ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣ ಜಂಕ್ಷನ್ ಸೇರಿದಂತೆ ಪೇಟೆಯ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸುಮಾರು ಎರಡು ಗಂಟೆಗಳಷ್ಟು ಕಾಲ ಸುಗಮ ವಾಹನ ಸಂಚಾರಕ್ಕೆ ತೊಡಕಾದ ಘಟನೆ ಜು.15ರಂದು ನಡೆದಿದೆ.
ಪೂರ್ವಾಹ್ನ ಸುಮಾರು 11 ಗಂಟೆಯ ಸುಮಾರಿಗೆ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಹೊಸ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್ ಕಂಡು ಬಂತು. ಬಳಿಕ ಪೇಟೆಯ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಗ್ರಾ.ಪಂ ಸಿಬ್ಬಂದಿ ಇಸಾಕ್ ಹಾಗೂ ಇಕ್ಬಾಲ್ ಅವರು ಟ್ರಾಫಿಕ್ ನಿಭಾಯಿಸಿದರು. ಬಳಿಕ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಾಫಿಕ್ ನಿಭಾಯಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.