ಬಡಗನ್ನೂರು: ಅಡಿಕೆ ಜೊತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತೇವೆ ಆದರೆ ಆಹಾರ ವಸ್ತುಗಳನ್ನು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಇವುಗಳ ಜೊತೆ ಭತ್ತ ಕೃಷಿಯ ಬಗ್ಗೆ ಗಮನ ಹರಿಸುವ ಕೆಲಸ ರೈತರಿಂದ ಆಗಬೇಕಾಗಿದೆ ಎಂದು ಪ್ರಗತಿಪರ ಕೃಷಿಕ ಸಂಜೀವ ಪೂಜಾರಿ ಕಾನ ಹೇಳಿದರು.
ಅವರು ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಸುಳ್ಯಪದವು ವಿಜಯ ಗ್ರಾಮೀಣ ಸಮಿತಿ ಮತ್ತು ಪಟ್ಟೆ ವಿದ್ಯಾ ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಭತ್ತ ಕೃಷಿ ಅಭಿಯಾನದಲ್ಲಿ ಮಾಹಿತಿ ನೀಡಿ ಮಕ್ಕಳು ಮನೆಯಲ್ಲಿ ಯಾವ ರೀತಿಯಲ್ಲಿ ಗದ್ದೆ ಮಾಡಬಹುದು ಎಂದು ವಿವರಿಸಿ ಹೇಳಿದರು. ಪಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಸುವ ನಿಟ್ಟಿನಲ್ಲಿ ಪ್ರತಿಷ್ಠಾನದ ಕಾರ್ಯ ಶ್ಲಾಘ ನೀಯ ಎಂದು ಶುಭ ಹಾರೈಸಿದರು.
ಸುಳ್ಯಪದವು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಗೋವಿಂದ ಭಟ್ ಪಿ ಮಾತನಾಡಿ ಅಭಿಯಾನವು ನಾಲ್ಕನೇ ಶಾಲೆಯಲ್ಲಿ ನಡೆಯುತ್ತಿದೆ .ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ವಿದ್ಯಾರ್ಥಿಗಳು ಫೋಟೋಗಳನ್ನು ತೆಗೆದು ವಾಟ್ಸಪ್ಪ್ ಗೆ ಕಳಿಸುತ್ತಿದ್ದಾರೆ.ಪ್ರತಿ ವಿದ್ಯಾರ್ಥಿಗೆ ನೇಜಿಗಳನ್ನು ವಿತರಿಸಿ ಮಕ್ಕಳು ಪೋಷಕರ ಸಹಾಯದೊಂದಿಗೆ ನಾಟಿ ಮಾಡಿ ಮನೆ ವಠಾರದಲ್ಲಿ ಭತ್ತ ಬೆಳೆಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ನೇಜಿಗಳನ್ನು ವಿತರಿಸಲಾಯಿತು. ಶಾಲಾ ಸಂಚಾಲಕ ನಾರಾಯಣ ಭಟ್, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ರಾಮ ಕೃಷ್ಣ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಭವಿತಾ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ವಿಶ್ವನಾಥ ನಿರೂಪಿಸಿದರು.