ವಿಟ್ಲ: ಬಂಟ್ವಾಳ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬಂಟ್ವಾಳದಲ್ಲಿ ಮಧ್ಯಾಹ್ನ ವೇಳೆಗಾಗಲೇ ನೀರಿನ ಮಟ್ಟ 9.5 ಮೀ.ಗೆ ತಲುಪಿದೆ.
ನದಿ ತೀರ ಪ್ರದೇಶದ ಶಾಲೆಗಳಿಗೆ ರಜೆ ಸಾರಲಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದೆ.
ಪಾಣೆಮಂಗಳೂರು, ಬಂಟ್ವಾಳ ಸಹಿತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಆಲಡ್ಕದಲ್ಲಿ ಸುಮಾರು ಹದಿನೈದು ಮನೆಗಳು ಜಲಾವೃತಗೊಂಡಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೀರಿನ ಮಟ್ಟ ಇನ್ನೂ ಹೆಚ್ಚಾದರೆ ಪ್ರವಾಹದ ಅಪಾಯದ ಸಾಧ್ಯತೆ ಹೆಚ್ಚಿದೆ.
ಶಿಥಿಲಗೊಂಡ ಗೋಡೆಯಿರುವ ಕಟ್ಟಡಗಳು, ದುರ್ಬಲ ಶೀಟುಗಳು, ವಿದ್ಯುತ್ ಅಪಾಯದ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಸಮರ್ಪಕವಾಗಿ ಇರುವ ತರಗತಿ ಕೊಠಡಿಗಳಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಕೂರಿಸಬೇಕು ಎಂದು ಕ್ಲಸ್ಟರ್ ಹಾಗೂ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಿಲಾಗಿದೆ ಎಂದು ತಹಶೀಲ್ದಾರ್ ಕಛೇರಿ ಪ್ರಕಟಣೆ ತಿಳಿಸಿದೆ.