ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಒಂದು ವಾರಗಳ ಕಾಲ ನಡೆಯುವ ವಿವಿಧ ಸ್ಪರ್ಧೆಗಳಿಗೆ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಆ.4ರಂದು ಚಾಲನೆ ನೀಡಲಾಯಿತು.
ಪ್ರಥಮ ಸ್ಪರ್ಧೆಯಾಗಿ ಅಂದವಾದ ಬರಹ ಸ್ಪರ್ಧೆ ನಡೆಯಿತು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಹಿರಿಯ ಸಹ ಶಿಕ್ಷಕಿ ಗಾಯತ್ರಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿ ವರ್ಷ ಗಣೇಶೋತ್ಸವದ ಸ್ಪರ್ಧೆ ವಿಶೇಷ ರೀತಿಯಲ್ಲಿ ನಡೆಯುತ್ತಿದೆ. ಅದರಲ್ಲೂ ಅಂದಬರಹ ಸ್ಪರ್ಧೆ ಮಕ್ಕಳ ಬರವಣಿಗೆ ಪೂರಕ ಸ್ಪರ್ಧೆಯಾಗಿದೆ. ಯಾವುದೇ ಒಂದು ಸ್ಪರ್ಧೆಯನ್ನು ನಿರಂತರವಾಗಿ ನಡೆಸುವುದು ಕಡಿಮೆ. ಆದರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ನಿರಂತರವಾಗಿ ಮಕ್ಕಳಿಗೆ ಸ್ಪರ್ಧಾ ಕಾರ್ಯಕ್ರಮ ನಡೆಸಿರುವುದು ಉತ್ತಮ ಬೆಳವಣಿಗೆ. ಇದು ನಿರಂತರ ಮುಂದುವರಿಯಲಿ ಎಂದರು.
ಮಕ್ಕಳಿಗೆ ಸಂಸ್ಕೃತಿ, ದೇಶ ಪ್ರೇಮ ಬೆಳೆಸುವ ಉದ್ದೇಶ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಅವರು ಮಾತನಾಡಿ ಸಮಿತಿಯಿಂದ ವರ್ಷಂಪ್ರತಿ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಮಕ್ಕಳಿಗೆ ನಮ್ಮ ಸಂಪ್ರದಾಯ, ಹಿಂದೂ ಸಂಸ್ಕೃತಿ, ದೇಶ ಭಕ್ತಿಯನ್ನು ತಿಳಿಸುವ ಕೆಲಸ ಆಗುತ್ತಿದೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ ಎಂದರು.
ಮಕ್ಕಳ ಸ್ಪರ್ಧಾ ಕಂಪನ ನಿವಾರಣೆಗೆ ಸ್ಪರ್ಧೆ:
ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಲ್ಲಿರುವ ಸ್ಪರ್ಧಾ ಕಂಪನವನ್ನು ಬಾಲ್ಯದಲ್ಲೇ ದೂರ ಮಾಡಬೇಕು. ಅದಕ್ಕಾಗಿ ಇಂತಹ ಸ್ಪರ್ಧೆಗಳನ್ನು ಸಮಿತಿಯಿಂದ ಮಾಡಲಾಗುತ್ತಿದೆ. ಇವತ್ತು ಬಾಲ್ಯದಿಂದಲೇ ಗಣೇಶೋತ್ಸವ ಸಮಿತಿ ನಡೆಸುವ ಹಲವು ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರು ರಾಷ್ಟ್ರೀಯ ಪ್ರತಿಭೆಗಳಾಗಿ ಮೂಡಿ ಬಂದಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ಜೊತೆ ಕಾರ್ಯದರ್ಶಿ ನೀಲಂತ್ , ಹೆಚ್ ಉದಯ, ಸ್ಪರ್ಧಾ ನಿರ್ವಾಹಕ ಪುಷ್ಪರಾಜ್, ಸಹಿತ ಹಲವಾರು ಮಂದಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸ್ಪರ್ಧಾ ಕಾರ್ಯದರ್ಶಿ ಶ್ರೀಕಾಂತ್ ಕಂಬಳಕೋಡಿ ಕಾರ್ಯಕ್ರಮ ನಿರೂಪಿಸಿದರು.