ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಹೆತ್ತವರ ಸಭೆ

0

ಮಕ್ಕಳಲ್ಲಿನ ಕೌಶಲ್ಯಗಳನ್ನು ಹೆತ್ತವರು ಗುರುತಿಸಬೇಕು : ಸತ್ಯನಾರಾಯಣ ಶರ್ಮ

ಪುತ್ತೂರು: ಹೆತ್ತವರು ತಮ್ಮ ಮಗುವಿನಲ್ಲಿ ಅಡಕವಾಗಿರುವ ಕೌಶಲ್ಯಗಳನ್ನು ಕಂಡುಹಿಡಿಯಬೇಕು. ಸಮಾಜದಲ್ಲಿ ಹೆಚ್ಚು ಸಂಪಾದನೆ ಮಾಡುವ ಕೋರ್ಸ್‌ಗಳನ್ನೇ ಓದುವಂತೆ ಮಕ್ಕಳನ್ನು ಬಲವಂತ ಪಡಿಸದೆ, ಅವರ ಆಸಕ್ತಿಯಿರುವ ಕ್ಷೇತ್ರವನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಬದಿಯಡ್ಕದ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾನುವಾರ ನಡೆದ ರಕ್ಷಕ – ಶಿಕ್ಷಕ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಓದಿನಲ್ಲಿ ಚಿನ್ನದ ಪದಕ ಸಿಕ್ಕಿದವ ಮಾತ್ರ ಅನ್ನ ಊಟ ಮಾಡುವುದಿಲ್ಲ ಅಥವ ಅನುತ್ತೀರ್ಣರಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಇಂದಿನ ಸಮಾಜದಲ್ಲಿ ಮಕ್ಕಳಿಗೆ ವಿಫುಲವಾದ ಅವಕಾಶಗಳಿವೆ. ಹಾಗಾಗಿ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಎಳೆ ವಯಸ್ಸಿನಲ್ಲಿ ಮಕ್ಕಳನ್ನು ತಿದ್ದಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡುವುದು ಸುಲಭ ಎಂದರಲ್ಲದೆ ಶಿಕ್ಷಕರು ಹಾಗೂ ಹೆತ್ತವರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯ. ಆರೋಗ್ಯಯುಕ್ತ ಸಮಾಜದ ನಿರ್ಮಾಣದಲ್ಲಿ ಹೆತ್ತವರ ಹಾಗೂ ಶಿಕ್ಷಕರ ಪಾತ್ರ ಅತ್ಯಂತ ಗಣನೀಯವಾದದ್ದು ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಮಕ್ಕಳು ದೇಶ ಭಕ್ತಿ, ಧರ್ಮ ಪ್ರಜ್ಞೆಯನ್ನು ಎಳವೆಯಲ್ಲೇ ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದೇಶಭಕ್ತರಾಗಿ ರೂಪುಗೊಳ್ಳಲು ಶಿಕ್ಷಕರ ಹಾಗೂ ಹೆತ್ತವರ ಪಾತ್ರ ಅತ್ಯಂತ ಪ್ರಮುಖವಾದದ್ದು. ಕಷ್ಟದ ಪರಿಸ್ಥಿತಿಯನ್ನು ಎದುರಿಸಿ ಸಮಾಜದಲ್ಲಿ ಬಾಳುವಂತೆ ಮಕ್ಕಳನ್ನು ರೂಪಿಸಬೇಕು ಎಂದು ನುಡಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಪ್ರಸಾದ್, ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲೆ ಸುಚಿತ್ರ ಪ್ರಭು ಸ್ವಾಗತಿಸಿದರು. ಉಪನ್ಯಾಸಕಿ ಕೃತಿ ನಿರೂಪಿಸಿ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here