ಉಪ್ಪಿನಂಗಡಿ: ತ್ಯಾಜ್ಯ ಸಂಗ್ರಹಣೆ, ನಿರ್ವಹಣೆಗೆಂದು ತಣ್ಣೀರುಪಂಥ ಗ್ರಾ.ಪಂ. ಶುಲ್ಕ ವಸೂಲಾತಿ ಮಾಡಿದರೂ, ತ್ಯಾಜ್ಯ ನಿರ್ವಹಣೆಯನ್ನು ಮಾಡುತ್ತಿಲ್ಲ. ಆದ್ದರಿಂದ ಅಳಕೆ ಸಮೀಪದ ಪದೆಂಜಲಾಪು ಎಂಬಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು, ದುರ್ನಾತ ಬೀರುತ್ತಿದೆಯಲ್ಲದೆ, ಸಾಂಕ್ರಾಮಿಕ ರೋಗ ಭೀತಿಗೂ ಕಾರಣವಾಗಿದೆ.
ಪದೆಂಜಲಾಪು ಎಂಬಲ್ಲಿ ಗ್ರಾ.ಪಂ.ಗೆ ಸೇರಿದ 13 ಎಕರೆ ಜಮೀನಿದ್ದು, ಇದರಲ್ಲಿ ತಂದು ತ್ಯಾಜ್ಯವನ್ನು ರಾಶಿ ಹಾಕಲಾಗುತ್ತಿದೆ. ಅಲ್ಲೇ ಸಮೀಪ ಕಲ್ಲು ಗಣಿಗಾರಿಕೆಯಿಂದ ಕೃತಕ ಕೆರೆಯೊಂದು ನಿರ್ಮಾಣವಾಗಿದ್ದು, ಇದರಲ್ಲಿ ಈಗ ನೀರು ತುಂಬಿ ತ್ಯಾಜ್ಯದ ರಾಶಿಗಳು ನೀರಿನಲ್ಲಿ ತೇಲುವಂತಾಗಿದೆ. ಕೊಲ್ಯ ಎಂಬಲ್ಲಿ ಗ್ರಾ.ಪಂ.ನ ತ್ಯಾಜ್ಯ ಸಂಸ್ಕರಣಾ ಘಟಕವಿದ್ದರೂ, ಇದು ಹೆಸರಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿಗೆ ತ್ಯಾಜ್ಯವೂ ಬರುತ್ತಿಲ್ಲ. ಅದರ ಸಂಸ್ಕರಣೆಯೂ ಆಗುತ್ತಿಲ್ಲ. ಮದೆಂಜಲಾಪು ಎಂಬಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ರಾಶಿ ಹಾಕುವುದರಿಂದ ಅದು ನಾಯಿ, ಕಾಗೆ, ಕಾಡು ಹಂದಿಗಳು ಎಳೆದಾಡಿ ಅಲ್ಲಲ್ಲಿ ಹರಡುವಂತಾಗಿದೆ. ಈ ಬಗ್ಗೆ ಹಿಂದೊಮ್ಮೆ ಸ್ಥಳೀಯರಿಂದ ಅಪಸ್ವರ ಕೇಳಿ ಬಂದಾಗ ತ್ಯಾಜ್ಯವನ್ನೆಲ್ಲಾ ಮಣ್ಣಿನ ಅಡಿ ಹಾಕಿ ಮುಚ್ಚಲಾಯಿತು ಎಂದು ಸ್ಥಳೀಯರು ಆರೋಪಿಸುತ್ತಾರೆ.
ಇನ್ನಾದರೂ ಗ್ರಾ.ಪಂ. ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ಮತ್ತೀತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೇ, ಮಣ್ಣಿನಡಿ ಸೇರಿಸದೇ ಸೂಕ್ತ ಸಂಸ್ಕರಣೆಗೆ ಮುಂದಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಈ ಬಗ್ಗೆ ಈಗಾಗಲೇ ಗ್ರಾ.ಪಂ.ನ ಗಮನಕ್ಕೆ ತರಲಾಗಿದೆ. ಈ ಇಲ್ಲಿ ಕಲ್ಲಿನ ಕೋರೆಯೊಂದಿದ್ದು, ಅದರಿಂದ ಇಲ್ಲಿ ಕೃತಕ ಕೆರೆಯೊಂದು ನಿರ್ಮಾಣವಾಗಿದೆ. ಈಗ ಅದರಲ್ಲೂ ತ್ಯಾಜ್ಯದ ರಾಶಿಗಳು ತೇಲುತ್ತಿವೆ. ಗ್ರಾ.ಪಂ. ಈ ಬಗ್ಗೆ ಪರಿಶೀಲಿಸುವ ಭರವಸೆ ಮಾತ್ರ ನೀಡಿದೆಯೇ ಹೊರತು, ಶುಚಿತ್ವಕ್ಕೆ ಆಸಕ್ತಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥ ಪ್ರಭಾಕರ ಪೊಸಂದೋಡಿ ಪತ್ರಿಕೆಗೆ ತಿಳಿಸಿದ್ದಾರೆ.