ತುಳು ರಂಗಭೂಮಿ ಕಲಾವಿದ ಬಳ್ಳಮಜಲು ವಿಜಯಹರಿ ರೈ ಸ್ಯಾಂಡಲ್‌ವುಡ್‌ಗೆ ಎಂಟ್ರಿ – ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ಪ್ರಮುಖ ಪಾತ್ರ

0

*ಲೇಖನ- ಉಮಾಪ್ರಸಾದ್‌ ರೈ ನಡುಬೈಲು

ಪುತ್ತೂರು: ‘ಪ್ರತಿಭೆ ಇದ್ದಲ್ಲಿ ಅವಕಾಶ ಖಂಡಿತ’ ಎಂಬ ಮಾತು ಜನಜನಿತ. ಪುತ್ತೂರಿನ ತುಳುರಂಗ ಭೂಮಿ ಕಲಾವಿದರೊಬ್ಬರಿಗೆ ಸ್ಯಾಂಡಲ್ ವುಡ್‌ನಲ್ಲಿ ಪ್ರಮುಖ ಪಾತ್ರ ದೊರೆಯುವ ಮೂಲಕ, ಅವರ ಕಲಾ ಪ್ರತಿಭೆಗೆ ಮನ್ನಣೆ ದೊರೆತಿದೆ. ಹೌದು. ಕುರಿಯ ಗ್ರಾಮದ ಬಳ್ಳಮಜಲು ನಿವಾಸಿಯಾಗಿರುವ ವಿಜಯಹರಿ ರೈ ಈ ಅವಕಾಶ ಗಿಟ್ಟಿಸಿಕೊಂಡವರು.

ವಿಜಯಹರಿ ರೈಯವರು ಮೂರನೇ ತರಗತಿಯಲ್ಲಿ ಇರುವಾಗಲೇ ಕುರಿಯ ಪ್ರಾಥಮಿಕ ಶಾಲಾ ಶಿಕ್ಷಕ ಸೋಮಶೇಖರ್ ರೈಯವರು ಇವರ ಬಾಲಪ್ರತಿಭೆಯನ್ನು ಗುರುತಿಸಿ, ಪುರಾಣಿಕ ನಾಟಕದಲ್ಲಿ ಅವಕಾಶ ನೀಡಿದ್ದರು, ಬಳಿಕದ ದಿನಗಳಲ್ಲಿ ತನ್ನಲ್ಲಿ ಇರುವ ಕಲಾ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಂಡು ಇವರು ಸಾಧನೆಗೈದರು. 8 ರಿಂದ 10ನೇ ತರಗತಿಯ ತನಕ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಯಕ್ಷಗಾನ ಕ್ಷೇತ್ರದಲ್ಲಿ ಮಿಂಚುವ ಅವಕಾಶ ಸಿಕ್ಕಿತು. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣದ ವೇಳೆ ಹಲವು ನಾಟಕದಲ್ಲಿ ಅಭಿನಯಿಸಿದ್ದರು. ಪದವಿ ಶಿಕ್ಷಣದ ಬಳಿಕ ವಿಜಯಹರಿ ರೈಯವರು ಪೂರ್ಣ ಪ್ರಮಾಣದಲ್ಲಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡರು. ನಿವೃತ್ತ ಶಿಕ್ಷಕ ಸಂಜೀವ ರೈ ಬೆಟ್ಟಂಪಾಡಿ ಇವರ ಯಕ್ಷಗಾನ ಗುರುವಾಗಿದ್ದರು. ಕುರಿಯದ ರಘುನಾಥ ಕುಂದರ್‌ರವರಿಂದ ಯಕ್ಷಗಾನದ ಬಗ್ಗೆ ಹೆಚ್ಚಿನ ಪಾಠವನ್ನು ಕಲಿತರು. ಕುಂಬ್ರದ ವಿಶ್ವ ಕಲಾವಿದರು ತಂಡದ ಮೂಲಕ ತುಳುನಾಟಕದಲ್ಲಿ ಅಭಿನಯಗೈದ ಇವರು, ಹಲವು ನಾಟಕಗಳ ನಿರ್ದೇಶನ ಕೂಡಾ ಮಾಡಿದ್ದಾರೆ. ಅನೇಕ ತುಳು ಧಾರಾವಾಹಿಯಲ್ಲೂ ಅಭಿನಯ ಮಾಡಿರುವ ವಿಜಯಹರಿ ರೈ ಬಳಿಕ ಬೂಡಿಯಾರ್ ರಾಧಾಕೃಷ್ಣ ರೈ ಸಾರಥ್ಯದ ಪುತ್ತೂರು ಕಲಾವಿದರು ತಂಡದಲ್ಲಿ ಪ್ರಮುಖ ನಟನಾಗಿ ನೂರಾರು ತುಳು ನಾಟಕದಲ್ಲಿ ರಂಜಿಸಿದರು. ಈ ತನಕ ಸುಮಾರು ಎರಡು ಸಾವಿರಕ್ಕೂ ಹೆಚ್ಚು ತುಳು ನಾಟಕದಲ್ಲಿ ಅಭಿನಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು, ನಾಟಕದಲ್ಲಿ ತನ್ನ ಅಭಿನಯಕ್ಕೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಸಿನಿಮಾದಲ್ಲಿ ಅಭಿನಯ ಮಾಡುವ ಅವಕಾಶವನ್ನು ರಂಗಭೂಮಿ ನಿರ್ದೇಶಕ ಪ್ರಕಾಶ್ ತೂಮಿನಾಡುರವರು ವಿಜಯಹರಿ ರೈಯವರಿಗೆ ನೀಡಿದರು. ಅದೇ ಚಿತ್ರದಲ್ಲಿ ಅಸೋಸಿಯೇಟ್ ನಿರ್ದೇಶಕರಾಗಿದ್ದ ಭರತ್ ರಾಜ್‌ ತಮ್ಮ ನಿರ್ದೇಶನದಲ್ಲಿ, ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಕನ್ನಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಲು ನೇರವಾಗಿ ವಿಜಯಹರಿ ರೈಯವರನ್ನು ಆಯ್ಕೆ ಮಾಡಿದರು. ‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಶೈನ್ ಆಗಿರುವ ವಿಜಯಹರಿ ರೈಯವರು ಚಿತ್ರದ ಆರಂಭದಿಂದ ಕೊನೆಯ ತನಕ ಉತ್ತಮ ರೀತಿಯಲ್ಲಿ ಅಭಿನಯ ಮಾಡಿದ್ದಾರೆ. ತುಳು ರಂಗಭೂಮಿಯಲ್ಲಿ ಜನಪ್ರಿಯರಾಗಿರುವ ವಿಜಯಹರಿ ರೈ ಸ್ಯಾಂಡಲ್‌ವುಡ್‌ನಲ್ಲೂ ತಮ್ಮ ಪ್ರತಿಭೆಯನ್ನು ತೋರುವ ಮೂಲಕ, ಮಿಂಚುವಂತಾಲಿ ಎನ್ನುವುದು ಅವರ ಅಭಿಮಾನಿ ಹಿತೈಷಿಗಳ ಆಶಯ. ವಿಜಯಹರಿ ರೈ ಅವರ ಕಲಾವೃತ್ತಿಗೆ ಪತ್ನಿ ಸಂಧ್ಯಾ ವಿ.ರೈ, ಇಂಜಿನಿಯರ್ ವೃತ್ತಿಯಲ್ಲಿರುವ ಪುತ್ರರಾದ ಸಾತ್ವಿಕ್ ವಿ. ರೈ ಹಾಗೂ ಸಾಕ್ಷಿತ್ ವಿ. ರೈಯವರ ಪ್ರೋತ್ಸಾಹ ಸದಾ ಇದೆ.

LEAVE A REPLY

Please enter your comment!
Please enter your name here