ಬರಹ: ಡಾ|| ವೈ. ಉಮಾನಾಥ ಶೆಣೈ 9901302217
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ (Mahalingeshwara Temple) ಒಳಾಂಗಣದಲ್ಲಿ ಗರ್ಭಗುಡಿಯ ಆಗ್ನೇಯ ದಿಕ್ಕಿಗೆ ಸುಮಾರು 1.92 ಮೀಟರ್ ಎತ್ತರ, 92 ಸೆಂಟಿಮೀಟರ್ ಅಗಲ ಮತ್ತು 28 ಸೆಂಟಿಮೀಟರ್ ದಪ್ಪಶಿಲೆಯ ಮೇಲೆ ಬರೆದ ಒಂದು ಸುಂದರ ಶಿಲಾಶಾಸನವಿದೆ. ತುಂಬಾ ಏನೋ ಬರೆದಿರುವಂತೆ ಕಂಡರೂ ಓದಲು ಆಗುವುದಿಲ್ಲ (ಕೆಲವರು ಅದನ್ನು ತುಳು ಲಿಪಿ ಎನ್ನುತ್ತಾರೆ). ಆದರೆ ದೇವಾಲಯಕ್ಕೆ ಭೇಟಿ ನೀಡುವವರೆಲ್ಲರೂ ಇದರಲ್ಲಿ ಏನಿರಬಹುದು ಎಂದು ಕುತೂಹಲದಿಂದ ನೋಡುತ್ತಾರೆ. ಇತ್ತೀಚೆಗೆ ಶೃಂಗೇರಿ ಮಠದ ಪೂಜ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಯವರು ಕೂಡ ಇದರ ಮೇಲೆ ದೃಷ್ಠಿ ಹಾಯಿಸಿ ಇದರಲ್ಲಿ ಏನಿದೆಯಂತೆ ಎಂದು ಕೇಳಿದ್ದರು. ಆದರೆ ಇದನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡಿರುವ ಹಿರಿಯ ಶಾಸನ ತಜ್ಞ ಡಾ|| ವೈ. ಉಮಾನಾಥ ಶೆಣೈಯವರು (Dr. Umanatha Shenoy) ಈ ಕೆಳಗಿನ ವಿವರಗಳನ್ನು ಕೊಟ್ಟಿದ್ದಾರೆ.
ಇದು ವಿಜಯನಗರ ಕಾಲದ (Vijayanagara Empire) ಕನ್ನಡ ಲಿಪಿಯಲ್ಲಿ ಹಾಗೂ ನಡುಗನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಇದರಲ್ಲಿ ಗದ್ಯರೂಪದ ಒಟ್ಟು 91 ಪಂಕ್ತಿಗಳಿವೆ. ತಾಳ್ಮೆ ವಹಿಸಿ ಶ್ರಮ ಪಟ್ಟರೆ ಇದನ್ನು ಯಾರೂ ಓದಬಹುದು. ಇದನ್ನು ವಿಜಯನಗರದ ಚಕ್ರವರ್ತಿ ಇಮ್ಮಡಿ ಪ್ರತಾಪ ದೇವರಾಯನ ಕಾಲ (ಕ್ರಿ.ಶ.1424-1446)ದಲ್ಲಿ ಅವನ ಅನುಮತಿಯಿಂದ ಬರೆಯಲಾಗಿತ್ತು. ಆಗ ಪುತ್ತೂರನ್ನು ಪಾಂಡ್ಯಪ್ಪರಸ ಬಂಗರಾಜ ಎಂಬವನು ಆಳುತ್ತಿದ್ದನೆಂದು ಹೇಳುತ್ತದೆ. ಆಗ ದೇವರಾಯನ ಮಗ ಅಣ್ಣಪ್ಪ ಒಡೆಯನೆಂಬುವನು ಮಂಗಳೂರು ರಾಜ್ಯದ ರಾಜ್ಯ ಪಾಲನಾಗಿದ್ದನು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯವನ್ನು ಯಾರು ಮತ್ತು ಯಾವಾಗ ನಿರ್ಮಿಸಿದರು ಎಂಬುದನ್ನು ಇದು ತಿಳಿಸುವುದಿಲ್ಲ. ಆದರೆ ದೇವಾಲಯವು ಹಿಂದೆ ಎಂದೋ ನಿರ್ಮಾಣವಾಗಿ ಇದರ ಸತ್ಕೀರ್ತಿಯು ಇಂದಿನ ಬಳ್ಳಾರಿ ಜಿಲ್ಲೆಯಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯವರೆಗೂ ತಲುಪಿತ್ತು ಆದುದರಿಂದ ಈ ದೇವಾಲಯದ ಆಡಳಿತೆಯನ್ನು ಸುವ್ಯವಸ್ಥೆಗೊಳಿಸಲಿಕ್ಕಾಗಿ ಚಕ್ರವರ್ತಿ ದೇವರಾಯನು ತನ್ನ ರಾಜಗುರುಗಳಾದ ಕ್ರಿಯಾ ಶಕ್ತಿದೇವ ಒಡೆಯ ಎಂಬವರನ್ನು ಇಲ್ಲಿಗೆ ಕಳುಹಿಸಿದ್ದ. ಅವರು ಶಕವರುಷ 1353ನೇ ವಿರೋಧಿಕೃತು ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ (ಅಂದರೆ ಕ್ರಿ.ಶ.1431ನೇ ಇಸವಿ ನವಂಬರ್ ತಿಂಗಳ 11ನೇ ತಾರೀಕು, ಆದಿತ್ಯವಾರ) ಸೂರ್ಯೋದಯದ ಸಮಯಕ್ಕೆ ಇಲ್ಲಿಗಾಗಮಿಸಿದ್ದರು.ಅಷ್ಟು ಹಿರಿಯ ವ್ಯಕ್ತಿ ಬರುವುದನ್ನು ಮೊದಲೇ ತಿಳಿದುಕೊಂಡಿದ್ದ ಊರಪರವೂರ ಪ್ರಮುಖರು ಇಲ್ಲಿ ಒಟ್ಟು ಸೇರಿದ್ದರು. ರಾಜಗುರುಗಳು ಬಂದ ಬಳಿಕ ಪೂಜಾದಿಗಳು ನಡೆದು ಅನೇಕ ಜನ ಶ್ರೀಮಂತರು ಗುರು ಕಾಣಿಕೆಯಾಗಿ ಬಂಗಾರದ ನಾಣ್ಯಗಳನ್ನು ಸಮರ್ಪಿಸಿದರು.
ಒಟ್ಟು 1720 ಚಿನ್ನದ ನಾಣ್ಯಗಳು ಸಂಗ್ರಹವಾದುವು. ಅನೇಕ ಜನ ಭೂಮಾಲಿಕರು ತಮ್ಮ ಭೂಮಿಯ ಕೆಲವು ಭಾಗಗಳನ್ನು ದೇವಾಲಯಕ್ಕೆ ಉಂಬಳಿ ಬಿಟ್ಟರು. ಇನ್ನು ಕೆಲವರು ತಮ್ಮ ಭೂಮಿಯಿಂದ ಬರುವ ಉತ್ಪತ್ತಿಯ ನಿರ್ದಿಷ್ಟ ಅಂಶದ ದಾನ್ಯ, ಅಕ್ಕಿ, ಭತ್ತ ಇತ್ಯಾದಿಗಳನ್ನು ಪ್ರತೀ ವರ್ಷ ಶಾಶ್ವತದ ಹಿನ್ನೆಲೆಯಲ್ಲಿ ಅರ್ಪಿಸುವುದಾಗಿ ವಾಗ್ದಾನವಿತ್ತರು. ಅಂತಹ ಭೂಮಿಗಳನ್ನು ಬಂಗರಾಜನ ಒಪ್ಪಿಗೆ ಪಡೆದು ಗಡಿಕಲ್ಲುಗಳನ್ನು ಹಾಕಲಾಯಿತು.
ಸಂಗ್ರಹವಾದ ಹಣ, ಧಾನ್ಯ, ಉಂಬಳಿಗಳಿಂದ ಸಂತುಷ್ಟರಾದ ರಾಜಗುರುಗಳು ದೇವಾಲಯದ ನಿತ್ಯ ಆಡಳಿತ ನಿರ್ವಹಣೆಗಾಗಿ ಶ್ರೀಮಂತರಾದ ಬೇರೆ ಬೇರೆ ವರ್ಗದ 4 ಜನರಿರುವ ಪಾದ ಮೂಲಗಳು ಎಂಬ ಸಮಿತಿಯನ್ನು ರಚಿಸಿದರು. ಅವರು ಯಾರೆಂದರೆ ಬ್ರಾಹ್ಮಣ ನಾಗಣ್ಣ, ಜೈನ ಅತ್ರಿಬೆಟ್ಟಿನ ಕಾಪು ಪಡಿವಾಳ, ಕ್ಷತ್ರಿಯನಾದ ಬೆಳ್ಳಿಪಾಡಿಯ ಕುಜುಂಬ ಶೆಟ್ಟಿ ಮತ್ತು ವಾಸು ಭಂಡಾರಿ. ಈ ಪಾದ ಮೂಲಿಗಳು ಸಂಗ್ರಹವಾದ ದ್ರವ್ಯಗಳಿಂದ ಈ ದೇವಾಲಯದ ನಿತ್ಯ ನೈಮಿತ್ತಿಕೆಗಳನ್ನು ಸಾಂಗೋಪಾಂಗವಾಗಿ ನಡೆಸಬೇಕು. ಬೇರೆ ಬೇರೆ ವಿಭಾಗಗಳ 12 ಜನರಿಗೆ ಬ್ರಾಹ್ಮಣ ಸಂತರ್ಪಣೆಯನ್ನೂ ಸಾರ್ವಜನರಿಗೆ ಅನ್ನದಾನವನ್ನು ನಡೆಸಬೇಕು. ಇದು ಸೀಮೆಯ ದೇವಾಲಯವಾಗಿದ್ದು ಶ್ರೀಮಂತವಾಗಿರುವುದರಿಂದ ಸೀಮೆಯಲ್ಲಿದ್ದ ಇತರ ದೇವಾಲಯಗಳಿಗೆ ನಂದಾದೀಪ, ಅಮೃತ ಪಡಿ, ನಿತ್ಯಾನುಷ್ಠಾನಗಳಿಗಾಗಿ ಅಗತ್ಯದ ಸಹಾಯವನ್ನು ಮಾಡಬೇಕು. ಸಹಾಯ ಪಡೆಯುತ್ತಿದ್ದ ದೇವಾಲಯಗಳ ಪೈಕಿ ಬೆಳ್ಳಿಪಾಡಿಯ ಶ್ರೀ ಸುಬ್ರಹ್ಮಣ್ಯ ದೇವಾಲಯ, ಮಂಜುನಾಥ ದೇವಾಲಯ, ಮುದಳಜೆ, ಪಾನಂಬು, ನಂಜಿಲ, ತಾಳಪ್ಪಾಡಿ, ಪಾಂಗಾಳ,ಕೋಡಿಂಬಳ, ಶಾಂತಿಮುಗೇರು, ಪುದುಕೋಳಿ, ಮುಕ್ತಂತೋಟ, ನೆಕ್ಕಿಲಾಡಿ ಇತ್ಯಾದಿ ಕಡೆಯ ದೇವಾಲಯಗಳ ಸ್ಪಷ್ಟ ಉಲ್ಲೇಖ ಇಲ್ಲಿದೆ.
ಪುತ್ತೂರಿನ ಈ ದೇವಾಲಯದಲ್ಲಿ ಪ್ರತಿಯೊಂದು ಸೇವೆ ನಡೆಸುತ್ತಿದ್ದವರಿಗೆ ಕೊಡಬೇಕಾದ ಸಂಬಳ, ಭತ್ಯೆ ಇತ್ಯಾದಿಗಳನ್ನು ನಿಗದಿ ಪಡಿಸಿ ಈ ಶಿಲಾ ಶಾಸನದಲ್ಲಿ ಬರೆಯಲಾಗಿದೆ. ಚಿನ್ನದ ನಾಣ್ಯಗಳು ಹಾಗೂ ಇತರ ಕಾಣಿಕೆಯನ್ನು ಕೊಟ್ಟವರ ಊರು, ಹೆಸರು ಇತ್ಯಾದಿಗಳು ಇಲ್ಲಿ ಸ್ಪಷ್ಟವಾಗಿ ನಮೂದಿತವಾಗಿವೆ. ಪಾದ ಮೂಲಿಗಳ ಕರ್ತವ್ಯ, ಅಧಿಕಾರ, ಜವಾಬ್ದಾರಿಗಳನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ. ಪುರಾಣ ಮತ್ತು ಐತಿಹ್ಯಗಳ ಬಗ್ಗೆ ಇದರಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಈ ದೇವಾಲಯದ ಆಡಳಿತ, ಅರ್ಥ ವ್ಯವಸ್ಥೆ, ಸಮಾಜವು ಪಾಲ್ಗೊಂಡ ಪರಿ ಇತ್ಯಾದಿಗಳು ಸ್ಪಷ್ಟವಾಗಿ ದಾಖಲಿಸಿಕೊಂಡಿರುವ ಅಮೂಲ್ಯ ಐತಿಹಾಸಿಕ ದಾಖಲೆ ಇದು. ಯಾರಾದರೂ, ಈ ಶಿಲಾಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ – ಸಂಶೋಧನೆಯನ್ನು ಕೈಗೊಳ್ಳುವುದಾದರೆ ಅವರಿಗೆ ಈ ಶಾಸನದ ಪೂರ್ಣಪಾಠದೊಂದಿಗೆ ಎಲ್ಲ ವಿವರಗಳನ್ನು ಒದಗಿಸಿ ಕೊಡಲಾಗುವುದೆಂದು ಡಾ|| ವೈ. ಉಮಾನಾಥ ಶೆಣೈಯವರು ತಿಳಿಸಿದ್ದಾರೆ.