ಪುತ್ತೂರು: ಕೆಮ್ಮಾಯಿ ಭರತಪುರದ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ, ಪರವೂರ ಸಹೃದಯ ದಾನಿಗಳ ಸಹಕಾರದಿಂದ ಕಿಡ್ನಿ, ಡಯಾಲಿಸಿಸ್ ರೋಗಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯ 39ನೇ ಯೋಜನೆಯ ಕಾರ್ಯಕ್ರಮ ಸೇವಾಶ್ರಮದಲ್ಲಿ ನಡೆಯಿತು.
ಮುಖ್ಯ ಅತಿಥಿ ನಿವೃತ್ತ ಯೋಧ ನಾರಾಯಣ ಎಚ್.ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು. ಕೆಮ್ಮಾಯಿ ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷ ದಯಾನಂದ ಕೆಮ್ಮಾಯಿ, ಶ್ರೀಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರವೀಣ್ ನಾಕ್, ನಿವೃತ್ತ ಶಿಕ್ಷಕ ಬೊಮ್ಮಾಯಿ ಬಂಗೇರ, ಮಾತನಾಡಿ, ಸಾಂತ್ವನ ಸೇವಾಶ್ರಮದಿಂದ ಬಡ ಜನರಿಗೆ ನೀಡುವ ಆಹಾರ ಕಿಟ್ ವಿತರಣಾ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಸೇವಾಶ್ರಮದ ಅಧ್ಯಕ್ಷೆ ಶೋಭಾಚೇತನ್ ಮಾತನಾಡಿ ಇದು 39ನೇ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಪ್ರತೀ ತಿಂಗಳೂ ನಡೆಯುತ್ತಿದೆ. ಹಲವಾರು ದಾನಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಆಹಾರ ಕಿಟ್ ವಿತರಣೆಗೆ ಕೈಜೋಡಿಸಿದ್ದಾರೆ. ನಾವು ನಿಮಿತ್ತ ಮಾತ್ರ. ದಾನಿಗಳಿಂದಲೇ ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಅವರು ಮುಂದೆಯೂ ನಿಮ್ಮ ಸಹಕಾರ ಇರಲಿ ಎಂದರು.
ಸೇವಾಶ್ರಮ ಟ್ರಸ್ಟ್ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಾಧಿಕಾ ಸ್ವಾಗತಿಸಿ ವನಿತಾ ವಂದಿಸಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಸೇವಾಶ್ರಮದ ಹರ್ಷಿತಾ, ಆತ್ಮೀ, ವನಿತಾ, ಕಾವ್ಯ, ರಾಧಿಕಾ, ಶರತ್, ಧನಂಜಯ, ಅಕ್ಷಯ್, ಭುವನ, ಶಮನ ಆಚಾರ್ಯ, ಕಾವ್ಯ ಈಶ್ವರಮಂಗಲ, ಸಹಾನ ಉಪಸ್ಥಿತರಿದ್ದರು.
22 ಕುಟುಂಬಗಳಿಗೆ ಕಿಟ್ ವಿತರಣೆ
ದಾನಿಗಳಿಂದ ಸಂಗ್ರಹಿಸಿದ ಧನಸಹಾಯದಲ್ಲಿ 22 ಮಂದಿ ಫಲಾನುಭವಿಗಳಿಗೆ ಗಣ್ಯರು ಆಹಾರ ಕಿಟ್ ವಿತರಿಸಿದರು. ಕಿಟ್ ಸ್ವೀಕರಿಸಿದ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು.