ರಬ್ಬರ್ ಮರ ಕಡಿದು ಲಾರಿಯಲ್ಲಿ ಸಾಗಾಟ-ಸುಂಕದಕಟ್ಟೆ-ಕೊಂಬಾರು ರಸ್ತೆ ಸಂಪೂರ್ಣ ಹಾನಿ

0

ಕಡಬ: ರಬ್ಬರ್ ಮಂಡಳಿಗೆ ಸೇರಿದ ರಬ್ಬರ್ ತೋಟಗಳಿಂದ ಗುತ್ತಿಗೆದಾರರು ರಬ್ಬರ್ ಮರ ಕಡಿದು ಬೃಹತ್ ಲಾರಿಯಲ್ಲಿ ಸಾಗಾಟ ಮಾಡುತ್ತಿರುವುದರಿಂದ ಸುಂಕದಕಟ್ಟೆ-ಕೊಂಬಾರು ರಸ್ತೆ ಸಂಪೂರ್ಣ ಹಾನಿಗೀಡಾಗಿದ್ದು, ಮಳೆಗಾಲದಲ್ಲಿ ರಬ್ಬರ್ ಮರ ಸಾಗಾಟವನ್ನು ಮಾಡದಿರುವಂತೆ ತಡೆಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಈ ಬಗ್ಗೆ ಕಡಬ ತಹಶೀಲ್ದಾರ್‌ಗೆ ಮಾಹಿತಿ ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾದುರಸ್ತಿ ಸ್ಥಿತಿಯಲ್ಲಿದ್ದ ಸುಂಕದಕಟ್ಟೆ-ಕೊಂಬಾರು ರಸ್ತೆಯನ್ನು ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಕೆಲವು ಸಮಯದ ಹಿಂದೆ ಸುಮಾರು 22 ಲಕ್ಷ ರೂ. ವ್ಯಯಿಸಿ ಡಾಮರು ತೇಪೆ ಹಾಕಿ ದುರಸ್ತಿಪಡಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಆ ರಸ್ತೆಯಲ್ಲಿ ಹಲವು ಚಕ್ರಗಳುಳ್ಳ ಬೃಹತ್ ಲಾರಿಯಲ್ಲಿ ಮರ ಸಾಗಾಟ ಮಾಡುತ್ತಿರುವುದರಿಂದ ರಸ್ತೆಯಲ್ಲಿನ ಡಾಮರು ಎದ್ದುಹೋಗಿ ಗುಂಡಿಗಳು ಕಾಣಿಸಿಕೊಂಡು ವಾಹನ ಸಂಚಾರ ದುಸ್ತರವೆನಿಸಿದೆ. ಬೃಹತ್ ಲಾರಿಗಳು ಮಾರ್ಗದಲ್ಲಿಯೇ ನಿಂತು ರಬ್ಬರ್ ಮರಗಳನ್ನು ಲೋಡ್ ಮಾಡಿಕೊಳ್ಳುತ್ತಿರುವುದರಿಂದ ರಸ್ತೆ ಸಂಚಾರಕ್ಕೂ ತೊಂದರೆಯಾಗಿದೆ. ಈ ಬಾರಿಯ ಮಳೆಯಿಂದಾಗಿ ಎಲ್ಲೆಡೆ ಭೂ ಕುಸಿತ, ರಸ್ತೆಗಳಿಗೆ ಹಾನಿ ಸಂಭವಿಸುತ್ತಿರುವಾಗ ಈ ರೀತಿ ಬೃಹತ್ ಲಾರಿಗಳಲ್ಲಿ ಮರ ಸಾಗಾಟ ಮಾಡಿ ಗ್ರಾಮದ ಪ್ರಮುಖ ರಸ್ತೆಯನ್ನು ಹಾನಿಗೊಳಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಬ್ಬರ್ ಮರ ಸಾಗಾಟದ ಬೃಹತ್ ಲಾರಿಗಳ ಸಂಚಾರದಿಂದಾಗಿ ನಮ್ಮ ಪ್ರಮುಖ ಸಂಪರ್ಕ ರಸ್ತೆ ಪೂರ್ತಿಯಾಗಿ ಹಾನಿಗೀಡಾಗಿದೆ. ಈ ಕುರಿತು ಕಡಬ ತಹಶೀಲ್ದಾರರಿಗೆ ಗ್ರಾ.ಪಂ. ವತಿಯಿಂದ ದೂರು ನೀಡಿದ್ದೇವೆ. ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಧುಸೂಧನ್ ಒಡೋಳಿ, ಗ್ರಾ.ಪಂ. ಅಧಕ್ಷರು, ಕೊಂಬಾರು.

LEAVE A REPLY

Please enter your comment!
Please enter your name here