ಪಂಜಳ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯಲ್ಲಿ ಪುತ್ತೂರು-ಕಡಬ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

0

ʼಕ್ರೀಡೆಯಿಂದ ಆರೋಗ್ಯ ವೃದ್ಧಿ, ಸಮಾಜದಲ್ಲಿ ಉನ್ನತ ಸ್ಥಾನಮಾನʼ – ಲೋಕೇಶ್ ಎಸ್. ಆರ್.

ಪುತ್ತೂರು: ʼದೇವರು ಪ್ರತಿಯೋರ್ವರಲ್ಲೂ ಪ್ರತಿಭೆಯನ್ನು ಕೊಟ್ಟಿದ್ದಾನೆ. ತನ್ನಲ್ಲಿ ಹುದುಗಿರುವ ಪ್ರತಿಭೆ ಎಂಬ ಶಕ್ತಿಯನ್ನು ಅನಾವರಣಗೊಳಿಸಬೇಕಾದರೆ ಪ್ರತಿಯೋರ್ವರೂ ಪ್ರಯತ್ನ ಪಡಬೇಕಾಗಿದೆ. ಕ್ರೀಡೆಗೆ ಆದ್ಯತೆ ಕೊಟ್ಟಾಗ ಆರೋಗ್ಯ ವೃದ್ಧಿ ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಲಭ್ಯವಾಗುವುದು…ʼ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್‌ ಹೇಳಿದರು. ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನರಿಮೊಗರು ಹಾಗೂ ಡಯೋಸಿಸ್ ಆಫ್ ಪುತ್ತೂರು ಟ್ರಸ್ಟ್‌ ಗೊಳಪಟ್ಟ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆ ಪಂಜಳ ಇದರ ಸಹಯೋಗದೊಂದಿಗೆ ಆ.27ರಂದು ಪಂಜಳ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯಲ್ಲಿ ನಡೆದ ಪುತ್ತೂರು ಹಾಗೂ ಕಡಬ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ತೀರ್ಪುಗಾರರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ʼಮಕ್ಕಳನ್ನು ದೇಶದ ಸತ್ಪ್ರಜೆಯನ್ನಾಗಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ-ಹೇಮನಾಥ ಶೆಟ್ಟಿ:
ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಕ್ರೀಡಾಂಗಣವನ್ನು ಉದ್ಘಾಟಸಿ ಮಾತನಾಡಿ, ʼಶಿಕ್ಷಣ ಇಲಾಖೆಯು ಪ್ರತಿ ವರ್ಷ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳುವುದು ಅಲ್ಲದೆ ವಿದ್ಯಾಸಂಸ್ಥೆಗಳು ಕೂಡ ಕ್ರೀಡೆಯನ್ನು ಆಯೋಜಿಸಿಕೊಂಡು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇರುವ ಇಲಾಖೆಗಳಲ್ಲಿ ಅತ್ಯಂತ ಸೂಕ್ಷ್ಮ ಇಲಾಖೆ ಅದು ಶಿಕ್ಷಣ ಇಲಾಖೆ. ಮಕ್ಕಳನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡುವುದು ಶಿಕ್ಷಣ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ…ʼ ಎಂದರು.

ʼಸೋಲನ್ನು ಧೈರ್ಯದಿಂದ ಎದುರಿಸಿ, ಗೆಲುವನ್ನು ಸಂತೋಷದಿಂದ ಸ್ವೀಕರಿಸಿʼ – ಚಂದ್ರಶೇಖರ್ ಎನ್.ಎಸ್.ಡಿ:
ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ ಮಾತನಾಡಿ, ʼಕ್ರೀಡಾಪಟುಗಳು ಸೋಲನ್ನು ಧೈರ್ಯದಿಂದ ಎದುರಿಸಿ, ಗೆಲುವನ್ನು ಸಂತೋಷದಿಂದ ಸ್ವೀಕರಿಸಿ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹಕ್ಕೆ ಒಳ್ಳೆಯ ಆರೋಗ್ಯ, ಮನಸ್ಸಿಗೆ ಮನರಂಜನೆ ಸಿಗುತ್ತದೆ..ʼ ಎಂದರು.

ʼಪುತ್ತೂರಿನಲ್ಲಿ ಯಾವುದೇ ಕ್ರೀಡಾಕೂಟವು ಅದು ಜೀವಂತಿಕೆಯನ್ನು ಪಡೆಯುತ್ತದೆʼ – ವಿಮಲ್‌ಕುಮಾರ್
ತಾಲೂಕಿನ ಶೈಕ್ಷಣಿಕ ಸಂಘಗಳ ಪರವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್ ಮಾತನಾಡಿ, ʼಪುತ್ತೂರಿನಲ್ಲಿ ಯಾವುದೇ ಕ್ರೀಡಾಕೂಟ ಮಾಡಿದರೂ ಅದು ಮೈಲಿಗಲ್ಲು ಆಗುವುದರ ಜೊತೆಗೆ ಜೀವಂತಿಕೆಯನ್ನು ಪಡೆಯುತ್ತದೆ. ಇದೀಗ ವಿದ್ಯಾನಿಕೇತನ್ ಶಾಲೆಯವರು ತಾಲೂಕು ಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ್ದು ಒಳ್ಳೆಯ ಆತಿಥ್ಯ ಕೂಡ ಸಿಕ್ಕಿರುತ್ತದೆ. ತಾಲೂಕು ಮಟ್ಟದಲ್ಲಿ ವಿಜೇತರಾಗುವ ಉತ್ತಮ ತಂಡವು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುವಂತಾಗಲಿ..ʼ ಎಂದರು.

ʼಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯವಲ್ಲ, ಉದ್ದೇಶ ಗೆಲ್ಲುವುದಿರಬೇಕುʼ – ನವೀನ್ ವೇಗಸ್:
ಪುತ್ತೂರು ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ವೇಗಸ್ ಮಾತನಾಡಿ, ʼಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯವಲ್ಲ, ಉದ್ಧೇಶ ಗೆಲ್ಲುವುದಿರಬೇಕು. ಯಾರೂ ಸೋತಾಗ ಎದೆಗುಂದದೆ ಮುಂದೆ ತಾನು ಗೆಲ್ಲುತ್ತೇನೆ ಎಂಬ ಪ್ರಯತ್ನವೇ ಮುಂದೆ ಗೆಲುವಿನ ಸೋಪಾನವಾಗುತ್ತದೆʼ ಎಂದರು.

ʼಗ್ರಾಮೀಣ ಭಾಗದಲ್ಲೂ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟಗಳು ಹಮ್ಮಿಕೊಳ್ಳುವಂತಾಗಲಿʼ – ಉಮೇಶ್ ಎಂ
ಅಧ್ಯಕ್ಷತೆ ವಹಿಸಿದ ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್ ಎಂ.ಶಾಂತಿನಗರ ಮಾತನಾಡಿ, ʼನರಿಮೊಗರು ವಲಯದಲ್ಲಿ ಮೂರು ಖಾಸಗಿ, ಐದು ಸರಕಾರಿ ಶಾಲೆಗಳಿವೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ರಿಯಾಯಿತಿ ಶುಲ್ಕದೊಂದಿಗೆ ಶಿಕ್ಷಣ ನೀಡುವಂತಾಗಬೇಕು. ಗ್ರಾಮೀಣ ಭಾಗದಲ್ಲೂ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಕ್ರೀಡಾಕೂಟಗಳು ಹಮ್ಮಿಕೊಂಡು ಮಾದರಿ ಎನಿಸಬೇಕುʼ ಎಂದರು.

ಪುತ್ತೂರು ಪ್ರಾಥಮಿಕ ಶಾಲಾ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರತ್ನಾಕುಮಾರಿ, ನರಿಮೊಗರು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪರಮೇಶ್ವರಿ ಪ್ರಸಾದ್, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ನವೀನ್ ರೈ ಶಿಬರ, ಪಂಜಳ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯ ಸಂಚಾಲಕ ವಂ|ಬಿಜು ಕೆ.ಜಿ, ಮುಖ್ಯಗುರು ಶ್ರೀಮತಿ ಅಶ್ವತಿ ಅರವಿಂದ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರತ್ನಾಕರ ರೈ, ಶಾಲಾ ಕ್ರೀಡಾ ಕಾರ್ಯದರ್ಶಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರಾಜೀವಿ ಶೆಟ್ಟಿ, ಶಾಲಾ ನಾಯಕ ಮಹಮದ್ ಶಹೀಮ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ನೋಡಲ್ ಅಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ವಾಲಿಬಾಲ್ ತಂಡದ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ಪುಟಾಣಿ ಸೋನಾಲಿ ಮತ್ತು ಬಳಗ ಪ್ರಾರ್ಥಿಸಿದರು. ಸಹ ಶಿಕ್ಷಕಿ ಶ್ರೀಮತಿ ಅಕ್ಷತಾ ಸ್ವಾಗತಿಸಿ, ಸಹ ಶಿಕ್ಷಕಿ ಕಾವ್ಯ ವಂದಿಸಿದರು. ಈ ಸಂದರ್ಭದಲ್ಲಿ ಆಗಮಿಸಿದ ಅತಿಥಿಗಳಿಗೆ ಶಾಲು ಹಾಕುವುದರೊಂದಿಗೆ ಹಾಗೂ ಹೂಕುಂಡವನ್ನು ನೀಡುವುದರೊಂದಿಗೆ ಸ್ವಾಗತಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಾಮಚ್ಚನ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಪುಗಾರರಾದ ನರಿಮೊಗರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಲತಾ ರೈ, ಮುಂಡೂರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವನಿತಾ, ಸಾಂದೀಪನಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್‌ರವರಿಗೆ ಸಮವಸ್ತ್ರವನ್ನು ವಿತರಿಸಲಾಯಿತು. ಶಿಕ್ಷಕಿಯರಾದ ವಿನುತಾ ರೈ ಹಾಗೂ ಪುನೀತಾ ಕಾರ್ಯಕ್ರಮ ನಿರೂಪಿಸಿದರು. ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯ ಶಿಕ್ಷಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದ ಸಹಕರಿಸಿದರು.

ʼಬದುಕು ಹಸನಾಗಲು ವಿದ್ಯೆಯ ಅವಶ್ಯಕತೆಯಿದೆ..ʼ
ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್‌ ಆಶೀರ್ವಚನವನ್ನು ನೀಡುತ್ತಾ ಮಾತನಾಡಿ, ʼಬದುಕು ಹಸನಾಗಲು ವಿದ್ಯೆಯ ಅವಶ್ಯಕತೆಯಿದೆ. ವಿದ್ಯೆ ಕೇವಲ ಕಲಿಕೆಯಲ್ಲ, ವಿದ್ಯೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ತನ್ನ ಪ್ರತಿಭೆಯು ಅನಾವರಣಗೊಳ್ಳುವುದು ಮಾತ್ರವಲ್ಲ ದೇಶದ ಅಭಿವೃದ್ಧಿಗೆ ಪೂರಕವಾದ ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಳ್ಳುವುದು. ಕ್ರೀಡೆಯಲ್ಲಿ ಯಾರು ಉತ್ತಮವಾದ ಪ್ರದರ್ಶನ ನೀಡುತ್ತಾರೋ ಅವರು ಮುಂದಿನ ಸುತ್ತಿಗೆ ತೇರ್ಗಡೆಗೊಳ್ಳುತ್ತಾರೆ..ʼ ಎಂದರು.

20 ತಂಡಗಳು..
ಪುತ್ತೂರು ಹಾಗೂ ಕಡಬ ತಾಲೂಕಿನ ವಲಯ ಮಟ್ಟದ ಪ್ರಾಥಮಿಕ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ವಿಜೇತರಾದ ಬಾಲಕ-ಬಾಲಕಿಯರ ಇಪ್ಪತ್ತು ತಂಡಗಳು ತಾಲೂಕು ಹಂತಕ್ಕೆ ತೇರ್ಗಡೆಗೊಂಡಿತ್ತು. ಈ ಪಂದ್ಯಾಕೂಟದಲ್ಲಿ ವಿಜಯಿಯಾದ ತಂಡವು ಜಿಲ್ಲಾ ಮಟ್ಟದ ಪಂದ್ಯಕ್ಕೆ ಅರ್ಹತೆಯನ್ನು ಪಡೆಯುತ್ತದೆ.

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

LEAVE A REPLY

Please enter your comment!
Please enter your name here