*ಹಿಂದಿನ ಕಾಲದ ಆಹಾರಗಳು ಸತ್ವಭರಿತವಾಗಿತ್ತು-ವಿಜಯ ಪಾಂಡಿ
*ಇದೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ-ಕುಂಞಣ್ಣ ನಲಿಕೆ
*ಸಂಘದ ಮರ ಬೆಳೆದು ನೆರಳು ಕೊಡಲಿ-ರವಿ ಎಂಡೆಸಾಗು
ಪುತ್ತೂರು: ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಹಾಗೂ ಕರ್ನಾಟಕ ರಾಜ್ಯ ಪಾಣಾರ, ಅಜಲ, ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಪುತ್ತೂರು ಇವುಗಳ ಆಶ್ರಯದಲ್ಲಿ 2024-25ನೇ ಸಾಲಿನ ಆಟಿ ದಿನ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಸಮಾರಂಭ ಆ.11ರಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ನಲಿಕೆ ಸಮಾಜದ ಹಿರಿಯ ಮಾರ್ಗದರ್ಶಕ ಸವಣೂರು ಅರೆಳ್ತಡಿ ಕುಂಞಣ್ಣ ನಲಿಕೆ ತೆಂಗಿನ ಮರದ ಹಿಂಗಾರ ಅರಳಿಸಿ ಬಳಿಕ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇದೊಂದು ವಿಶಿಷ್ಟವಾದ ಕಾರ್ಯಕ್ರಮವಾಗಿದೆ ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ನಡೆಸಲು ದೇವರು ಅನುಗ್ರಹಿಸಲಿ ಎಂದು ಹೇಳಿ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕುಡ್ಲ ಅಪ್ಪೆ ಕಲ್ಲುರ್ಟಿ ವರ್ತೆ ಸೇವಾ ಸಂಘದ ಸದಸ್ಯ ವಿಜಯ್ ಪಾಂಡಿ ಆಟಿ ತಿಂಗಳ ವಿಶೇಷತೆಯ ಕುರಿತು ಮಾತನಾಡಿ ಹಿಂದಿನ ಕಾಲದಲ್ಲಿ ಮುಳಿಹುಲ್ಲಿನ ಮನೆಯ ಒಳಗಡೆ ಮಾಡುತ್ತಿದ್ದ ಆಟಿ ತಿಂಗಳ ವಿವಿಧ ತಿನಿಸುಗಳು ಇಂದು ಸಾರ್ವಜನಿಕವಾಗಿ ಕಾಣುತ್ತಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳ 30 ದಿನದಲ್ಲಿ 10 ದಿನದಂತೆ 3 ಬಾರಿ ಕಷಾಯ, ಗೆಡ್ಡೆಗೆಣಸು, ಸೊಪ್ಪಿನ ಪದಾರ್ಥಗಳು ಸೇರಿದಂತೆ ಹಲವು ತಿನಿಸುಗಳನ್ನು ಹಿರಿಯರು ತಿನ್ನುತ್ತಿದ್ದರು. ಔಷಧೀಯ ಗುಣವುಳ್ಳ 52 ಬಗೆಯ ಸೊಪ್ಪಿನ ತುದಿಯ ಪದಾರ್ಥಗಳನ್ನು ಹಿರಿಯರು ಸೇವಿಸುತ್ತಿದ್ದರು. ಇಂತಹ ಆಹಾರಗಳು ಸತ್ವಭರಿತವಾಗಿತ್ತು. ಇದರ ಸತ್ವದಿಂದ ನಮ್ಮ ಹಿರಿಯರು ಆರೋಗ್ಯವಾಗಿ ಬದುಕುತ್ತಿದ್ದರು ಎಂದರು. ಇಂದು ತುಳುನಾಡಿನ ಆಚರಣೆ ಹಾದಿ ತಪ್ಪುತ್ತಿದೆ. ಹಾಲೆಮರಕ್ಕೂ ನಲಿಕೆ ಸಮಾಜ ಭಾಂಧವರಿಗೂ ಅವಿನಾಭಾವ ಸಂಬಂಧ ಇದೆ ಆಟಿ ಕಳೆಂಜವನ್ನು ಮನೆ ಮನೆಗೆ ಕೊಂಡೊಯ್ಯುವ ಪದ್ಧತಿ ನಲಿಕೆಯವರ ಸಮಾಜಕ್ಕೆ ಹೆಮ್ಮೆಯಾಗಿದೆ ಎಂದು ಹೇಳಿದ ಅವರು ನಲಿಕೆ ಸಮಾಜದ ಆಚಾರ ವಿಚಾರಗಳನ್ನು ತಿಳಿಸಿದರು.
ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಪಾಣಾರ ಅಜಲ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ದಯಾನಂದ ಸೇರಾ ಮಾತನಾಡಿ ಹಿಂದಿನ ಕಾಲದ ಆಟಿ ತಿಂಗಳ ಕಷ್ಟ ಇಂದು ಇಲ್ಲ. ಆದರೆ ಆಟಿ ತಿಂಗಳ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ನೆನಪಿಸುವ ಕೆಲಸವನ್ನು ಇಂತಹ ಕಾರ್ಯಕ್ರಮಗಳು ಮಾಡುತ್ತಿದೆ. ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಆತ್ಮತೃಪ್ತಿ ಇದೆ ಎಂದರು.
ಬಂಟ್ವಾಳ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಪಿಲಿಂಜ ಮಾತನಾಡಿ ನಮ್ಮ ಸಮಾಜದ ಸಂಘಟನೆ ಮತ್ತು ಆಟಿ ಆಚರಣೆಯ ಮಹತ್ವವನ್ನು ತಿಳಿಸುವುದಕ್ಕಾಗಿ ಈ ಕಾರ್ಯಕ್ರಮ ನಡೆಸಲಾಗಿದೆ. ನಮ್ಮ ಸಮಾಜದ ಸಭಾಭವನ ನಿರ್ಮಾಣಕ್ಕೆ ಬೇಕಾದ 10ಸೆಂಟ್ಸ್ ಜಾಗದ ವ್ಯವಸ್ಥೆ ಮಾಡುವಲ್ಲಿ ನಾನು ಶ್ರಮಿಸುತ್ತೇನೆ. ಇದಕ್ಕೆ ಸಮಾಜದ ಬಂಧುಗಳು ಸಹಕರಿಸಬೇಕು ಎಂದು ವಿನಂತಿಸಿದರು.
ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೆ. ಅಳದಂಗಡಿ ಮಾತನಾಡಿ ನಮ್ಮ ಸಮಾಜಕ್ಕೆ ಒಂದು ಸಭಾಭವನ ಅಗತ್ಯವಾಗಿ ಬೇಕಾಗಿದೆ. ಇದಕ್ಕಾಗಿ ನಮ್ಮ ಸಮಾಜದ ಪ್ರತೀ ಮನೆಗೂ ಧನಸಂಗ್ರಹಕ್ಕಾಗಿ ಡಬ್ಬಿ ಕೊಡುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಮಡಿಕೇರಿ ಅಜಿಲ ಯಾನೆ ನಲಿಕೆ ಸಮಿತಿ ಅಧ್ಯಕ್ಷ ದೇವಪ್ಪ ಕೊಯಿನಾಡು ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮ ಮಾಡೋಣ ಎಂದು ಹೇಳಿ ಹಾರೈಸಿದರು. ಬ್ಯಾಂಕ್ ಉದ್ಯೋಗಿ ಉಷಾ ಮೋನಪ್ಪ ಮಾತನಾಡಿ ಹಿಂದಿನ ಕಾಲದ ಬಡತನ ಈಗ ಇಲ್ಲ. ಮುಂದಿನ ಪೀಳಿಗೆಗೆ ಆಟಿ ಆಚರಣೆ ಮಹತ್ವ ತಿಳಿಸಲು ಕಾರ್ಯಕ್ರಮ ಆಯೋಜನೆ ಮಾಡಿದ್ದು ಶ್ಲಾಘನೀಯ ಎಂದರು. ಹಿರಿಯ ಕಲಾವಿದ ಬಾಬು ಅಜಿಲ ಬಾಳಿಲ ಮಾತನಾಡಿ ನಮ್ಮ ಸಮಾಜದ ಏಳಿಗೆಗೆ ಎಲ್ಲರೂ ಸಹಕರಿಸಬೇಕು ಎಂದರು.
ಪುತ್ತೂರು ನಲಿಕೆಯವರ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಚಂದ್ರ ಐ ಇದ್ಪಾಡಿ ಮಾತನಾಡಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯದು ಕೆಟ್ಟದು ಇರುತ್ತದೆ. ನಮಗೆ ಧೈರ್ಯ ಬೇಕು. ಪುತ್ತೂರಿನಲ್ಲಿ ಹುಟ್ಟಿ ನಮ್ಮ ಸಂಘದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆಯಾಗಿದೆ ಎಂದರು. ನಮ್ಮ ಪೂರ್ವಜರು ವಿದ್ಯೆಯಿಲ್ಲದೆ ಬುದ್ಧಿಯಿಂದ ನಮ್ಮ ಆಚರಣೆಯನ್ನು ಮಾಡುತ್ತಿದ್ದರು. ನಮ್ಮ ಸಂಘಕ್ಕೆ ಸಭಾಭವನ ಆಗಬೇಕು. ಎಲ್ಲರ ಸಹಕಾರದಲ್ಲಿ ಇದನ್ನು ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ರವಿ ಎಂಡೆಸಾಗು ಮಾತನಾಡಿ ಈ ಕಾರ್ಯಕ್ರಮದ ಮೂಲಕ ನಮ್ಮ ಸಮಾಜದವರು ಒಟ್ಟಾಗಿ ಸೇರಿದ್ದಾರೆ. ಸಂಘದ ಬೀಜ ಬಿತ್ತಿದ್ದು ಇಂದು ಮರವಾಗಿದೆ. ಈ ಮರ ಇನ್ನೂ ಕೂಡ ಬೆಳೆದು ಹಲವರಿಗೆ ನೆರಳು ನೀಡಲಿ ಎಂದರು. ನನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ಮುಂದೆಯೂ ನನ್ನ ಸಹಕಾರ ಕೊಡುತ್ತೇನೆ ಎಂದರು.
ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ, ರಸಪ್ರಶ್ನೆ, ನೃತ್ಯ, ಒಳಾಂಗಣ ಕಾರ್ಯಕ್ರಮ ನಡೆಯಿತು. ಆಟಿ ತಿಂಗಳ ವಿವಿಧ ಖಾದ್ಯಗಳನ್ನು ತಯಾರಿಸಿ ತಂದವರಿಗೆ ಪ್ರಥಮ, ದ್ವಿತೀಯ ಬಹುಮಾನಗಳನ್ನು ನೀಡಲಾಯಿತು. ನಲಿಕೆಯವರ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಬುಳೇರಿಕಟ್ಟೆ 2023-24ನೇ ಸಾಲಿನ ವರದಿ ವಾಚಿಸಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಜಯರಾಂ ಸ್ವಾಗತಿಸಿ ಪ್ರಕಾಶ್ ಕೆ. ವಂದಿಸಿದರು. ಸುಬ್ರಾಯ ಕಲ್ಮಂಜ ಮತ್ತು ದೇವಿದಾಸ್ ಕುರಿಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಆಟಿ ತಿಂಗಳ ವಿಶೇಷ ಖಾದ್ಯಗಳ ಸಹಭೋಜನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿವಿಧ ಕ್ಷೇತ್ರದ ಆರು ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಲಿಕೆಯವರ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು. ಹಿರಿಯರಾದ ಪುಟ್ಟು ಉಕ್ರ ಅಜಲಾಯ, ದೈವನರ್ತನ ಕ್ಷೇತ್ರದ ಬಾಬು ಅಜಿಲ ಪಾರ, ಸಂಧಿ ಪಾಡ್ದನ ಕ್ಷೇತ್ರದ ಗುಬ್ಬಿ ಕೆಮ್ಮಾರ ಪೆರ್ಲಂಪಾಡಿ, ಮನೆಮದ್ದು ಕ್ಷೇತ್ರದ ಪಾಚು ಸವಣೂರು, ಆಟಿ ಕಳಂಜ ಕ್ಷೇತ್ರದ ಕುಂಞಿ ನಲಿಕೆ ಕುಕ್ಕುಪುಣಿ ಹಾಗೂ ತುಳುನಾಡ ಸಂಸ್ಕೃತಿ ಕ್ಷೇತ್ರದ ಕುಂಞಣ್ಣ ನಲಿಕೆ ಅರೆಲ್ತಾಡಿರವರನ್ನು ಶಲ್ಯ, ಪೇಟ, ಹಾರ, ಸನ್ಮಾನ ಪತ್ರ ಹಾಗೂ ಬಿಲ್ವಪತ್ರೆ ಗಿಡ ನೀಡಿ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು.