ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರ ಕಲ್ಯಾಣ: ಅನಿಲ್‌ಕುಮಾರ್
ರಾಮಕುಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಗ್ರಾಮ ಪಂಚಾಯತ್ ರಾಮಕುಂಜ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ರಾಮಕುಂಜ ಇವರ ಸಹಯೋಗದೊಂದಿಗೆ ಕಡಬ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರ ತರಬೇತಿ ಮತ್ತು ಗಿಡ ನಾಟಿ ಕಾರ್ಯಕ್ರಮ ಜು.20ರಂದು ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್ ಅವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 55 ಲಕ್ಷ ಫಲಾನುಭವಿಗಳಿದ್ದಾರೆ. ಯೋಜನೆಯ ಮೂಲಕ ಬಡವರಿಗೆ ನೇರವಾಗಿ ಬ್ಯಾಂಕ್‌ಗಳಿಂದ ಮನೆ ಬಾಗಿಲಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಈ ತನಕ 1.25 ಲಕ್ಷ ಕೋಟಿ ರೂ. ಬಡವರಿಗೆ ಸದ್ವಿನಿಯೋಗವಾಗಿದೆ. 10 ಲಕ್ಷ ಕೋಟಿ ರೂ.ಆಸ್ತಿ ನಿರ್ಮಾಣ ಆಗಿದ್ದು ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರ ಕಲ್ಯಾಣ ಆಗಿದೆ ಎಂದರು. ಗ್ರಾಮಾಭಿವೃದ್ಧಿ ಯೋಜನೆ, ಶಿಕ್ಷಣ ಸಂಸ್ಥೆಗಳ ಸಹಿತ ಧರ್ಮಸ್ಥಳದ ಎಲ್ಲಾ ಯೋಜನೆಗಳೂ ಚಾರಿಟೇಬಲ್ ಟ್ರಸ್ಟ್ ಮೂಲಕ ನಡೆಯುತ್ತಿದೆ. ಸಾಮಾಜಿಕ ಚಟುವಟಿಕೆಗಳಿಗೆ, ಶೌರ್ಯ ವಿಪತ್ತು ನಿರ್ವಹಣೆಗೆ ಕೋಟ್ಯಾಂತರ ರೂ. ವ್ಯಯಿಸಲಾಗುತ್ತಿದೆ. 13 ಲಕ್ಷ ಹೊಸ ಮನೆ ನಿರ್ಮಾಣ, ಮನೆ ದುರಸ್ತಿಗೆ ಸಾಲ ಸೌಲಭ್ಯ, 12 ಸಾವಿರ ಸೇವಾಕೇಂದ್ರಗಳ ಮೂಲಕ ಪ್ರತಿದಿನ 8 ಲಕ್ಷ ಸದಸ್ಯರಿಗೆ ಸೇವೆ, 40 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 17 ಸಾವಿರ ನಿರ್ಗತಿಕರಿಗೆ ಮಾಸಾಶನ, ಗ್ರಾಮೀಣ ಪ್ರದೇಶದ 1 ಸಾವಿರ ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ನೇಮಕ, 5 ಲಕ್ಷ ಶೌಚಾಲಯ ನಿರ್ಮಾಣ, 750 ಕೆರೆ ನಿರ್ಮಾಣ, 23 ಲಕ್ಷ ಲೀ. ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ನಾನಾ ರೀತಿಯ ಸಾಮಾಜಿಕ ಚಟುವಟಿಕೆ ಮೂಲಕ ಬಡವರ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನ ಜಾಗೃತಿ ವೇದಿಕೆ ದ.ಕ.ಜಿಲ್ಲಾ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಅವರು ಮಾತನಾಡಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸೈನಿಕರಂತೆ ಹಳ್ಳಿ ಹಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ಕೆ., ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಚೇತಾ ಸಂದರ್ಭೋಚಿತವಾಗಿ ಮಾತನಾಡಿದರು. ಮಂಗಳೂರಿನ ಉಷಾ ಫೈರ್ ಸೇಪ್ಟಿ ಕಂಪನಿಯ ತರಬೇತಿದಾರರಾದ ಸಂತೋಷ್ ಪೀಟರ್ ಡಿ ಸೋಜಾ, ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಾಲತಿ ಕದ್ರ, ಪ್ರಗತಿ ಬಂಧು ಒಕ್ಕೂಟದ ಗೋಳಿತ್ತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ ಸವಣೂರು, ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ, ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ -2 ನಿರ್ದೇಶಕರಾದ ಪ್ರವೀಣ್ ಕುಮಾರ್, ಸುಳ್ಯ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀ ನಾರಾಯಣ ರಾವ್ ಆತೂರು, ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್‌ಗಳಾದ ಪ್ರಶಾಂತ್, ಮನೋಜ್, ಜಯರಾಮ, ಕ್ಯಾಪ್ಟನ್‌ಗಳಾದ ಭವಾನಿ ಶಂಕರ, ಸುರೇಶ್, ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಜೈವಂತ್ ಪಟಗಾರ್ ವರದಿ ವಾಚಿಸಿದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಸ್ವಾಗತಿಸಿ, ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ವಂದಿಸಿದರು. ಉಡುಪಿ ಪ್ರಾದೇಶಿಕ ಕಚೇರಿ ಜನ ಜಾಗೃತಿ ಯೋಜನಾಧಿಕಾರಿ ಗಣೇಶ ಆಚಾರ್ಯ ನಿರೂಪಿಸಿದರು. ಶೌರ್ಯ ಮಾಸ್ಟರ್ ಪ್ರಶಾಂತ್ ಪ್ರಾರ್ಥಿಸಿದರು.
ಸವಲತ್ತು ವಿತರಣೆ:
ಸಮಾರಂಭದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಒಕ್ಕೂಟದ ಪದಾಧಿಕಾರಿಗಳಿಗೆ ಸಸಿಗಳ ವಿತರಣೆ ಮಾಡಲಾಯಿತು. ಸಾಧಕ ಶೌರ್ಯ ಘಟಕಗಳಿಗೆ ಪ್ರಮಾಣ ಪತ್ರ, ವಿವಿಧ ಅನುದಾನಗಳ ವಿತರಣೆ ಮಾಡಲಾಯಿತು.
ಗಿಡ ನಾಟಿ:
ಆರಂಭದಲ್ಲಿ ಹಿಂದೂ ರುದ್ರ ಭೂಮಿಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಗಿಡಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಂಗಳೂರಿನ ಉಷಾ ಫೈರ್ ಸೇಪ್ಟಿ ಕಂಪನಿಯ ತರಬೇತಿದಾರರಾದ ಸಂತೋಷ್ ಪೀಟರ್ ಡಿ ಸೋಜಾ ಅವರು ತರಬೇತಿ ನೀಡಿದರು.