ಆ.12: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬೃಹತ್ ಬೆಂಗಳೂರು ಚಲೋ – ಪೂರ್ವಭಾವಿಯಾಗಿ ಶಾಸಕರಿಗೆ ಮನವಿ

0

ಪುತ್ತೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇದರ ವತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆ.12ರಂದು ‘ಬೃಹತ್ ಬೆಂಗಳೂರು ಚಲೋ’ ಹೋರಾಟ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಆ.10ರಂದು ಪುತ್ತೂರು ತಾಲೂಕು ಘಟಕದಿಂದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ನಾಗೇಶ್ ಪಾಟಾಳಿ ಪೆರುವಾಯಿ, ಪುತ್ತೂರು ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ತನುಜಾ, ಅಶ್ರಫ್, ಜಿಲ್ಲಾ ಸಂಘದ ನಾಮನಿರ್ದೇಶಿತ ಉಪಾಧ್ಯಕ್ಷ ರಾಮಣ್ಣ ರೈ, ಶಿಕ್ಷಕರ ಪ್ರತಿನಿಧಿಗಳಾದ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್, ಶಾಂತಿ ಮೊರಾಸ್ ಹಾಗೂ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಶಿಕ್ಷಕರ ಬೇಡಿಕೆಗಳು:
2017 ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು. ಇದರಿಂದ ಪ್ರಾಥಮಿಕ ಶಾಲಾ ಸೇವಾನಿರತ ಶಿಕ್ಷಕರಿಗಾಗುವ ಅನ್ಯಾಯವನ್ನು ಸರಿಪಡಿಸಲು ಕುರಿತು ಪದವಿ ಪೂರೈಸಿದ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮೀಕರಿಸಬೇಕು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರ ಮೇಲೆ ಪ್ರೌಢಶಾಲೆಗೆ ಭಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳು ಹಾಗೂ ಹಿರಿಯ ಮುಖ್ಯ ಗುರುಗಳು ಹುದ್ದೆಗೆ ಜೇಷ್ಠತೆಯ ಆಧಾರದ ಮೇಲೆ ಭಡ್ತಿ ನೀಡಬೇಕು ಎಂಬ ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರು ಚಲೋ ನಡೆಯಲಿದೆ.

ಪುತ್ತೂರಿನಿಂದ 250ಕ್ಕೂ ಅಧಿಕ ಮಂದಿ ಭಾಗಿ:
ವಿವಿಧ ಬೇಡಿಕೆಗಳನ್ನು ಈಡೇಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದವರು ಬೆಂಗಳೂರು ಚಲೋದಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಸಾಂದರ್ಭಿಕ ರಜೆ ಪಡೆದು ಪುತ್ತೂರಿನಿಂದ ಸುಮಾರು 250ಕ್ಕೂ ಅಧಿಕ ಮಂದಿ ಶಿಕ್ಷಕರು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪುತ್ತೂರು ಘಟಕದ ಅಧ್ಯಕ್ಷ ನಾಗೇಶ್ ಪಾಟಾಳಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here