ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ “ಅಟ್ಟೆಮಿ ಪರ್ಬ” ವನ್ನು ಆ.26ರಂದು ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಶ್ರೀ ಕೃಷ್ಣನ ಬಾಲ್ಯ ಜೀವನದ ಮೌಲ್ಯಗಳನ್ನು ಮಕ್ಕಳೆಲ್ಲರೂ ಬೆಳೆಸಿಕೊಂಡು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಪ್ರಜೆಯಾಗಬೇಕೆಂದು ಕರೆನೀಡಿದರು. ಅತಿಥಿಯಾಗಿದ್ದ ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದ ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ ಅವರು ಕೃಷ್ಣನ ಬಾಲ್ಯದ ಜೀವನವನ್ನು ತಿಳಿಸುತ್ತಾ, ವ್ಯಕ್ತಿಯಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸುವುದು ನಿಜವಾದ ಶಿಕ್ಷಣವೇ ಹೊರತು ಶಿಕ್ಷಣ ಕೇವಲ ಪುಸ್ತಕದ ಬದನೆಕಾಯಿ ಅಲ್ಲ. ಅದರೊಂದಿಗೆ ಸಂಸ್ಕಾರ ದೊರೆತಾಗ ವ್ಯಕ್ತಿಯು ಶಕ್ತಿಯುತವಾಗಿ ರೂಪುಗೊಳ್ಳಲು ಸಾಧ್ಯ. ಹಿರಿಯರ ಉತ್ತಮ ವಿಚಾರಗಳನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಂಡು, ಕೃಷ್ಣನ ಸಂದೇಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಾಗ ಆದರ್ಶ ಜೀವನ ನಡೆಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್ ಟಿ ಉಪಸ್ಥಿತರಿದ್ದರು. ವಿವಿಧ ಕ್ರೀಡಾಕೂಟದಲ್ಲಿ ಸಂಸ್ಥೆಯನ್ನು ಪ್ರತಿನಿಧಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು ಎನ್ ಸ್ವಾಗತಿಸಿ, ಸಹಶಿಕ್ಷಕರಾದ ರಾಧಾಕೃಷ್ಣ ಬಿ., ಸ್ವಾತಿ ಹಾಗೂ ಕು. ತೀರ್ಥ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕ ರಮೇಶ್ ರೈ ಆರ್ ಬಿ ವಂದಿಸಿದರು.
“ಅಟ್ಟೆಮಿ ಪರ್ಬ” ದ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮೊಸರು ಕುಡಿಕೆ, ಕೃಷ್ಣನ ಕುರಿತಾದ ಭಕ್ತಿಗೀತೆ ಸ್ಪರ್ಧೆ, ಕೃಷ್ಣವೇಷ ಸ್ಪರ್ಧೆ, ಕರಕುಶಲ ವಸ್ತು ತಯಾರಿ (ಮೂಡೆ, ಗುಂಡ, ಕೊಟ್ಟಿಗೆ) ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಮಧ್ಯಾಹ್ನ ಅಷ್ಟಮಿಯ ವಿಶೇಷ ತಿಂಡಿಯಾದ ಕೊಟ್ಟಿಗೆ, ಮೊಳಕೆ ಬರಿಸಿದ ಹೆಸರುಕಾಳು ಸಾರು ಮತ್ತು ಪಾಯಸವನ್ನು ಉಣಬಡಿಸಲಾಯಿತು.