ರಾಮಕುಂಜ: ಕುಮ್ಕಿ ಜಾಗ ಲೀಸ್‌ಗೆ ಪಡೆಯುವ ಸರಕಾರದ ನಿರ್ಧಾರ ವಿರೋಧಿಸಿ ರಾಮಕುಂಜ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬಿ.ಅವರ ಅಧ್ಯಕ್ಷತೆಯಲ್ಲಿ ಆ.21ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕುಮ್ಕಿ ಜಾಗ ಲೀಸ್‌ಗೆ ಪಡೆಯಲು ಸರಕಾರ ನಿರ್ಧರಿಸಿದೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಕುಮ್ಕಿ ಜಾಗವನ್ನು ಕೃಷಿಕರು ಹಲವು ವರ್ಷಗಳಿಂದ ಉಪಯೋಗಿಸಿಕೊಂಡು ಬರುತ್ತಿದ್ದಾರೆ. ಇದನ್ನು ಸರಕಾರ ಲೀಸ್‌ಗೆ ಪಡೆದುಕೊಂಡಲ್ಲಿ ಕೃಷಿಕರಿಗೆ ಜೀವನ ನಿರ್ವಹಣೆಗೆ ತೊಂದರೆಯಾಗಲಿದೆ. ಸರಕಾರ ಲೀಸ್‌ಗೆ ಪಡೆಯುವ ಬದಲು ಕುಮ್ಕಿ ಜಾಗದ ಹಕ್ಕನ್ನು ಕೃಷಿಕರಿಗೆ ಮಂಜೂರು ಮಾಡಬೇಕೆಂಬ ಆಗ್ರಹ ವ್ಯಕ್ತವಾಯಿತು. ಈ ಬಗ್ಗೆ ಚರ್ಚೆ ನಡೆದು ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಪಿಡಿಒ ಪ್ರಭಾರ ರದ್ದತಿಗೆ ಬರೆಯಲು ನಿರ್ಣಯ:
ರಾಮಕುಂಜ ಗ್ರಾಮ ಪಂಚಾಯತ್ ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮವನ್ನು ಒಳಗೊಂಡಿದೆ. ಇಲ್ಲಿನ ಪಿಡಿಒ ಅವರು ನೆಲ್ಯಾಡಿ ಗ್ರಾಮ ಪಂಚಾಯಿತಿ, ಕಡಬ ತಾಲೂಕು ಪಂಚಾಯಿತಿಯಲ್ಲೂ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಆದ್ದರಿಂದ ಇಲ್ಲಿನ ಪಿಡಿಒ ಅವರ ಪ್ರಭಾರ ರದ್ದುಗೊಳಿಸಿ ಅವರು ರಾಮಕುಂಜ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುವಂತಾಗಬೇಕೆಂದು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ತಾ.ಪಂ.ಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ನೀರಿನ ಬಿಲ್ಲು ಬಾಕಿ ಇರಿಸಿಕೊಂಡಲ್ಲಿ ಸಂಪರ್ಕ ಕಡಿತ:
ಕುಡಿಯುವ ನೀರಿನ ಬಳಕೆದಾರರೂ ಸಕಾಲದಲ್ಲಿ ಬಿಲ್ಲು ಪಾವತಿಸಬೇಕು. ನೀರಿನ ಬಿಲ್ಲು 500 ರೂ. ಮೇಲ್ಪಟ್ಟು ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ 1 ವಾರದೊಳಗೆ ಬಿಲ್ಲು ಪಾವತಿಸದೇ ಇದ್ದಲ್ಲಿ ಸಂಪರ್ಕ ಕಡಿತಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಹಸಂತಳಿಕೆಯಲ್ಲಿನ ಗೇಟ್‌ವಾಲ್ ರಿಪೇರಿ, ಬೀಜತಳಿಕೆಯ ಪೈಪು ಲೈನ್ ದುರಸ್ತಿಗೊಳಿಸಲು ನಿರ್ಧರಿಸಲಾಯಿತು.
ರಸ್ತೆ ಮಾರ್ಜಿನ್ ಅತಿಕ್ರಮಣ ತೆರವಿಗೆ ಆಗ್ರಹ:
ಗ್ರಾಮದ ಹಲವು ಕಡೆ ಪಿಡಬ್ಲ್ಯುಡಿ ರಸ್ತೆ ಮಾರ್ಜಿನ್ ಅತಿಕ್ರಮಣ ಆಗಿದೆ. ಇದರಿಂದ ಚರಂಡಿ ದುರಸ್ತಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪಿಡಬ್ಲ್ಯುಡಿ ರಸ್ತೆ ಮಾರ್ಜಿನ್ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಪರವಾನಿಗೆ ನವೀಕರಣಕ್ಕೆ ಸೂಚನೆ:
ವ್ಯಾಪಾರ ಪರವಾನಿಗೆ ನವೀಕರಿಸದೇ ಇರುವ ವರ್ತಕರೂ ವ್ಯಾಪಾರ ಪರವಾನಿಗೆ ನವೀಕರಿಸಲು ಕ್ರಮ ಕೈಗೊಳ್ಳುವಂತೆಯೂ ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಘನತ್ಯಾಜ್ಯ ಸಂಗ್ರಹಕ್ಕೆ ವರ್ತಕರಿಂದ ಕನಿಷ್ಠ 50 ರೂ.ಮಾಸಿಕ ಶುಲ್ಕ ವಿಧಿಸಲು ಸದಸ್ಯರ ಆಗ್ರಹದಂತೆ ನಿರ್ಣಯಿಸಲಾಯಿತು.
ಹಳೆ ಅಂಚೆಕಚೇರಿ ಕಟ್ಟಡ ತೆರವಿಗೆ ನಿರ್ಣಯ:
ಆತೂರಿನಲ್ಲಿ ಈ ಹಿಂದೆ ಅಂಚೆ ಕಚೇರಿಯಿದ್ದ ಗ್ರಾ.ಪಂ.ಕಟ್ಟಡ ಬಿರುಕು ಬಿಟ್ಟಿದೆ. ಅಂಚೆ ಕಚೇರಿ ತೆರವುಗೊಂಡಿರುವುದರಿಂದ ಈ ಕಟ್ಟಡ ಖಾಲಿಯಾಗಿದೆ. ಇದನ್ನು ತುರ್ತಾಗಿ ತೆರವುಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಬೀದಿ ದೀಪ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ನೀರು ನಿರ್ವಾಹಕರಿಗೆ ಮಾಹಿತಿ:
ಜಲಜೀವನ್ ಯೋಜನೆ ಬಗ್ಗೆ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ಜೆಜೆಎಂನ ಸ್ಮಿತಾ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಪ್ರಶಾಂತ್ ಆರ್.ಕೆ., ಮಾಲತಿ ಎನ್.ಕೆ., ಭಾರತಿ ಎಂ., ಯತೀಶ್‌ಕುಮಾರ್ ಬಿ., ಅಬ್ದುಲ್ ರಹಿಮಾನ್ ಹೆಚ್.,ಕುಶಾಲಪ್ಪ, ವಸಂತ ಪಿ., ಜಯಶ್ರೀ, ಭವಾನಿ, ಪ್ರದೀಪ ಬಿ., ರೋಹಿಣಿ, ಆಯಿಷಾಶರೀಫ್, ಸುಜಾತ ಕೆ. ಉಪಸ್ಥಿತರಿದ್ದು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು. ಪಿಡಿಒ ಮೋಹನ್‌ಕುಮಾರ್ ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಕಾರ್ಯದರ್ಶಿ ಲಲಿತಾ ಜಿ.ಡಿ.,ಸ್ವಾಗತಿಸಿ ಗತಸಭೆಯ ವರದಿ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.