ಕಸ ಸಂಗ್ರಹದ ಶುಲ್ಕ ವಸೂಲಾತಿ ವಿಚಾರ-ಒಂದೋ ಹೆಚ್ಚುವರಿ ಸಿಬ್ಬಂದಿ ಕೊಡಿ: ಸಂಜೀವಿನಿಯವರಿಗೆ ಜವಾಬ್ದಾರಿ ಕೊಡಿ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹದ ಶುಲ್ಕ ವಸೂಲಾತಿಯಾಗದಿರುವ ಕುರಿತು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ತೀವೃ ಚರ್ಚೆಯಾಗಿದ್ದು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಕೆ. ಬಂಗೇರ, ಶುಲ್ಕ ವಸೂಲಾತಿಗೆ ಒಂದೋ ಹೆಚ್ಚುವರಿ ಸಿಬ್ಬಂದಿ ಕೊಡಿ. ಇಲ್ಲದಿದ್ದರೆ ಸಭೆ ಕರೆದು ಆ ಜವಾಬ್ದಾರಿಯನ್ನು ಸಂಜೀವಿನಿಯವರಿಗೆ ಒಪ್ಪಿಸಿ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರಶಾಂತ್ ಕುಮಾರ್, ತ್ಯಾಜ್ಯ ವಿಲೇವಾರಿ ಮಾಡುವವರಿಗೆ ನಾವು ತಿಂಗಳಿಗೆ 75 ಸಾವಿರ ರೂಪಾಯಿ ಕೊಡುತ್ತೇವೆ. ಆದರೆ ಕಸ ಸಂಗ್ರಹಕ್ಕೆ ಗ್ರಾಮಸ್ಥರಿಂದ ಶುಲ್ಕ ವಸೂಲಾತಿ ಆಗುತ್ತಿಲ್ಲ. ರಸ್ತೆ ಇದ್ದರೂ ಕೆಲವು ಕಡೆ ಕಸದ ವಾಹನ ಬರುತ್ತಿಲ್ಲ. ಅವರು ಸಮಯ ಪಾಲನೆಯನ್ನೂ ಮಾಡುತ್ತಿಲ್ಲ. ಒಂದು ದಿನ ಒಂದು ಸಮಯಕ್ಕೆ ಬಂದರೆ ಇನ್ನೊಂದು ದಿನ ಮತ್ತೊಂದು ಸಮಯಕ್ಕೆ ಹಾಗೆ ಅವರಿಗೆ ಖುಷಿ ಬಂದ ಟೈಂಗೆ ಮನೆ ಬಾಗಿಲಿಗೆ ಬರುತ್ತಾರೆ. ಗೇಟ್ನಲ್ಲಿ ಕಸವನ್ನು ನೇತಾಡಿಸಿದ್ರೆ ಅವರು ತೆಗೆದುಕೊಳ್ಳೋದಿಲ್ಲ. ಆದ್ದರಿಂದ ಇವರು ಸಮಯ ಪಾಲನೆ ಮಾಡದಿರುವುದರಿಂದ ಕೆಲಸಕ್ಕೆ ಹೋಗುವವರಿಗೆ ಕಷ್ಟವಾಗಿದ್ದು, ಇವರನ್ನು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಶುಲ್ಕ ವಸೂಲಾತಿ ಆಗದಿರುವ ವಿಚಾರವಾಗಿ ಮಾತನಾಡಿದ ಪ್ರಶಾಂತ್ ಕುಮಾರ್ ಎನ್., ಕೆಲವು ವಾರ್ಡ್ಗಳಲ್ಲಿ ಕಳೆದ ಮೂರು ವರ್ಷದಿಂದ ಕಸ ಸಂಗ್ರಹದ ಶುಲ್ಕ ಪಾವತಿಸದವರೂ ಇದ್ದಾರೆ. ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ. ಇಲ್ಲಿಗೆ ಅವರ ಅಗತ್ಯ ಕೆಲಸಕ್ಕಾಗಿ ಬಂದಾಗ ಗ್ರಾಮಸ್ಥರಿಂದ ಶುಲ್ಕ ವಸೂಲಾತಿ ಮಾಡಬೇಕು. ಪ್ರತಿ ತಿಂಗಳು ಒಂದೊಂದು ವಾರ್ಡ್ ಶುಲ್ಕ ವಸೂಲಾತಿ ಜವಾಬ್ದಾರಿಯನ್ನು ಪಂಚಾಯತ್ನ ಸಿಬ್ಬಂದಿಗೆ ನೀಡಿ. ಅದರ ಕಮಿಷನ್ ಕೂಡಾ ಅವರಿಗೆ ನೀಡಿ ಎಂದರು. ಅದಕ್ಕುತ್ತರಿಸಿದ ಪಿಡಿಒ ಸತೀಶ್ ಬಂಗೇರ, ಇಲ್ಲಿ ಸ್ವಚ್ಛತಾ ಸಿಬ್ಬಂದಿಯಿದ್ದರೂ, ಅವರಿಗೆ ವಸೂಲಾತಿಯ ಅಧಿಕಾರವಿಲ್ಲ. ಶುಲ್ಕ ವಸೂಲಾತಿಗಾಗಿ ಇಲ್ಲಿಗೆ ಹೆಚ್ಚುವರಿ ಸಿಬ್ಬಂದಿಯೋರ್ವರು ಬೇಕಾಗಿದ್ದಾರೆ. ಅದಕ್ಕೆ ನಿರ್ಣಯ ಮಾಡಿ. ಈಗಾಗಲೇ ಇದರ ಜವಾಬ್ದಾರಿಯನ್ನು ಸಂಜೀವಿನಿಯವರಿಗೆ ನೀಡಬೇಕೆಂಬ ಸರಕಾರದ ಸುತ್ತೋಲೆ ಇದೆ. ಅವರು ಅದನ್ನು ಮಾಡಲೇ ಬೇಕು. ಆದ್ದರಿಂದ ಪಂಚಾಯತ್ ಸದಸ್ಯರು ಅವರ ಸಭೆ ಕರೆದು, ಆ ಸಭೆಯಲ್ಲಿ ಅವರಿಗೆ ಈ ಜವಾಬ್ದಾರಿಯನ್ನು ಹೊರಿಸಿ ಎಂದರು. ಈ ಬಗ್ಗೆ ಸದಸ್ಯರು ಸಮ್ಮತಿ ಸೂಚಿಸಿದರು.
ಬೇರಿಕೆ ಎಂಬಲ್ಲಿರುವ ಬಸ್ ನಿಲ್ದಾಣ ಬಳಿಯ ರಾಜ್ಯ ಹೆದ್ದಾರಿಯ ಮಾರ್ಜಿನ್ನಲ್ಲಿ ಅನಧಿಕೃತ ತರಕಾರಿ ಅಂಗಡಿಯೊಂದಿದ್ದು, ಅದನ್ನು ತೆರವುಗೊಳಿಸಬೇಕೆಂದು ರುಕ್ಮಿಣಿ ಎಂಬವರು ಅರ್ಜಿ ಕೊಟ್ಟಿರುವ ವಿಷಯವಾಗಿ ಸಭೆಯಲ್ಲಿ ಚರ್ಚೆ ನಡೆದು, ಅದನ್ನು ತೆರವುಗೊಳಿಸಲು ಸದಸ್ಯರು ಸೂಚಿಸಿದರು. ಆಗ ಪಿಡಿಒ ಅವರು ನಾನು ತೆರವು ಮಾಡುತ್ತೇನೆ. ಆದರೆ ಸದಸ್ಯರೂ ಬರಬೇಕು ಎಂದರು. ಆಗ ಪ್ರಶಾಂತ್ ಕುಮಾರ್ ಮಾತನಾಡಿ ಸದಸ್ಯರು ಯಾಕೆ? ನಮ್ಮ ಅಧ್ಯಕ್ಷರನ್ನು ಕರೆದುಕೊಳ್ಳಿ ಎಂದರು. ಆಗ ಅಧ್ಯಕ್ಷರು ತೆರವುಗೊಳಿಸುವ ಜವಾಬ್ದಾರಿ ಅಧಿಕಾರಿಯವರದ್ದು. ಅದಕ್ಕೆ ನಾವು ಯಾಕೆ? ನೀವೇ ಹೋಗಿ ತೆರವುಗೊಳಿಸಿ ಎಂದರು.
ಗ್ರಂಥಾಲಯ ಸಿಬ್ಬಂದಿಯ ತರಬೇತಿ ವೆಚ್ಚ 5,700ನ್ನು ಗ್ರಾ.ಪಂ.ನ ನಿಧಿ- 1ರಿಂದ ಪಾವತಿಸಲು ಜಿ.ಪಂ. ಆದೇಶ ಮಾಡಿರುವ ಕುರಿತು ಪಿಡಿಒ ಅವರು ವಿಷಯ ಪ್ರಸ್ತಾಪಿಸಿದಾಗ ಮಾತನಾಡಿನ ಸದಸ್ಯ ಪ್ರಶಾಂತ್ ಕುಮಾರ್, ಗ್ರಂಥಾಲಯ ಸಿಬ್ಬಂದಿಯನ್ನು ತರಬೇತಿಗೆ ಆಯ್ಕೆ ಮಾಡಿದ ಬಗ್ಗೆ ಗ್ರಾ.ಪಂ.ಗೆ ಮಾಹಿತಿಯಿಲ್ಲ. ಇದ್ಯಾವುದೇ ಮಾಹಿತಿ ಗ್ರಾ.ಪಂ.ಗೆ ನೀಡದಿರುವುದರಿಂದ ಅವರ ತರಬೇತಿ ಶುಲ್ಕವನ್ನು ಗ್ರಾ.ಪಂ. ಸ್ವಂತ ನಿಧಿಯಿಂದ ಯಾಕೆ ಭರಿಸಬೇಕು. ಇದಕ್ಕೆ ನನ್ನದು ಆಕ್ಷೇಪವಿದೆ ಎಂದರು. ಈ ಬಗ್ಗೆ ಸಮಗ್ರ ಚರ್ಚೆಯಾಗಿ ಸದಸ್ಯರೆಲ್ಲರೂ ಜಿ.ಪಂ.ನ ಈ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಗ್ರಂಥಾಲಯದ ದಿನದ ಖರ್ಚನ್ನು ಗ್ರಾ.ಪಂ.ನ ನಿಧಿ- 1ಕ್ಕೆ ಪಾವತಿಸುವುದಾಗಿ ಜಿ.ಪಂ. ಸುತ್ತೋಲೆ ನೀಡಿದೆ. ಆದರೆ ಈ ಮೊತ್ತವೂ ಈವರೆಗೆ ಪಾವತಿಯಾಗಿಲ್ಲ. ಆದ್ದರಿಂದ ಈ ಮೊತ್ತದ ಪಾವತಿಗೆ ಜಿ.ಪಂ.ಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. 34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ಬೇರಿಕೆ – ಬೊಳಂತಿಲದ ತನಕ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್ಗೆ ಹಾನಿಯುಂಟಾದರೆ ಅದನ್ನು ಅವರೇ ಸರಿಮಾಡಿಕೊಡಬೇಕು ಹಾಗೂ ಅವರು ರಸ್ತೆಯ ಬದಿ ಚರಂಡಿ ನಿರ್ಮಾಣ ಮಾಡುವಾಗ ಅವರು ಮಾಡಿದ ಚರಂಡಿ ತಗ್ಗು ಪ್ರದೇಶದಲ್ಲಿದ್ದರೆ, ಮನೆಯವರು ಅವರ ಮನೆಗೆ ಹೋಗಲೆಂದು ಹಾಕಲಾದ ಮೋರಿ ಎತ್ತರದ ಪ್ರದೇಶದಲ್ಲಿದೆ. ಆದ್ದರಿಂದ ಇದನ್ನು ಸರಿಪಡಿಸಬೇಕೆಂದು ಸದಸ್ಯರು ಆಗ್ರಹಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ನೆಡುತೋಪಿನಿಂದ ಮರಗಳನ್ನು ಕಡಿಯುವಾಗ ಅದರ 50ಶೇ. ಹಣವನ್ನು ಗ್ರಾ.ಪಂ.ಗೆ ಪಾವತಿಸಬೇಕೆಂದು ಆದೇಶವಿದೆ. ಆದರೆ ೩೪ ನೆಕ್ಕಿಲಾಡಿಯ ಶಕ್ತಿನಗರದ ಇಂದಾಜೆ ಬಳಿ ಸಾಮಾಜಿಕ ಅರಣ್ಯ ಇಲಾಖೆಯ ನೆಡುತೋಪಿನಿಂದ ಸಾಮಾಜಿಕ ಅರಣ್ಯ ಇಲಾಖೆಯವರು ಮರಗಳನ್ನು ಕಡಿದಿದ್ದು, ಅದರ ಶೇ.೫೦ ಹಣವನ್ನು ಗ್ರಾ.ಪಂ.ಗೆ ಪಾವತಿಸಿಲ್ಲ. ಈ ಹಣದ ಪಾವತಿಗೆ ಕೋರಿ ಸಾಮಾಜಿಕ ಅರಣ್ಯ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ದರ್ಬೆ ಟಿ.ಸಿ.ಯಲ್ಲಿನ ಹಳೆ ಲೈನ್ಗಳನ್ನು ತೆಗೆದು ಹೊಸ ವಿದ್ಯುತ್ ತಂತಿಗಳನ್ನು ಅಳವಡಿಸಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ಸ್ವಪ್ನ, ವಿಜಯಕುಮಾರ್, ವೇದಾವತಿ, ತುಳಸಿ, ಹರೀಶ್ ಕೆ., ಕೆ. ರಮೇಶ ನಾಯ್ಕ್, ರತ್ನಾವತಿ, ಎ. ಗೀತಾ ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಪಿಡಿಒ ಸತೀಶ ಕೆ. ಬಂಗೇರ ಸ್ವಾಗತಿಸಿ, ವಂದಿಸಿದರು.
13ಕ್ಕೆ ಗ್ರಾಮ ಸಭೆ
34 ನೆಕ್ಕಿಲಾಡಿಯ ಗ್ರಾ.ಪಂ.ನ ಗ್ರಾಮ ಸಭೆಯನ್ನು ಆ.13ರಂದು ನಡೆಸಲು ಸರ್ವ ಸದಸ್ಯರು ಈ ಸಂದರ್ಭ ನಿರ್ಣಯ ಕೈಗೊಂಡರು.