ಸೋರುತಿಹುದು ನೆ.ಮುಡ್ನೂರು ಶಾಲೆಯ ಕೊಠಡಿಗಳು

0

ಮೂಲಸೌಕರ್ಯದ ಕೊರತೆ, ರಂಗಮಂಟಪ, ಸಭಾಂಗಣ ಶಾಲೆಯ ಮುಖ್ಯ ಬೇಡಿಕೆ

ಪುತ್ತೂರು: ಗಡಿಭಾಗ ಪ್ರದೇಶದ ನೆಟ್ಟಣಿಗೆ ಮುಡ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಗಾಲದಲ್ಲಿ ಸೋರುತ್ತಿರುವ ಆರ್‌ಸಿಸಿ ಕಟ್ಟಡ, ಅಕ್ಷರದಾಸೋಹ ಕಟ್ಟಡ ಅಪೂರ್ಣವಾದ ನಲಿಕಲಿ ಕೊಠಡಿಗಳು ಕಳಪೆ ಕಾಮಗಾರಿ ಹಾಗೂ ದುಸ್ಥಿತಿಗಳನ್ನು ಹೊತ್ತುಕೊಂಡಿದೆ.
ಸುಮಾರು 70 ದಶಕಗಳನ್ನು ಪೂರೈಸಿದ ಕೇರಳ ಕರ್ನಾಟಕ ಗಡಿಭಾಗದ ನೆಟ್ಟಣಿಗೆ ಮುಡ್ನೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 176 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮೂಲಸೌಕರ್ಯದ ಕೊರತೆಯ ನಡುವೆಯೂ ಈ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೇನು ಕೊರತೆಯಿಲ್ಲ. 1ರಿಂದ 7ನೇ ತರಗತಿಗಳು ಇರುವ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಸಹಿತ ನಾಲ್ಕು ಖಾಯಂ ಶಿಕ್ಷಕರು ಹಾಗೂ ನಾಲ್ಕು ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತೀದಿನ 3ರಿಂದ 4 ಕಿಲೋ ಮೀಟರ್ ದೂರದಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ನಡೆದುಕೊಂಡು ಬರುತ್ತಿದ್ದಾರೆ. ಉತ್ತಮ ಸೌಕರ್ಯ, ಸೌಲಭ್ಯಗಳನ್ನು ಹೊಂದಿರಬೇಕಾದ ಈ ಶಾಲೆಯ ಹೊಸ ಕಟ್ಟಡಗಳು ಶೋಚನೀಯ ಸ್ಥಿತಿಯಲ್ಲಿದೆ.


ಮಳೆನೀರು ಸೋರುವ ಮುಖ್ಯಶಿಕ್ಷಕರ ಕೊಠಡಿ:
ಸರ್ವಶಿಕ್ಷಣ ಅಭಿಯಾನ 2012-13ರಲ್ಲಿ ರೂ 3ಲಕ್ಷ 56ಸಾವಿರ ಅನುದಾನಲ್ಲಿ ನಿರ್ಮಾಣವಾದ ಮುಖ್ಯಗುರುಗಳ ಕೊಠಡಿಯ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಈ ಕೊಠಡಿಗೆ ಅನುದಾನ ರೂ 3ಲಕ್ಷ 56ಸಾವಿರವಾಗಿದ್ದರೂ ಇದರ ವೆಚ್ಚ ರೂ.4ಲಕ್ಷ 25ಸಾವಿರ ಆಗಿದೆ ಎಂದು ಫಲಕದಲ್ಲಿ ನಮೂದಿಸಲಾಗಿದೆ. ಇಂತಹ ಕಟ್ಟಡ ಬಿರುಕು ಬಿಟ್ಟು ಇದರ ಮೇಲ್ಛಾವಣಿಯಲ್ಲಿ ಮಳೆಗಾಲದಲ್ಲಿ ಮಳೆನೀರು ಸೋರಿಕೆಯಾಗುತ್ತಿದೆ. ಇದರಿಂದ ಇಲ್ಲಿ ಶಿಕ್ಷಕರಿಗೆ ಕುಳಿತುಕೊಳ್ಳಲಾರದ ಸ್ಥಿತಿ ಉಂಟಾಗಿದೆ. ಪಕ್ಕದ ಕೊಠಡಿಯನ್ನು ಸೇರಿಸಿ ಈ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಕೊಠಡಿಯ ಸಂಧಿನ ಭಾಗದಲ್ಲಿಯೂ ಬಿರುಕು ಬಿಟ್ಟಿದೆ. ಕೇವಲ ಒಂದು ಕೊಠಡಿಗೆ ರೂ.4ಲಕ್ಷ 25ಸಾವಿರ ಲಕ್ಷ ಖರ್ಚಾಗಿದೆ ಎಂಬುದು ನಂಬಲು ಅಸಾಧ್ಯವಾಗಿದೆ.


ಸೋರುತ್ತಿರುವ ತರಗತಿ ಕೋಣೆ:
ಮುಖ್ಯಗುರುಗಳ ಕೊಠಡಿಗೆ ಹೊಂದಿಕೊಂಡು ಎರಡು ಕೊಠಡಿಗಳಿವೆ. ಎರಡು ಕೊಠಡಿಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. 2006-07ರಲ್ಲಿ ಸರ್ವಶಿಕ್ಷಣ ಅಭಿಯಾನದ ಯೋಜನೆಯಲ್ಲಿ ಈ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಕೊಠಡಿಗಳ ಮೇಲ್ಛಾವಣಿಯಲ್ಲಿಯೂ ಮಳೆನೀರು ಸೋರುತ್ತಿದೆ. ಸೋರುತ್ತಿರುವ ಕಾರಣ ಗೋಡೆಯಲ್ಲಿ ನೀರಿನ ತೇವಾಂಶ ಉಂಟಾಗುತ್ತಿದೆ. ಈ ಕೊಠಡಿಯಲ್ಲಿ ಶಾಲೆಗೆ ಬೇಕಾದ ಮೌಲ್ಯಯುತವಾದ ಉಪಕರಣಗಳನ್ನು ಜೋಡಿಸಲಾಗಿದೆ. ಅಲ್ಲದೆ ಗೋಡೆಯಲ್ಲಿ ಗೆದ್ದಲು ಕೂಡ ಹಿಡಿದಿದೆ. ಗೆದ್ದಲಿನ ಕಾರಣದಿಂದ ಕಪಾಟುಗಳ ಒಳಗೆ ಯಾವುದನ್ನೂ ಇಡಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆ ಮಕ್ಕಳು ಕ್ಲಾಸ್ ರೂಮ್‌ಗೆ ಬರುವಾಗ ಮಳೆನೀರು ತುಂಬಿರುತ್ತದೆ ಎನ್ನುವುದು ವಿದ್ಯಾರ್ಥಿಗಳ ಗೋಳು.


ಇಲಿ ಹೆಗ್ಗಣಗಳ ಆವಾಸ ಅಕ್ಷರದಾಸೋಹ ಕಟ್ಟಡ:
2004-05ರಲ್ಲಿ ಸುಮಾರು 75 ಸಾವಿರ ರೂ. ವೆಚ್ಚದಲ್ಲಿ ನಿರ್ಮಾಣವಾದ ಅಕ್ಷರದಾಸೋಹ ಕೊಠಡಿ ದುರವಸ್ಥೆಯಲ್ಲಿದೆ. ಕೊಠಡಿಯ ನೆಲದ ಕಾಂಕ್ರೀಟ್ ಎದ್ದುಹೋಗಿ ಅಲ್ಲಲ್ಲಿ ಹೊಂಡಗಳಾಗಿದೆ. ಯಾವುದೇ ಪಾತ್ರೆ, ಸ್ಟೌವ್ ಇಡಲಾರದ ಸ್ಥಿತಿ ಉಂಟಾಗಿದೆ. ಬಿಸಿಯೂಟದ ದಾಸ್ತಾನು ಕೊಠಡಿಗೆ ಭದ್ರತೆಯೇ ಇಲ್ಲ. ಕೊಠಡಿಯ ಗೋಡೆ, ಛಾವಣಿಯೂ ಸೋರುತಿದೆ. ಈ ಕೊಠಡಿಯಲ್ಲಿ ಇಲಿಗಳದ್ದೇ ಕಾರುಬಾರು. ದಿನಸಿ ಸಾಮಾಗ್ರಿ, ತರಕಾರಿಗಳು ಇಲಿಗಳ ಪಾಲಾಗುತ್ತಿದೆ. ನಮ್ಮ ಪಾಡನ್ನು ಯಾರಲ್ಲಿ ಹೇಳುವುದು ಎಂದು ಅಕ್ಷರದಾಸೋಹ ಸಿಬ್ಬಂದಿಗಳ ಮಾತು.


ನಲಿಕಲಿ ಕೊಠಡಿಗೆ ಕಿಟಕಿ ಬಾಗಿಲೇ ಇಲ್ಲ:
ನಲಿಕಲಿ ಕೊಠಡಿಗೆ ಇಬ್ಬರು ದಾನಿಗಳ ನೆರವಿನಿಂದ ಟೈಲ್ಸ್ ಅಳವಡಿಸಲಾಗಿದೆ. ಇದರಿಂದ ನಲಿಕಲಿ ಮಕ್ಕಳಿಗೆ ಉಪಯೋಗವಾಗಿದೆ. ಆದರೆ ನಲಿಕಲಿ ಕೊಠಡಿಗೆ ಯಾವುದೇ ಬಂದೋಬಸ್ತ್ ಇಲ್ಲ. ಇಲ್ಲಿ ಮೂರು ಕಿಟಕಿಗಳಿವೆ. ಆದರೆ ಕಿಟಕಿಗಳಿಗೆ ಬಾಗಿಲುಗಳ ವ್ಯವಸ್ಥೆ ಇಲ್ಲ. ಜೋರು ಮಳೆ ಬಂದರೆ ಮಳೆ ನೀರು ಕೊಠಡಿಯೊಳಗೆ ಬರುತ್ತದೆ. ಇದರಿಂದ ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ.


ಎಲ್‌ಕೆಜಿ ಆರಂಭವಾಗಿತ್ತು:
2023-24ರಲ್ಲಿ ಈ ಶಾಲೆಯಲ್ಲಿ ಸರಕಾರದ ಸುತ್ತೋಲೆ ಪ್ರಕಾರ ಎಲ್‌ಕೆಜಿ ತರಗತಿಯನ್ನು ಆರಂಭಿಸಲಾಗಿತ್ತು. ಸುಮಾರು 21 ವಿದ್ಯಾರ್ಥಿಗಳು ಎಲ್‌ಕೆಜಿ ತರಗತಿಗೆ ಪ್ರವೇಶಾತಿ ಪಡೆದಿದ್ದರು. ಇಬ್ಬರು ಶಿಕ್ಷಕರನ್ನೂ ಇದಕ್ಕಾಗಿ ನೇಮಕ ಮಾಡಲಾಗಿತ್ತು. ಒಂದು ವರ್ಷ ತರಗತಿ ನಡೆಸಲಾಗಿತ್ತು. ಈ ವರ್ಷ ಸರಕಾರದಿಂದ ಯಾವುದೇ ಮುನ್ಸೂಚನೆ ಬಾರದ ಕಾರಣ ತರಗತಿ ನಿಲ್ಲಿಸಲಾಗಿದೆ.


ಈ ಶಾಲೆಗೆ ಪ್ರವೇಶ ದ್ವಾರ, ಟೈಲ್ಸ್, ಪ್ರಿಂಟರ್, ಫ್ಯಾನ್, ಚಪ್ಪಲಿ ಸ್ಟ್ಯಾಂಡ್, ನೀರಿನ ಟ್ಯಾಂಕ್ ಮುಂತಾದ ವ್ಯವಸ್ಥೆಗಳನ್ನು ದಾನಿಗಳ ಸಹಕಾರದಿಂದ ಮಾಡಲಾಗಿದೆ. ಸಭಾಂಗಣ, ರಂಗಮಂಟಪ ವ್ಯವಸ್ಥೆ ಈ ಶಾಲೆಯ ಮುಖ್ಯ ಬೇಡಿಕೆಯಾಗಿದೆ. ವಲಯ ಮಟ್ಟ, ತಾಲೂಕು ಮಟ್ಟದ ಕಬಡ್ಡಿ ಈ ಶಾಲೆಯಲ್ಲಿ ನಡೆದಿದೆ. ರಾಷ್ಟ್ರಮಟ್ಟದಲ್ಲಿ ಬೆಳಗಿದ ಪ್ರತಿಭೆಗಳು ಈ ಶಾಲೆಯಲ್ಲಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಬೇರೇ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಉದ್ಯೋಗ, ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಇತಿಹಾಸವಿರುವ ಶಾಲೆಯನ್ನು ಉಳಿಸಿ ಬೆಳೆಸುವ ಇಚ್ಚಾಶಕ್ತಿಯನ್ನು ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಹೊಂದಬೇಕಾಗಿದೆ.

ಸರಕಾರ, ಇಲಾಖೆಗಳು ಯಾಕೆ ಸ್ಪಂದಿಸುತ್ತಿಲ್ಲ ಎಂದು ಗೊತ್ತಾಗುವುದಿಲ್ಲ. ಶಾಲೆಗೆ ಸಭಾಂಗಣ ಇಲ್ಲ. ಮುಖ್ಯಗುರುಗಳ ಕೊಠಡಿಯ ಮೇಲ್ಭಾಗದಲ್ಲಿ ಸಭಾಂಗಣ ಮಾಡಬೇಕಾಗಿದೆ. ನೀರಿನ ಸಮಸ್ಯೆಯೂ ಇದೆ. ಮೂಲಸೌಕರ್ಯಗಳು ಇಲ್ಲ. ಶಾಸಕರು ರೂ.5ಲಕ್ಷ ಅನುದಾನ ಭರವಸೆ ನೀಡಿದ್ದಾರೆ. ಹತ್ತಿರದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆ ಇರುವ ಕಾರಣ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.
ಸೂಫಿ ಬಾಂಟಡ್ಕ
ಎಸ್‌ಡಿಎಂಸಿ ಅಧ್ಯಕ್ಷರು

ಕ್ರೀಡಾಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ನಾನು 7ನೇ ತರಗತಿಯಲ್ಲಿರುವಾಗಲೇ ರಂಗಮಂದಿರಕ್ಕೆ ಬೇಡಿಕೆ ಇಟ್ಟಿದ್ದೆವು. ಅಕ್ಷರದಾಸೋಹ ಕೊಠಡಿಗಳನ್ನು ದುರಸ್ಥಿಗೊಳಿಸಬೇಕಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮುಖ್ಯವಾಗಿದೆ.
ಸಹದ್ ಇಬ್ರಾಹಿಂ
ಇಂಜಿನಿಯರ್, ಹಿರಿಯ ವಿದ್ಯಾರ್ಥಿ

LEAVE A REPLY

Please enter your comment!
Please enter your name here