ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರ ಕೊಳ್ತಿಗೆ, ಪೆರ್ಲಂಪಾಡಿ, ಮೊಗಪ್ಪೆ ಒಕ್ಕೂಟಗಳ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಮುಖ್ಯಗುರು ಕೃಷ್ಣವೇಣಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ.ರವರು ಮಾತನಾಡಿ, ಜಾತಿ,ಮತ ಭೇದವಿಲ್ಲದೆ ನಡೆಯುತ್ತಿರುವ ಒಂದು ಯೋಜನೆ ಎಂದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಾಗಿದೆ ಎಂದ ಅವರು, ಆಟಿ ತಿಂಗಳ ವಿಶೇಷತೆ, ತಿಂಡಿ ತಿನಿಸುಗಳ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ತೀರ್ಥಾನಂದ ದುಗ್ಗಳರವರು ಆಟಿ ತಿಂಗಳಲ್ಲಿ ಬರುವ ಕಷ್ಟಗಳ ಬಗ್ಗೆ ಮಾತನಾಡಿ, ಇಂದು ಬಡವರು ಕೂಡ ಸ್ವಾವಲಂಭಿಯಾಗಿ ಜೀವನ ನಡೆಸುವಂತೆ ಮಾಡಿರುವುದು ಧರ್ಮಸ್ಥಳ ಯೋಜನೆ ಎಂದರು. ಜನಜಾಗೃತಿ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ ಅಮಲರವರು ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡಿ, ಸಮಾಜದ ದುಷ್ಟತೆಯನ್ನು ಮೆಟ್ಟಿನಿಲ್ಲಲು ಯೋಜನೆಯು ಕಾರಣವಾಗಿದೆ ಎಂದರು. ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಉದಯ ಕುಮಾರ್ರವರು ಸಭಾಧ್ಯಕ್ಷತೆ ವಹಿಸಿ, ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ. 3 ಒಕ್ಕೂಟದಲ್ಲಿ 117 ಸಂಘ, 812 ಜನರು ಪಾಲುದಾರರು ಇದ್ದು ಸಮಾಜದಲ್ಲಿ ಬದಲಾವಣೆಯಾದಾಗ ಗ್ರಾಮ, ತಾಲೂಕು ಬದಲಾವಣೆಯಾಗಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು.
ಸತೀಶ್ ಪಾಂಬಾರು,ಶ್ರೀನಿವಾಸ ದೊಡ್ಡಮನೆ, ತಿಮ್ಮಪ್ಪ ಗೌಡ, ಒಕ್ಕೂಟ ಬಿ.ಯ ವೇದಾವತಿ, ಒಕ್ಕೂಟ ಸಿ ಹಾಗೂ ಬಿ ಒಕ್ಕೂಟದ ಸೇವಾ ಪ್ರತಿನಿಧಿ ದಿವ್ಯಶ್ರೀರವರುಗಳು ಶುಭ ಹಾರೈಸಿದರು. ಒಕ್ಕೂಟದ ಸಾಧನಾ ವರದಿಯನ್ನು ಕೊಳ್ತಿಗೆ ಒಕ್ಕೂಟದ ಸೇವಾ ಪ್ರತಿನಿಧಿ ಶಾರದಾ ಮಂಡಿಸಿದರು. ಮೊಗಪ್ಪ ಒಕ್ಕೂಟದ ಸೇವಾ ಪ್ರತಿನಿಧಿ ಅರುಣ ಕೆ.ಎಂ ಸ್ವಾಗತಿಸಿ, ಸಿಎಸ್ಸಿ ಸೇವಾದರರಾದ ಮೂಕಾಂಭಿಕ ಪಿ.ವಂದಿಸಿದರು. ವಲಯ ಮೇಲ್ವಿಚಾರಕಿ ಶುಭವತಿ ಪಿ.ಸಿ ಕಾರ್ಯಕ್ರಮ ನಿರೂಪಿಸಿದರು.