ಸೊಸೈಟಿ ಕಾಯ್ದೆ ತಿದ್ದುಪಡಿ ಸಂವಿಧಾನ ಬಾಹಿರ-ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು

0

ಬೆಂಗಳೂರು:ಸಹಕಾರ ಸಂಘಗಳಲ್ಲಿ ನೇಮಕಾತಿ ವೃಂದ ರಚನೆ, ನೇಮಕಾತಿ, ನೌಕರರ ವರ್ಗಾವಣೆ ಹಾಗೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಹಕಾರ ಸಂಘಗಳಿಂದ ಮೊಟಕುಗೊಳಿಸಿ ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕಲಂ 128ಎ’ಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಆ.8ರಂದು ಪ್ರಕಟಿಸಿದೆ.


ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ-2023ರ ಕಲಂ 128ಎಗೆ ತರಲಾಗಿದ್ದ ತಿದ್ದುಪಡಿ ಪ್ರಶ್ನಿಸಿ ಉಪ್ಪಿನಂಗಡಿ ಪ್ರಾ.ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ್, ನಿರ್ದೇಶಕರಾದ ಬಜತ್ತೂರಿನ ಎಂ.ಜಗದೀಶ್ ರಾವ್, ಜಿ.ಯಶವಂತ ಹಾಗೂ ಇಳಂತಿಲ ಗ್ರಾಮದ ಕೆ.ಗೋಪಾಲಕೃಷ್ಣ ಭಟ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎ.ಕೇಶವ ಭಟ್ ವಾದ ಮಂಡಿಸಿದ್ದರು. ರಿಟ್ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ತಿದ್ದುಪಡಿ ಸಂವಿಧಾನ ಬಾಹಿರ ಎಂದು ತೀರ್ಪು ನೀಡಿದೆ.


ರಿಟ್ ಅರ್ಜಿಯಲ್ಲಿ…..:
ಸಹಕಾರ ಸಂಘಗಳನ್ನು ರಚಿಸಿ, ಅವುಗಳನ್ನು ನಿರ್ವಹಿಸುವುದು ಸಂವಿಧಾನದ 19 (1)(ಸಿ) ವಿಧಿಯ ಪ್ರಕಾರ ನಾಗರಿಕರ ಮೂಲಭೂತ ಹಕ್ಕು. ಆದರೆ, ಸರ್ಕಾರವು ಸಹಕಾರ ಸಂಘಗಳ ಕಾಯ್ದೆಯ ಕಲಂ 128ಎ ಗೆ ತಿದ್ದುಪಡಿ ತರುವ ಮೂಲಕ ಸಂವಿಧಾನದತ್ತವಾದ ಆ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದೆ.ಕಾನೂನು-ಸುವ್ಯವಸ್ಥೆ, ದೇಶದ ಸಮಗ್ರತೆ ಮತ್ತು ಏಕತೆಗೆ ಧಕ್ಕೆಯೊದಗುವ ಅಪಾಯ ಇದ್ದಾಗ, ಸಾರ್ವಜನಿಕ ಸುವ್ಯವಸ್ಥೆ ನಿಯಂತ್ರಣ ಕಳೆದುಕೊಂಡಾಗ ಮಾತ್ರವೇ ಮೂಲಭೂತ ಹಕ್ಕುಗಳ ಮೇಲೆ ಸೀಮಿತ ನಿರ್ಬಂಧಗಳನ್ನು ಹೇರಬಹುದು.ಆದರೆ,ಈ ಪ್ರಕರಣದಲ್ಲಿ ಅಂತಹ ಸನ್ನಿವೇಶ ಉದ್ಭವ ಆಗಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

LEAVE A REPLY

Please enter your comment!
Please enter your name here