ಸಹೋದರತೆ,ಭ್ರಾತೃತ್ವದ ಬದುಕಿನ ಸಂಕೇತ ರಕ್ಷಾಬಂಧನ

0

ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ.ವಿವಿಧ ಧರ್ಮ, ಸಂಸ್ಕೃತಿ,ಆಚರಣೆ ಪರಂಪರೆ, ದೃಷ್ಟಿಕೋನ, ಕಟ್ಟುಪಾಡು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿ ಇಡೀ ಜಗತ್ತೇ ಭಾರತವನ್ನು ಆಕರ್ಷಿಸುವ,ಇಲ್ಲಿನ ಬದುಕಿನ ಶೈಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು ಇಲ್ಲಿನ ಸಂಸ್ಕೃತಿಗೆ ಮಾರುಹೋಗಿರುವ ವಿದ್ಯಮಾನಗಳನ್ನು ಕಂಡಿದ್ದೇವೆ.

“ವಸುದೈವ ಕುಟುಂಬಕಂ” “ಸರ್ವೇ ಜನಾ ಸುಖಿನೋಭವಂತು”, ” ಕೃಣ್ವಂತೋ ವಿಶ್ವಮಾರ್ಯಂ” ಎಂಬ ಉದಾತ್ತ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡ ದೇಶ ಭಾರತ. ದೇಶದಲ್ಲಿ ಸಾಮಾಜಿಕ ಪಿಡುಗುಗಳು, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಭ್ರಷ್ಟಾಚಾರಗಳು ದೂರ ಸಾಗಿ ಸಾಮರಸ್ಯದ, ಐಕ್ಯತೆಯ,ಸಹೋದರತೆಯ ಬದುಕನ್ನು ಪ್ರಜೆಗಳು ರೂಪಿಸಿಕೊಂಡಾಗ ಸಾಮಾಜಿಕ ಶಾಂತಿ, ನೆಮ್ಮದಿ ಸಮಾಜದಲ್ಲಿ ಮೂಡಲು ಸಾಧ್ಯ. ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆಗಳು ನಿಂತಿರುವುದೇ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಸಹಬಾಳ್ವೆಯ ತಳಹದಿಯ ಮೇಲೆಯೇ ಆಗಿದೆ.

ಇಂದು ರಕ್ಷಾಬಂಧನ
ಶ್ರಾವಣ ಹುಣ್ಣಿಮೆಯಂದು ಸಹೋದರ, ಸಹೋದರಿ ಸಂಬಂಧವನ್ನು ಗಟ್ಟಿಗೊಳಿಸುವ ಭಾರತದ ಪವಿತ್ರ ಹಬ್ಬ ಅದು ರಕ್ಷಾಬಂಧನ. ನಿರ್ಮಲ ಪ್ರೇಮದ ಸಂಕೇತವಾಗಿ ಸಹೋದರ ತನ್ನ ಸಹೋದರಿಗೆ ರಕ್ಷೆ ಕಟ್ಟಿದ ಬಳಿಕ ಆಕೆಯ ಮಾನ ಪ್ರಾಣ ಸಂಕೇತ ಮತ್ತು ಅದರ ಹೊಣೆಗಾರಿಕೆಯು ಸಹೋದರನದ್ದೇ ಆಗಿರುತ್ತದೆ. ರಕ್ಷಾಬಂಧನ ಆಚರಣೆ ಪ್ರಮುಖವಾಗಿ ಪುರಾಣದ ಹಿನ್ನೆಲೆಯನ್ನು ಹೊಂದಿದ್ದು, ರಾಕ್ಷಸರ ಸಂಹಾರಕ್ಕಾಗಿ ಹೊರಟ ದೇವತೆಗಳು ದೇವಗುರು ಬೃಹಸ್ಪತಿಯ ನಿರ್ದೇಶನದಂತೆ ರಕ್ಷಾಸೂತ್ರ ಕಟ್ಟಿಕೊಂಡು ಯಜ್ಞ ಯಾಗಾದಿಗಳಲ್ಲಿ ಕಂಕಣ ಕಟ್ಟುವುದು ಇವೆಲ್ಲವೂ ಅದರ ಸಂಕೇತವಾಗಿ ಕೃಷ್ಣನಿಗೆ ದ್ರೌಪದಿ ಕಟ್ಟಿದ ರಕ್ಷೆಯು ಆಕೆಯ ಮಾನ ರಕ್ಷಣೆ ಮಾಡಿರುವುದು ಇತಿಹಾಸ.

ರಕ್ಷಾಬಂಧನ ಪ್ರಮುಖವಾಗಿ ಹೊರಗಿನ ಸಮಾಜಕ್ಕೆ ಬಿಡಿಬಿಡಿಯಾದ ಚದುರಿ ಹೋದ ರೇಷ್ಮೆ ನೂಲಿನಂತಿದ್ದು, ಇವೆಲ್ಲವನ್ನೂ ಒಂದು ದಾರದಿಂದ ಪೋಣಿಸಿದಾಗ ಒಂದು ಸುಂದರ ಮಾಲೆಯಾಗಿ ರಕ್ಷೆಯೆನಿಸಿಕೊಳ್ಳುತ್ತದೆ.ಚದುರಿ ಹೋದ ಬಿಡಿ ರೇಷ್ಮೆ ನೂಲುಗಳಿಗೆ ಯಾವ ರೀತಿ ಅಸ್ತಿತ್ವವಿರುವುದಿಲ್ಲವೋ ಅದೇ ರೀತಿ ಸಮಾಜವು ಕೂಡ ವಿವಿಧ ಜಾತಿ, ಧರ್ಮ, ಪಂಥ ,ಪಂಗಡ ಹೀಗೆ ನಾನಾ ಕಾರಣಗಳಿಂದ ಹರಿದು ಹಂಚಿ ಹೋದರೆ ಸುಂದರ ಸಮಾಜ ಹಾಗೂ ದೇಶ ನಿರ್ಮಾಣವಾಗಲು ಅಸಾಧ್ಯ. ಈ ಕಾರಣಕ್ಕೆ ಸಮಾಜದಲ್ಲಿ ರಕ್ಷಾಬಂಧನ ಐಕ್ಯತೆಯ ದ್ಯೋತಕವಾಗಿ, ಭಾವನಾತ್ಮಕ ಸಂಕೇತವಾದ ಪಾತ್ರವನ್ನು ನಿರ್ವಹಿಸುತ್ತದೆ.

ನಮ್ಮ ದೇಶದಲ್ಲಿ ಸ್ತ್ರೀಯರ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅಮಾನುಷ ಅತ್ಯಾಚಾರ ಪ್ರಕರಣಗಳು ಕೊನೆಯಾಗಿ ಕಾನೂನಿನಲ್ಲಿ ಯಾವುದೇ ಪ್ರಭಾವ, ಒತ್ತಡಗಳು ಪರಿಣಾಮಗಳು ಬೀರದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಯಾವುದೇ ಹೆಣ್ಣು ಮಗಳು ಕೂಡ ನ್ಯಾಯಕ್ಕಾಗಿ ಸಮಾಜದ ಮುಂದೆ ಅಂಗಲಾಚುವಂತಹ ಪರಿಸ್ಥಿತಿ ನಿರ್ಮಾಣವಾಗದೆ, ಸಂತ್ರಸ್ತರಿಗೆ ನೊಂದವರಿಗೆ ನ್ಯಾಯ ದೊರಕಿದಾಗ ನಾವು ಆಚರಿಸುವ ರಕ್ಷಾಬಂಧನಕ್ಕೆ ವಿಶೇಷ ಅರ್ಥ ಬರುತ್ತದೆ.ದೇಶದೆಲ್ಲೆಡೆ ಸಂಭ್ರಮ ಸಡಗರದ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ.ದಕ್ಷಿಣ ಭಾರತದಲ್ಲಿ ಪವಿತ್ರ ರಕ್ಷಾಬಂಧನ ಹಬ್ಬವಾಗಿ ಇಂದು ಆಚರಿಸಲಾಗುತ್ತದೆ. ಕುಟುಂಬಗಳು ಸಮಾಜದ ವ್ಯವಸ್ಥೆಯ ಬೇರುಗಳು ನಶಿಸುವ ಹಂತದಲ್ಲಿರುವ ಕುಟುಂಬ ವ್ಯವಸ್ಥೆಗಳು ಬಲಗೊಳ್ಳಬೇಕಾದರೆ ಪ್ರತಿ ಮನೆಯಲ್ಲೂ ಸಂಸ್ಕಾರ, ಸಂಸ್ಕೃತಿಯ ಚಟುವಟಿಕೆಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಿದೆ. ಇಡೀ ವಿಶ್ವವೇ ಭಾರತದ ಕಡೆ ಭರವಸೆಯಿಂದ ನೋಡುವ ಹೊತ್ತಿನಲ್ಲಿ ಸಮಾಜದಲ್ಲಿ ಆಗಬೇಕಾದ ಪರಿವರ್ತನೆಗೆ ಮೇಲ್ಪಂಕ್ತಿಯಿಂದ ನಾವೆಲ್ಲರೂ ಮಾದರಿಯಾಗಿ ನಾವೆಲ್ಲ ಒಂದು ನಾವೆಲ್ಲರೂ ಬಂಧು ಎಂಬ ಆಶಯದೊಂದಿಗೆ ರಕ್ಷೆಯನ್ನ ಧರಿಸೋಣ.

✍🏻ಆದರ್ಶ್ ಶೆಟ್ಟಿ ಉಪ್ಪಿನಂಗಡಿ

LEAVE A REPLY

Please enter your comment!
Please enter your name here