ವಿಟ್ಲ ಚಂದಳಿಕೆಯಲ್ಲಿ ಅಪಾಯಕಾರಿ ಮರಗಳು – ಮರ ತೆರವುಗೊಳಿಸಿ, ಜೀವ ಹಾನಿ ತಪ್ಪಿಸಿ – ಸಾರ್ವಜನಿಕರ ಆಗ್ರಹ

0

@ ಸಿಶೇ ಕಜೆಮಾರ್

ಪುತ್ತೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಾದ್ಯಂತ ಅವಘಡಗಳು ಸಂಭವಿಸುತ್ತಲೇ ಇದೆ. ಅಲ್ಲಲ್ಲಿ ಗುಡ್ಡ ಜರಿತ, ಧರೆ ಕುಸಿತ, ಮರ, ವಿದ್ಯುತ್ ಕಂಬಗಳು ನೆಲಕ್ಕುರುಳುತ್ತಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣು ಮೆದುವಾಗಿ ಮರಗಳು ಬುಡ ಸಮೇತ ಧರೆಗುರುಳುತ್ತಿವೆ. ಈಗಾಗಲೇ ತಾಲೂಕಿನಾದ್ಯಂತ ಬಹಳಷ್ಟು ಹಾನಿ ಸಂಭವಿಸಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕೆಯಲ್ಲಿ ಹೆದ್ದಾರಿ ಪಕ್ಕದಲ್ಲೇ ಬೃಹತ್ ಗಾತ್ರದ ಅಪಾಯಕಾರಿ ಮರಗಳಿದ್ದು ಈ ಮರಗಳು ಬಿದ್ದರೆ ಜೀವ ಹಾನಿ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಮರಗಳ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಭಾಗದ ಸಾರ್ವಜನಿಕರು ಹಲವು ಸಲ ಮನವಿ ಮಾಡಿಕೊಂಡರು ಮರ ತೆರವಿನ ಕೆಲಸ ಆಗಿಲ್ಲ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಬೃಹತ್ ಗಾತ್ರದ ಮರಗಳು
ಚಂದಳಿಕೆ ಆಶೀರ್ವಾದ ಗ್ಯಾರೇಜ್ ಪಕ್ಕದಲ್ಲಿ ಬೃಹತ್ ಗಾತ್ರದ ಮರವೊಂದಿದ್ದು ಇದು ಅಪಾಯದ ಸ್ಥಿತಿಯಲ್ಲಿದೆ. ಈ ಮರ ಎಂದಾದರೂ ಬಿದ್ದರೆ ಇಲ್ಲಿ ದೊಡ್ಡ ಮಟ್ಟದಲ್ಲಿ ಹಾನಿಯಾಗುವ ಸಾಧ್ಯತೆ ಇದೆ. ಏಕೆಂದರೆ ಈ ಮರದ ಎದುರು ಭಾಗದಲ್ಲಿ ಗ್ಯಾರೇಜ್‌ಗಳು ಅಲ್ಲದೆ ಮನೆ ಕೂಡ ಇದೆ. ಇದಲ್ಲದೆ ರಸ್ತೆಯ ಎರಡೂ ಬದಿಗಳಲ್ಲೂ ವಿದ್ಯುತ್ ತಂತಿಗಳು ಹಾದು ಹೋಗಿವೆ. ಇಲ್ಲೇ ಪಕ್ಕದಲ್ಲಿ ಇನ್ನೆರಡು ಮರಗಳಿದ್ದು ಇದು ಕೂಡ ಅಪಾಯಕಾರಿ ಸ್ಥಿತಿಯಲ್ಲಿವೆ.

ಜೀವ ಹಾನಿ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ
ಮರ ಯಾವಾಗ ಬೀಳುತ್ತದೆ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಕೆಲವೊಮ್ಮೆ ಅಪಾಯಕಾರಿ ಅನ್ನಿಸದ ಮರಗಳು ಕೂಡ ಹಠತ್ತಾನೆ ಮುರಿದು ಬಿದ್ದು ದೊಡ್ಡ ಮಟ್ಟದ ಹಾನಿ ಸಂಭವಿಸುತ್ತದೆ. ಇಲ್ಲಿರುವ ಮರಗಳನ್ನು ಅಥವಾ ಮರದ ಗೆಲ್ಲುಗಳನ್ನು ತೆರವು ಮಾಡಿ ಎಂದು ವರ್ಷದ ಹಿಂದೆಯೇ ಈ ಭಾಗದ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಇದುವರೆಗೆ ಮರಗಳ ತೆರವು ಮಾಡಲು ಕೆಲಸ ನಡೆದಿಲ್ಲ. ಮುಂದೆ ಏನಾದರೂ ಮರಗಳು ಬಿದ್ದು ಜೀವ ಹಾನಿ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಅರಣ್ಯ ಇಲಾಖೆಯ ಅಧಿಕಾರಿಗಳೆ? ಸ್ಥಳೀಯಾಡಳಿತವೇ? ಅಥವಾ ಸಂಬಂಧಪಟ್ಟ ಅಧಿಕಾರಿಗಳೇ? ಒಟ್ಟಿನಲ್ಲಿ ಅವಘಡ ನಡೆಯುವ ಮುನ್ನ ಮರಗಳನ್ನು ತೆರವುಗೊಳಿ ಎನ್ನುವುದು ಇಲ್ಲಿನ ಸಾರ್ವಜನಿಕರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here