9/11,ಕಟ್ ಕನ್ವರ್ಶನ್ ಸಮಸ್ಯೆ ಇತ್ಯರ್ಥಪಡಿಸಿ-ಸರಕಾರಕ್ಕೆ ಶಾಸಕ ಅಶೋಕ್ ರೈ ಆಗ್ರಹ-ಸುನೀಲ್ ಕುಮಾರ್ ಬೆಂಬಲ

0

ಪುತ್ತೂರು:ಗ್ರಾಮೀಣ ಭಾಗದಲ್ಲಿ ವಸತಿ,ವಾಣಿಜ್ಯಕ್ಕೆ ಸಂಬಂಧಿಸಿದಂತೆ ಏಕ ವಿನ್ಯಾಸ ನಕ್ಷೆ ಮತ್ತು 9/11ನಿಂದ ಜನರಿಗೆ ತುಂಬಾ ತೊಂದರೆಯಾಗಿದ್ದು ಈ ಹಿಂದೆ ಇದ್ದ ನಿಯಮವನ್ನೇ ಮತ್ತೆ ಜಾರಿಗೆ ತರುವ ಮೂಲಕ ಈ ಎರಡೂ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದರು.ಇದು ಗಂಭೀರ ವಿಚಾರವಾಗಿರುವುದರಿಂದ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಕಂದಾಯ ಸಚಿವರಿಗೆ ಸ್ಪೀಕರ್ ಯು.ಟಿ.ಖಾದರ್ ಸೂಚನೆ ನೀಡಿದರು.


ಹಿಂದಿನ ನಿಯಮವನ್ನೇ ಜಾರಿಗೆ ತನ್ನಿ:
ಈ ಹಿಂದೆ ಗ್ರಾಮಾಂತರ ಭಾಗದಲ್ಲಿ ಗ್ರಾ.ಪಂ ಕಚೇರಿಯಲ್ಲೇ 25 ಸೆಂಟ್ಸ್ ತನಕ 9/11 ಮಾಡಲಾಗುತ್ತಿತ್ತು.ಒಂದು ಎಕ್ರೆತನಕ ಇಒ ಮೂಲಕ ಮಾಡಲಾಗುತ್ತಿತ್ತು,ಆದರೆ ಈಗ ಎಲ್ಲವನ್ನೂ ನಗರ ಪಾಲಿಕಾ ವ್ಯಾಪ್ತಿಯ ಮೂಡಾದಲ್ಲಿ ಮಾಡಿಸಿಕೊಳ್ಳಬೇಕಾಗಿದೆ.ಈ ನಿಯಮ ಗ್ರಾಮಾಂತರ ಪ್ರದೇಶದಲ್ಲಿ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ.ನಮ್ಮ ಗ್ರಾಮೀಣ ಭಾಗದ ಜನತೆ ಮನೆ ಕಟ್ಟುವಾಗ 9/11 ಮಾಡಿಸಿಕೊಳ್ಳಬೇಕಾದರೆ ಮಂಗಳೂರಿಗೆ ತೆರಳಬೇಕಿದೆ.ಯಾರೋ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಹಳೆಯ ನಿಯಮವನ್ನು ಬದಲಾವಣೆ ಮಾಡಿದ್ದಾರೆ.ಈ ಗಂಭೀರ ವಿಚಾರವನ್ನು ನಾನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ ಖರ್ಗೆ ಹಾಗೂ ನಗರಾಭಿವೃದ್ದಿ ಸಚಿವರ ಗಮನಕ್ಕೂ ತಂದಿದ್ದೇನೆ.ಈ ಸಮಸ್ಯೆಯನ್ನು ಇತ್ಯರ್ಥ ಮಾಡಲೇಬೇಕು.ಇತ್ಯರ್ಥ ಮಾಡದೇ ಇದ್ದರೆ ಇದೊಂದು ಗಂಭೀರ ಸಮಸ್ಯೆಯಾಗಿ,ಜನರಿಗೆ ತೊಂದರೆ ನೀಡಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಸದನದಲ್ಲಿ ಹೇಳಿದರು.


ಏಕ ವಿನ್ಯಾಸ ಸಮಸ್ಯೆ:
ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಏಕ ವಿನ್ಯಾಸ ಸಮಸ್ಯೆ ಇದೆ.ಒಬ್ಬ ವ್ಯಕ್ತಿಗೆ 5 ಎಕ್ರೆ ಜಾಗವಿದ್ದಲ್ಲಿ ಅದನ್ನು ಕಟ್ ಕನ್ವರ್ಶನ್ ಮಾಡುವ ಹಾಗಿಲ್ಲ.ಒಂದು ವೇಳೆ ಕನ್ವರ್ಶನ್ ಮಾಡಬೇಕಾದರೆ 5 ಎಕ್ರೆ ಜಾಗವನ್ನು ಸರಕಾರಕ್ಕೆ ವಹಿಸಿ ಆ ಬಳಿಕ ಕನ್ವರ್ಶನ್ ಮಾಡಬೇಕಿದೆ.ಕನ್ವರ್ಶನ್ ಮಾಡಬೇಕಾದರೆ ಈ ಜಾಗಕ್ಕೆ ಹೋಗುವಲ್ಲಿ ಸರಕಾರಿ ರಸ್ತೆಯೂ ಇರಬೇಕು ಮತ್ತು ರಸ್ತೆಯನ್ನೂ ಕನ್ವರ್ಶನ್ ಮಾಡಬೇಕು ಎಂಬ ನಿಯಮವಿದೆ.ಇದರಿಂದ ಜನತೆಗೆ ತುಂಬಾ ತೊಂದರೆಯಾಗಿದೆ.ಏಕ ವಿನ್ಯಾಸ ನಕ್ಷೆಯಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ.ಇದು ಅತ್ಯಂತ ಕೆಟ್ಟ ನಿಯಮವಾಗಿದೆ.ಮನೆ ಕಟ್ಟಲು ಬ್ಯಾಂಕ್ ಲೋನ್ ಪಡೆಯಲೂ ಈ ನಕ್ಷೆಯ ಕಾರಣದಿಂದ ಸಾಧ್ಯವಾಗುತ್ತಿಲ್ಲ.ಜನರು ದಿನಾ ನನ್ನ ಕಚೇರಿಗೆ ಬಂದು ಇದೇ ಸಮಸ್ಯೆಯನ್ನು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ನಿಯಮವನ್ನು ಮತ್ತೆ ಎಂದೂ ಮುಂದುವರೆಸಬಾರದು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹಳೆಯ ನಿಯಮವನ್ನು ಮತ್ತೆ ವ್ಯವಸ್ಥೆಗೆ ತರಬೇಕು ಎಂದು ಶಾಸಕ ರೈ ಆಗ್ರಹಿಸಿದರು.


ಒಂದು ಅರ್ಜಿಗೆ ಮೂರು ತಿಂಗಳು ಬೇಕು:
ಮೂಡಾದಲ್ಲಿ ಸಿಬ್ಬಂದಿ ಕೊರತೆ ಇದೆ,ಅಲ್ಲಿದ್ದವರಿಗೆ ಸರಿಯಾದ ಮಾಹಿತಿಯೂ ಇಲ್ಲ.ಪುತ್ತೂರು ತಾಲೂಕಿನಲ್ಲಿರುವ ಗ್ರಾಮೀಣ ಭಾಗದ ಜನರು ಮನೆ ಕಟ್ಟಬೇಕಾದರೆ 9/11 ಮತ್ತು ಏಕ ವಿನ್ಯಾಸ ನಕ್ಷೆ ಪಡೆಯಲು ದೂರದ ಮಂಗಳೂರಿಗೆ ಓಡಾಡಬೇಕು.ಬಡವರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ.ಎಲ್ಲಿಗೆ ಹೋಗಬೇಕು? ಹೇಗೆ ಹೋಗಬೇಕು ಎಂಬ ವಿಚಾರವೇ ಗೊತ್ತಿಲ್ಲದ ಕಾರಣ ಅವರು ತೀವ್ರ ಸಂಕಷ್ಟವನ್ನು ಎದರಿಸುತ್ತಿದ್ದಾರೆ.ಸ್ಪೀಕರ್ ಅವರೇ, ಈ ವಿಚಾರ, ಇದರ ಸಂಕಷ್ಟ ನಿಮಗೂ ಗೊತ್ತಿದೆ.ಈ ಕಾರಣಕ್ಕೆ 9/11 ಮತ್ತು ಏಕ ವಿನ್ಯಾಸ ಸಮಸ್ಯೆಯನ್ನು ಸರಕಾರ ಶೀಘ್ರವೇ ಬಗೆಹರಿಸಬೇಕು ಎಂದು ಶಾಸಕರು ಆಗ್ರಹಿಸಿದರು.


ಲೋಕಲ್ ಬಾಡಿಗೆ ಅವಕಾಶ ನೀಡಬೇಕು:
25 ಸೆಂಟ್ಸ್ ತನಕ ಗ್ರಾಮ ಪಂಚಾಯತ್ ಮತ್ತು 1 ಎಕ್ರೆ ತನಕ ಇಒ ಅವರಿಗೆ 9/11 ಮತ್ತು ಏಕ ವಿನ್ಯಾಸ ನಕ್ಷೆ ಮಾಡಲು ಅಽಕಾರ ಕೊಡಬೇಕು.ಗ್ರಾಮಾಂತರ ಪ್ರದೇಶದ ಜನತೆಗೆ ತೊಂದರೆ ಕೊಡಬಾರದು, ಮನೆ ಕಟ್ಟುವವರಿಗೆ ತೊಂದರೆ ನೀಡಬಾರದು.ಸರಕಾರ ಹೊಸ ನಿಯಮವನ್ನು ಬದಲಾವಣೆ ಮಾಡುವ ಮೂಲಕ ಜನಪರ ನಿಯಮವನ್ನು ಕೂಡಲೇ ಜಾರಿಗೆ ತರಬೇಕು ಎಂದು ಶಾಸಕರು ಆಗ್ರಹಿಸಿದರು.


ಈರೆಗ್‌ಲಾ ಗೊತ್ತುಂಡು:
ಸದನದಲ್ಲಿ ಮಾತನಾಡುತ್ತಿದ್ದ ಶಾಸಕ ಅಶೋಕ್ ಕುಮಾರ್ ರೈಯವರು ಮಧ್ಯದಲ್ಲಿ ತುಳುವಿನಲ್ಲಿ ಮಾತನಾಡಿ, ಮಾನ್ಯ ಸಭಾಧ್ಯಕ್ಷರೇ ಈ ವಿಚಾರ ಈರೆಗ್‌ಲಾ ಗೊತ್ತುಂಡು,ಈರ್‌ನಾಡೆಗ್‌ಲಾ ಜನ ಬರ್ಪೆರ್..ಎಂದು ಹೇಳಿ ಗಮನ ಸೆಳೆದರು.ನಾನು ಊರಿಗೆ ಹೋಗುವಾಗ ಏರ್‌ಪೋರ್ಟಿನಲ್ಲೇ ಜನ ಈ ವಿಚಾರದ ಬಗ್ಗೆ ಹೇಳಲು ಕಾಯುತ್ತಿರುತ್ತಾರೆ.ಅವರಿಗೆ ಏನು ಉತ್ತರ ಕೊಡಬೇಕು. ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ ಎಂಬುದನ್ನು ಸರಕಾರ ಗಮನಿಸಬೇಕು ಎಂದು ಶಾಸಕರು ಹೇಳಿದರು.


ಬೆಂಬಲ ಸೂಚಿಸಿದ ಶಾಸಕ ಸುನಿಲ್ ಕುಮಾರ್:
ಅಶೋಕ್ ಕುಮಾರ್ ರೈಯವರು ಪ್ರಸ್ತಾಪಿಸಿದ ವಿಚಾರಕ್ಕೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಬೆಂಬಲ ಸೂಚಿಸಿದರು.ಶಾಸಕ ಅಶೋಕ್ ರೈ ಹೇಳಿರುವುದು ಗಂಭೀರ ವಿಚಾರ.ಕೋರ್ಟು ಆದೇಶದ ಪ್ರಕಾರ ನಗರ ಪಾಲಿಕೆಗೆ ಶಿಫ್ಟ್ ಆಗಿದೆ ಎಂದು ಕೈ ಕಟ್ಟಿ ಕೂರಬೇಡಿ.ಗ್ರಾಮೀಣ ಭಾಗದ ಜನರು ಅರ್ಜಿ ಹಿಡಿದು ನಗರಪಾಲಿಕೆಗೆ ತೆರಳಬೇಕು.ಆದೇಶಕ್ಕೆ ತಿದ್ದುಪಡಿ ತರುವ ಕೆಲಸವನ್ನು ಮಾಡಿದರೆ ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ ಸುನಿಲ್ ಕುಮಾರ್, ಈ ಹಿಂದೆ ಯಾವ ನಿಯಮವಿತ್ತೋ ಅದನ್ನೇ ಮತ್ತೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here