* ಪ್ರಧಾನಿ ಮೋದೀಜಿಯವರು ಉಕ್ರೇನ್‌ನ ಯುದ್ಧ ಭೂಮಿಯಲ್ಲಿ ಗಾಂಧಿ ಮತ್ತು ಬುದ್ಧನ ಶಾಂತಿಯ ದೇಶದಿಂದ ಬಂದಿದ್ದೇನೆ ಎಂದು ಹೇಳಿದ್ದಾರೆ. ಗಾಂಧಿಯವರನ್ನು ಟೀಕಿಸುವವರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜರು ಪ್ರಧಾನಿ ಮೋದಿಯವರು ಹೇಳಿದ ದೇಶದಿಂದ ಬಂದಿಲ್ಲವೇ?
*ಚಿನ್ನಾಭರಣ ಧರಿಸಿರುವ ಯೌವನತ್ಸ ಮಹಿಳೆ ನಡುರಾತ್ರಿಯಲ್ಲಿ ಒಬ್ಬಂಟಿಗಳಾಗಿ ರಸ್ತೆಯಲ್ಲಿ ಹೋಗಬೇಕಾದ ಸಂದರ್ಭ ಬಂದರೂ ಅವಳಿಗೆ ಏನೂ ತೊಂದರೆಯಾಗದೆ ಪೂರ್ಣ ರಕ್ಷಣೆ ದೊರಕುವ ಸಮಾಜ ಬಂದಾಗ ಅದು ಸ್ವಾತಂತ್ರ್ಯ ಎಂದು ಗಾಂಧಿಜಿ ಹೇಳಿದ್ದಾರೆ. ಇಂದು 3-4 ವರ್ಷದ ಹಸುಗೂಸುಗಳ ಮೇಲೆ ಲೈಂಗಿಕ ಅತ್ಯಾಚಾರ ಎಸಗುವ, ಹಗಲು ರಾತ್ರಿ ಎನ್ನದೆ ಒಂಟಿ ಮಹಿಳೆಯರನ್ನು ಬಲತ್ಕರಿಸಿ ಹತ್ಯೆಯ ಘಟನೆಗಳು ನಡೆಯುತ್ತಿರುವ ದೇಶದಲ್ಲಿ ಗಾಂಧಿ ಹೇಳಿದ ಸ್ವಾತಂತ್ರ್ಯ ಬರಬೇಕಲ್ಲವೇ?
* ಊರಿನ ಮತ್ತು ದೇಶದ ನಾಯಕರು ಸರಳ ಜೀವನ, ಸರಳ ಬದುಕು ನಡೆಸಬೇಕು ಎಂದು ಹೇಳಿದ ಗಾಂಧಿಜಿ ಜಗತ್ತಿನಲ್ಲಿ ಜನರ ಅವಶ್ಯಕತೆಗಳನ್ನು ಪೂರೈಸಲು ಬೇಕಾದಷ್ಟು ಸಂಪತ್ತಿದೆ. ಆದರೆ ಜನರ ದುರಾಸೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದಿದ್ದಾರೆ. ನಮ್ಮ ರಾಜಕೀಯ ನಾಯಕರುಗಳ, ಜನಪ್ರತಿನಿಧಿಗಳ, ಅಧಿಕಾರಿಗಳ ಬ್ರಹ್ಮಾಂಡ ದುರಾಸೆ ಮತ್ತು ಭ್ರಷ್ಟಾಚಾರ ನೋಡಿದರೆ ಮಹಾತ್ಮಗಾಂಧಿ ಹೇಳಿದ ನಾಯಕರುಗಳು ನಮ್ಮಲ್ಲಿದ್ದಾರೆಯೇ?
*ಪ್ರತಿಯೊಬ್ಬ ದುರ್ಬಲ ಮನುಷ್ಯನಿಗೆ ಸಮಾನ ಅವಕಾಶ, ಸಮಾನ ಸವಲತ್ತು ದೊರಕಬೇಕು. ಸ್ವಯಂ ಆಡಳಿತ ನಡೆಸುವ ಶಕ್ತಿ ಬರಬೇಕು. ಆತ ತಲೆ ಎತ್ತಿ ಸ್ವಾಭಿಮಾನದಿಂದ ಜೀವನ ನಡೆಸುವಂತಾಗಬೇಕು. ಯಾರೇ ಅನ್ಯಾಯ ಮಾಡಿದರೂ ಅದನ್ನು ಮತ್ತು ಅವರನ್ನು ಎದುರಿಸುವ ಶಕ್ತಿ ಆತನಿಗೆ ಬರಬೇಕು. ಹಾಗೆ ಆದಾಗ ನಿಜವಾದ ಸ್ವಾತಂತ್ರ್ಯ ದೊರಕುತ್ತದೆ. ಬ್ರ್ರಿಟೀಷರನ್ನು ಭಾರತದಿಂದ ಓಡಿಸುವುದು ಆ ದಿಕ್ಕಿನಲ್ಲಿ ಪ್ರಥಮ ಹೆಜ್ಜೆ ಮಾತ್ರ ಎಂದಿದ್ದಾರೆ. ಅಂತಹ ಸ್ವಾತಂತ್ರ್ಯ ನಮಗೆ ಬಂದಿದೆಯೇ?
*ಲಂಚ, ಭ್ರಷ್ಟಾಚಾರದವನ್ನು ಎದುರಿಸುವ ಶಕ್ತಿ ನಮ್ಮ ಜನ ಸಾಮಾನ್ಯರಿಗೆ ಬಂದಿದೆಯೇ ಮತ್ತು ಸಮಾನವಕಾಶ ದೊರಕಿದೆಯೇ?
* ಪ್ರತಿಯೊಬ್ಬ ಮತದಾರ ತಾನು ಗುಲಾಮನಲ್ಲ ರಾಜ ಎಂದು ತಿಳಿಯುವುದು ಮಾತ್ರವಲ್ಲ. ಜನಪ್ರತಿನಿಧಿ, ಶಾಸಕ, ಸಂಸದ, ಮಂತ್ರಿ, ಮುಖ್ಯಮಂತ್ರಿ, ದೇಶದ ಪ್ರಧಾನಿ ಕೂಡ ಜನಸೇವಕರೇ, ರಾಜರಲ್ಲ. ಅಧಿಕಾರಿಗಳು ರಾಜರಲ್ಲ ಜನಸೇವಕರು ಎಂದು ತಿಳಿದು ನಡೆದುಕೊಳ್ಳುವ ಕಾಲ ಬಂದಾಗ ಮಹಾತ್ಮಗಾಂಧಿ ಹೇಳಿದ ಗ್ರಾಮಸ್ವರಾಜ್ಯ, ರಾಮರಾಜ್ಯ, ಸ್ವಾತಂತ್ರ್ಯ ದೊರಕಬಹುದಲ್ಲವೇ?
ವಿ.ಸೂ: ಮಹಾತ್ಮ ಗಾಂಧಿಯವರ ಬಗ್ಗೆ ತಪ್ಪು ಅಭಿಪ್ರಾಯ ನಿವಾರಿಸಲು ಅವರ ಚಿಂತನೆ ಮತ್ತು ಆಧುನಿಕ ಸಮಾಜದಲ್ಲಿ ಅದರ ಅವಶ್ಯಕತೆಯ ಬಗ್ಗೆ ಚರ್ಚಿಸಲು ವೇದಿಕೆಯನ್ನು ರಚಿಸಬೇಕೆಂದಿದ್ದೇನೆ- ಆಸಕ್ತರು ಸಂಪರ್ಕಿಸಿ
ಡಾ.ಯು.ಪಿ. ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ, ಮೊ: 9986398949, E-mail:ups@suddi.net