ನೆಲ್ಯಾಡಿ: ಗಾಳಿಮಳೆಗೆ ಮನೆ ಮೇಲೆ ಮರಬಿದ್ದು ಮನೆ ಹಾನಿಗೊಂಡಿರುವ ಘಟನೆ ಬಜತ್ತೂರು ಗ್ರಾಮದ ಕುಂಟಿನಿ ಎಂಬಲ್ಲಿ ಜು.23ರಂದು ಬೆಳಿಗ್ಗೆ ನಡೆದಿದೆ.
ಕುಂಟಿನಿ ನಿವಾಸಿ ಮೋನಪ್ಪ ಗೌಡ ಎಂಬವರ ಮನೆ ಮೇಲೆ ಪಕ್ಕದ ಸರಕಾರಿ ಜಾಗದಲ್ಲಿದ್ದ ಒಣಗಿದ ಗಾಳಿಮರವೊಂದು ಬೆಳಿಗ್ಗೆ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಮುರಿದು ಬಿದ್ದಿದೆ. ಘಟನೆಯಿಂದ ಮನೆಯ ಹಂಚು, ಪಕ್ಕಾಸುಗಳು ಹಾನಿಗೊಂಡಿವೆ. ಮನೆ ಮುಂಭಾಗದ ಸಿಮೆಂಟ್ ಶೀಟ್‌ಗಳು ಹುಡಿಯಾಗಿವೆ. ಮರಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಮೋನಪ್ಪ ಗೌಡರವರ ತಾಯಿ, 80 ವರ್ಷದ ವೃದ್ಧೆ ಪೂವಕ್ಕ ಹಾಗೂ ಪತ್ನಿ ಮನೆಯಲ್ಲಿದ್ದು ಅಪಾಯದಿಂದ ಪಾರಾಗಿದ್ದಾರೆ.
ಗ್ರಾ.ಪಂ.ನಿಂದ ಪರಿಹಾರ:
ಹಾನಿಗೊಂಡಿರುವ ಮನೆಗೆ ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ ಪಿ.ಎನ್., ಪಿಡಿಒ ಚಂದ್ರಮತಿ, ಮಾಜಿ ಅಧ್ಯಕ್ಷೆ ಪ್ರೇಮಾ, ಸದಸ್ಯ ಮೋನಪ್ಪ ಗೌಡ ಬೆದ್ರೋಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾ.ಪಂ.ನಿಂದ 5 ಸಾವಿರ ರೂ.ತುರ್ತು ಪರಿಹಾರ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮಸ್ಥರ ಸಹಕಾರದಿಂದ ದುರಸ್ತಿ:
ಹಾನಿಗೊಂಡಿದ್ದ ಮೋನಪ್ಪ ಗೌಡ ಅವರ ಮನೆಯನ್ನು ಗ್ರಾಮಸ್ಥರ ಸಹಕಾರದಿಂದ ಸಂಜೆ ವೇಳೆಗೆ ದುರಸ್ತಿಗೊಳಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಪಕ್ಕಾಸು ಹಾಗೂ ಹಂಚು ತಂದು ಮನೆ ಮಾಡು ದುರಸ್ತಿಗೊಳಿಸಿದ್ದಾರೆ.