇ ಡಾಮರೀಕರಣ ಮಾಡಿಲ್ಲ. ಮಳೆ ಬರುವಾಗ ಕಾಮಗಾರಿ ನಡೆಸಬೇಕಿತ್ತಾ. ಈಗ ಎಲ್ಲರಿಗೂ ತೊಂದರೆಯಾಗಿದೆ. ನಾವು ಯಾರಲ್ಲಿ ಕೇಳಬೇಕು.
-ಸುರೇಶ್ ರಿಕ್ಷಾ ಚಾಲಕ

LEAVE A REPLY

Please enter your comment!
Please enter your name here