ಉಜ್ರುಪಾದೆ ಮೊಸರು ಕುಡಿಕೆ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮಗಳಿಗೆ ಚಾಲನೆ

0

ಪುತ್ತೂರು: ಬಲ್ನಾಡು ಉಜ್ರುಪಾದೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ಎರಡು ದಿನಗಳ ಕಾಲ ಬಲ್ನಾಡು ವಿನಾಯಕ ನಗರದ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಕೂಟಗಳು ಹಾಗೂ ಸ್ಪರ್ಧೆಗಳೊಂದಿಗೆ ಮೇಳೈಸಲಿರುವ ಮೊಸರು ಕುಡಿಕೆ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮಗಳಿಗೆ ಆ.24ರಂದು ಚಾಲನೆ ನೀಡಲಾಯಿತು.

ದೀಪ ಬೆಳಗಿಸಿ ಬೆಳ್ಳಿ ಹಬ್ಬದ ಸಂಭ್ರಮಗಳಿಗೆ ಚಾಲನೆ ನೀಡಿದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ವ್ಯಕ್ತಿಯಾಗಿ, ಶಕ್ತಿಯಾಗಿ ಮೆರೆದವರು. ಕೃಷ್ಣನ ಬಾಲಲೀಲೆಗಳಲ್ಲಿ ಬಹಳಷ್ಟು ಧರ್ಮ ಸಂದೇಶಗಳಿವೆ. ಅವುಗಳ ಅನುಸಂದಾನ ಮುಖ್ಯವಾಗಿದೆ. ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಮೂಲಕ ಶ್ರೀಕೃಷ್ಣನ ಬಾಲಲೀಲೆಗಳನ್ನು ಕಾಣಬಹುದು. ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದೂ ಒಂದು ಭಗವಂತನ ಸೇವೆ ಮಾಡಿದಂತಾಗುತ್ತದೆ. ಆ ಸೇವೆಯು ಕಳೆದ 24 ವರ್ಷಗಳಿಂದ ನಡೆಯುತ್ತಿದ್ದು ಇಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ ಎಂದ ಅವರು, ಉಜ್ರುಪಾದೆಯ ಕೃಷ್ಣ ಜನ್ಮಾಷ್ಟಮಿ ಸಮಿತಿಯು ಆಚರಣೆಗೆ ಮಾತ್ರ ಸೀಮಿತವಾಗಿರದೇ ಸಾಮಾಜಿಕ, ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರು.

ನಗರ ಸಭಾ ಸದಸ್ಯರು, ವಾಸ್ತು ತಜ್ಞರಾಗಿರುವ ಪಿ.ಜಿ ಜಗನ್ನಿವಾಸ ರಾವ್ ಮಾತನಾಡಿ, ಬಲ್ನಾಡಿನಲ್ಲಿ ಸಂಘಟನೆ ವಿಶೇಷವಾಗಿದೆ. ಪ್ರತಿಯೊಬ್ಬರ ಒಗ್ಗಟ್ಟಿನ ಫಲವಾಗಿ ಕಾರ್ಯಕ್ರಮಗಳು ನಿರಂತರವಾಗಿ ಕಾರ್ಯಕ್ರಮ ನಡೆಯುತ್ತಿದೆ. ಸಮಾಜದಲ್ಲಿ ಸಂಘಟನೆಯ ಬಲವರ್ಧನೆ ಹಾಗೂ ಜನರಲ್ಲಿ ಸಂಸ್ಕಾರದ ಜಾಗೃತಿ ಮೂಡಿಸಲು ಸಾರ್ವಜನಿಕವಾಗಿ ನಡೆಯುವ ಆಚರಣೆಗಳು ಸಹಕಾರಿಯಾಗಲಿದೆ. ಸಾರ್ವಜನಿಕ ಕಾರ್ಯಕ್ರಮಗಳು ಯಾವುದೇ ಬೇಧ, ಭಾವವಿಲ್ಲದೇ ನಡೆದಾಗ ಆಚರಣೆಗಳು ಯಶಸ್ವಿಯಾಗಿ ಧರ್ಮದ ಸಂಘಟನೆಯು ಬಲಿಷ್ಠವಾಗಲಿದೆ ಎಂದರು.
ಬಲ್ನಾಡು ಶ್ರೀದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ ಕಾಂತಿಲ ಮಾತನಾಡಿ, ಧಾರ್ಮಿಕ ಚಿಂತನೆಗಳು ನಮ್ಮಲ್ಲಿರಬೇಕು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ವಸ್ತ್ರ ಸಂಹಿತಗೆಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಧರ್ಮಕ್ಕೆ ಅವಮಾನ ಮಾಡಿದಂತಾಗುತ್ತದೆ. ನಾವು ಸಂಸ್ಕೃತಿಗಳನ್ನು ಬಿಟ್ಟುಹೋದಾಗ ಧರ್ಮಕ್ಕೆ ತೊಂದರೆಯಾಗಲಿದೆ. ಧರ್ಮ, ಸಂಸ್ಕೃತಿಗಳ ಮಹತ್ವವನ್ನು ತಿಳಿಸುವ ಕೆಲಸವಾಗಬೇಕು ಎಂದರು. ಎರಡು ದಿನಗಳ ಕಾಲ ನಡೆಯುವ ಮೊಸರು ಕುಡಿಕೆ ಉತ್ಸವವು ಮೈದಾನದಲ್ಲಿ ಇತಿಹಾಸಿದೆ. ಮಕ್ಕಳಲ್ಲಿ ತುಂಟತನದ ಮೂಲಕ ಶ್ರೀಕೃಷ್ಣನ ಬಾಲಲೀಲೆಗಳನ್ನು ಕಾರ್ಯಕ್ರಮದ ಮೂಲಕ ಕಾಣುವಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಕೋಟ್ಯಾನ್ ಮಾತನಾಡಿ, ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಮೊಸರು ಕುಡಿಕೆ ಉತ್ಸವದ ಬೆಳ್ಳಿ ಹಬ್ಬವನ್ನು ಎರಡು ದಿನಗಳ ಕಾಲ ಸಂಭ್ರಮಿಸಲಾಗುತ್ತಿದೆ. ವಿವಿಧ ಕ್ರೀಡಾಕೂಟಗಳು, ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೆ ಕಾರ್ಯಕ್ರಮದಲ್ಲಿ ಸಹಕಾರ ನೀಡಿ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ನಡೆಯಲು ಪ್ರತಿಯೊಬ್ಬರೂ ಸಹಕರಿಸುವಂತೆ ವಿನಂತಿಸಿದರು.

ನಗರ ಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಶಿಕ್ಷಕಿ ಸುನೀತಾ ಮೋಹನ್ ಪೂಜಾರಿ, ಎನ್.ಟಿ ಅರುಣ್ ಕೃಷ್ಣ ಕಿಶೋರ್ ಓಟೆ ಮಾತನಾಡಿ ಶುಭಹಾರೈಸಿದರು.

ಬಲ್ನಾಡು ಗ್ರಾ.ಪಂ ಸದಸ್ಯರಾದ ಗಣೇಶ್ ಗೌಡ ಬ್ರಹ್ಮರಕೋಡಿ, ಕೃಷ್ಣಪ್ಪ ನಾಯ್ಕ ಅಂಬಟೆಮೂಲೆ, ಗುತ್ತಿಗೆದಾರ ಭರತ್ ಚನಿಲ, ವಿನಾಯಕನಗರ ಸ್ವಾಮಿ ಕೊರಗಜ್ಜ ಕ್ಷೇತ್ರದ ಬಾಬು ವಿನಾಯಕ ನಗರ, ಕೃಷ್ಣ ಜನ್ಮಾಷ್ಟಮಿಯ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಪ್ರಕಾಶ್ ಕೆಲ್ಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಸ್ಮಿತಾ ಪದವು ಪ್ರಾರ್ಥಿಸಿದರು. ಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷ ಬಾಬು ಪೂಜಾರಿ ಕುಕ್ಕುತ್ತಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿ, ಬೆಳ್ಳಿ ಹಬ್ಬ ಸಮಿತಿ ಕಾರ್ಯದರ್ಶಿ ವೆಂಕಟಕೃಷ್ಣ ಪಾಲೆಚ್ಚಾರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳಿಗೆ, ಶಾಲಾ ಮಕ್ಕಳಿಗೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಪ್ರತ್ಯೇಕ ವಿವಿಧ ಸ್ಪರ್ಧೆಗಳು ಹಾಗೂ ಕ್ರೀಡಾಕೂಟಗಳು ಪ್ರಾರಂಭಗೊಂಡಿತು.

ನಾಳೆ(ಆ.26) ಸಮಾರೋಪ ಸಮಾರಂಭ:
ಮೊಸರು ಕುಡಿಕೆ ಉತ್ಸವದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಆ.26ರಂದು ಬೆಳಿಗ್ಗೆ ವಿವಿಧ ಸ್ಪರ್ಧೆಗಳು, ಕ್ರೀಡಾಕೂಟಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದ್ದು, ಮೈಸೂರಿನ ಮಾಜಿ ಸಂಸದರು ಪ್ರತಾಪ್ ಸಿಂಹ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಖ್ಯಾತ ವೈದ್ಯ ಡಾ.ಎಂ.ಕೆ ಪ್ರಸಾದ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here