ಶಿರಾಡಿ: ಜೆಜೆಎಂ ಕಾಮಗಾರಿ ಅಪೂರ್ಣ – 2 ವರ್ಷವಾದರೂ ಮನೆ ಮನೆಗೆ ಬಾರದ ಗಂಗೆ

0

ನೆಲ್ಯಾಡಿ: ದೇಶದ ಪ್ರತಿ ಹಳ್ಳಿಗೂ ನಿರಂತರ ಶುದ್ಧ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಆರಂಭಗೊಂಡಿರುವ ಜಲ್ ಜೀವನ್ ಮಿಷನ್‌ನ(ಜೆಜೆಎಮ್) ಯೋಜನೆ ಶಿರಾಡಿ ಗ್ರಾಮ ಪಂಚಾಯತ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದೆ ಹಳ್ಳ ಹಿಡಿದಿದೆ. ಶಿರಾಡಿ ಗ್ರಾಮದ ಜನತೆ ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದರೂ ಮನೆ ಮನೆಗೆ ಗಂಗೆ ಇನ್ನೂ ತಲುಪದೇ ಇರುವುದು ಜನರಲ್ಲಿ ಅಸಮಾಧಾನ ಉಂಟು ಮಾಡಿದೆ.

’ಮನೆ ಮನೆಗೆ ಗಂಗೆ’ ಯೋಜನೆಯಡಿ ಶಿರಾಡಿ ಗ್ರಾಮ ಪಂಚಾಯತ್‌ನಲ್ಲಿ 2022-23ನೇ ಸಾಲಿನಲ್ಲಿ ಜೆಜೆಎಂ ಕಾಮಗಾರಿ ಆರಂಭಗೊಂಡಿತ್ತು. ಇದಕ್ಕಾಗಿ ಶಿರಾಡಿ ಗ್ರಾಮ ಪಂಚಾಯತ್‌ಗೆ ಸುಮಾರು 2.50 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿತ್ತು. ಈ ಯೋಜನೆಯಡಿ ಬೋರ್‌ವೆಲ್, ನೀರಿನ ಟ್ಯಾಂಕ್ ರಚನೆ, ಟಿಸಿ ಅಳವಡಿಕೆ, ಪೈಪು ಲೈನ್ ಮೂಲಕ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿರಾಡಿ ಗ್ರಾಮದಲ್ಲಿ 50 ಸಾವಿರ, 25 ಸಾವಿರ ಹಾಗೂ 20 ಸಾವಿರ ಲೀಟರ್ ಸಾಮರ್ಥ್ಯದ ಒಟ್ಟು 8 ಟ್ಯಾಂಕ್‌ಗಳ ರಚನೆಯಾಗಿದೆ. ಶಿರ್ವತ್ತಡ್ಕ, ಪಾದಡ್ಕ, ದಾನಾಜೆ ಕಾಲೋನಿ, ಅಡ್ಡಹೊಳೆ, ಮಿತ್ತಮಜಲು, ಉದನೆ ಎಸ್‌ಸಿ ಕಾಲೋನಿ, ಸೋಣಂದೂರುಗಳಲ್ಲಿ ಟ್ಯಾಂಕ್ ರಚಿಸಲಾಗಿದ್ದರೂ ಐದಾರು ಟ್ಯಾಂಕ್‌ಗಳ ಕಾಮಗಾರಿ ಇನ್ನೂ ಸಂಪೂರ್ಣವಾಗಿಲ್ಲ. ಸೋಣಂದೂರು ಹಾಗೂ ಉದನೆ ಎಸ್‌ಸಿ ಕಾಲೋನಿಯ ಟ್ಯಾಂಕ್‌ಗಳ ರಚನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಇದರಿಂದ ಕಾಲೋನಿಗಳಿಗೆ ನೀರು ಪೂರೈಕೆಯಾಗುತ್ತಿದ್ದರೂ ಸಮರ್ಪಕವಾಗಿಲ್ಲ ಎಂದು ಹೇಳಲಾಗಿದೆ.

ಬೋರ್‌ವೆಲ್‌ಗಳೂ ಫೇಲ್: ಗ್ರಾಮದ ವಿವಿಧ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಕೊರೆಯಲಾದ ನಾಲ್ಕೈದು ಬೋರ್‌ವೆಲ್‌ಗಳಲ್ಲಿ ನೀರು ಸಿಗದೇ ಫೇಲ್ ಆಗಿವೆ. ಇದರಿಂದಲೂ ಸಕಾಲದಲ್ಲಿ ನೀರು ಸರಬರಾಜು ಮಾಡಲು ತೊಂದರೆಯಾಗಿರುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ರಸ್ತೆ ಅಗೆದು ಪೈಪ್ ಅಳವಡಿಸಲಾಗಿದ್ದು ರಸ್ತೆಯಲ್ಲಿನ ಹೊಂಡ ಸರಿಯಾಗಿ ಮುಚ್ಚದೇ ಇರುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ನಳ್ಳಿಗಾಗಿ ಕಂಬ ಅಳವಡಿಕೆ: ಕುಡಿಯುವ ನೀರಿನ ಬಳಕೆದಾರರ ಮನೆಗಳಲ್ಲಿ ನೀರಿನ ಟ್ಯಾಪ್ ಅಳವಡಿಕೆಗೆ ಕಂಬ ಹಾಕಲಾಗಿದೆ. ಆದರೆ ಇದು ನಳ್ಳಿನೀರಿನ ಸಂಪರ್ಕಕ್ಕಾಗಿ ಕಾಯುತ್ತಿದೆ. ಒಟ್ಟಿನಲ್ಲಿ ಕೋಟ್ಯಾಂತರ ರೂ.ವೆಚ್ಚದ ಜೆಜೆಎಂ ಕಾಮಗಾರಿ ಶಿರಾಡಿ ಗ್ರಾಮದಲ್ಲಿ ಹಳ್ಳಹಿಡಿದಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮನೆ ಮನೆಗೆ ಗಂಗೆ ತಲುಪಿಸುವಲ್ಲಿ ಮುತುವರ್ಜಿ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶೇ.30ರಷ್ಟೂ ಕಾಮಗಾರಿ ನಡೆದಿಲ್ಲ
ಶಿರಾಡಿ ಗ್ರಾಮದಲ್ಲಿ 2 ವರ್ಷದಿಂದ ಜೆಜೆಎಂ ಕಾಮಗಾರಿ ನಡೆಯುತ್ತಿದೆ. ಈ ತನಕ ಶೇ.30ರಷ್ಟೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಕುರಿತು ಗ್ರಾಮ ಪಂಚಾಯಿತಿಗೂ ಮಾಹಿತಿ ನೀಡುತ್ತಿಲ್ಲ. ಗುತ್ತಿಗೆದಾರರು ಯಾರು, ಕಾಮಗಾರಿ ಯಾರು ನಿರ್ವಹಿಸುತ್ತಿದ್ದಾರೆ ಎಂಬುದು ಪಂಚಾಯತ್‌ನಲ್ಲಿ ಮಾಹಿತಿ ಇಲ್ಲ. ಕಾಮಗಾರಿ ನಿರ್ವಹಿಸುವವರೂ ಪಂಚಾಯತ್‌ಗೆ ಬಂದೇ ಇಲ್ಲ. ಮಳೆಗಾಲ ಆಗಿರುವುದರಿಂದ ಈಗ ನೀರಿನ ಸಮಸ್ಯೆ ಇಲ್ಲ. ಸಂಬಂಧಪಟ್ಟವರು ಇನ್ನಾದರು ಎಚ್ಚೆತ್ತುಕೊಂಡು ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೆ ನೀರು ತಲುಪಿಸಬೇಕು.
ಕಾರ್ತಿಕೇಯನ್‌ ಅಧ್ಯಕ್ಷರು ಗ್ರಾ.ಪಂ.ಶಿರಾಡಿ

ಹೊಸ ಸಂಪರ್ಕ ಸಿಕ್ಕಿಲ್ಲ
ಕಾಲೋನಿಗಳಲ್ಲಿದ್ದ ಹಳೆಯ ಸಂಪರ್ಕ ಕಡಿತಗೊಳಿಸಲಾಗಿದೆ. ಆದರೆ ಹೊಸ ಸಂಪರ್ಕ ಕೊಟ್ಟಿಲ್ಲ. ಅಲ್ಲಲ್ಲಿ ನಳ್ಳಿ ಅಳವಡಿಕೆಗೆ ಕಂಬ ಹಾಕಿದ್ದಾರೆ. ಕೆಲವು ಕಡೆ ರಸ್ತೆ ಅಗೆದು ಪೈಪು ಹಾಕಿದ್ದಾರೆ. ಆದರೆ ಅದನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ವಾಹನ ಸಂಚಾರಕ್ಕೂ ತೊಡಕಾಗಿದೆ. ಶಿರಾಡಿ ಗ್ರಾಮದಲ್ಲಿ ಯೋಜನೆ ಸಂಪೂರ್ಣ ವಿಫಲವಾಗಿದೆ.
ಸೆಬಾಸ್ಟಿಯನ್‌, ಮಾಜಿ ಸದಸ್ಯರು, ಶಿರಾಡಿ ಗ್ರಾ.ಪಂ

ಬೇಗ ಮುಗಿಯಲಿದೆ
ಅಡ್ಡಹೊಳೆ ಭಾಗದಲ್ಲಿ ಕೆಲಸ ಮುಗಿದಿದ್ದು ಮನೆ ಮನೆಗೆ ನೀರು ಪೂರೈಕೆಯಾಗುತ್ತಿದೆ. ಹೆಚ್ಚುವರಿ ಪೈಪುಲೈನ್ ಸಹ ಮಾಡಿಕೊಡಲಾಗಿದೆ. ಶಿರಾಡಿಯಲ್ಲಿ ಬಾಕಿ ಇದೆ. ಇಲ್ಲಿ ಹೊಳೆಬದಿಯಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯಬೇಕಾಗಿದೆ. ಮಳೆನಿಂತ ಕೂಡಲೇ ಕೆಲಸ ನಡೆಯಲಿದೆ. ಕಾಮಗಾರಿ ಬೇಗ ಮುಗಿಸಿ ಮನೆ ಮನೆಗೆ ನೀರು ಪೂರೈಕೆಯಾಗಲಿದೆ.
ಹುಕ್ಕೇರಿ, ಇಂಜಿನಿಯರ್‌

LEAVE A REPLY

Please enter your comment!
Please enter your name here