ನರಿಮೊಗರು ಗ್ರಾಮ ಸಭೆ

0

ಕುಡಿಯಲು ಅಯೋಗ್ಯ ನೀರು ಎಂದು ಇಲಾಖೆ ವರದಿ ಕೊಟ್ಟಿದ್ದರೂ ಕ್ರಮ ತೆಗೆದುಕೊಳ್ಳದ್ದಕ್ಕೆ ಆಕ್ರೋಶ-ಸಮಿತಿ ರಚಿಸಲು ಆಗ್ರಹ

ಹಿಂದಿನ ಗ್ರಾಮಸಭೆಯ ನಿರ್ಣಯ ಅನುಷ್ಠಾನದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲು ಆಗ್ರಹ

ಪುತ್ತೂರು: ನರಿಮೊಗರು ಗ್ರಾ.ಪಂ ಗ್ರಾಮ ಸಭೆ ಪುರುಷರಕಟ್ಟೆಯಲಿರುವ ನರಿಮೊಗರು ಪ್ರಾ.ಕೃ.ಪ.ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.
ವಲಯ ಅರಣ್ಯಾಧಿಕಾರಿ(ಸಾಂಆಜಿಕ ಅರಣ್ಯ) ವಿದ್ಯಾರಾಣಿ ಚರ್ಚಾ ನಿಯಂತ್ರಾಣಧಿಕಾರಿಯಾಗಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಸ್ಥ ಸಂತೋಷ್ ಮಾತನಾಡಿ ಪುರುಷರಕಟ್ಟೆ ಸಮೀಪವಿರುವ ಬಿಂದು ನೀರಿನ ಫ್ಯಾಕ್ಟರಿ ಬಳಿಯ ನೀರು ಕುಡಿಯಲು ಅಯೋಗ್ಯ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ವರದಿ ಕೊಟ್ಟಿದ್ದು ಅದನ್ನು ಕಲುಷಿತ ನೀರು ಎಂದು ವರದಿಯಲ್ಲಿ ಕಂಡು ಬಂದಿರುತ್ತದೆ. ಹಾಗಾಗಿ ಆರೋಗ್ಯ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವರದಿಯ ಪ್ರತಿಯನ್ನು ಪ್ರದರ್ಶಿಸುತ್ತಾ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸರ್ವೆ ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಮಿತಾ ನಾಯ್ಕ್ ಮಾತನಾಡಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ನಮಗೆ ಇಲ್ಲ, ಆ ಅಧಿಕಾರ ಗ್ರಾ.ಪಂಗೆ ಇರುವುದು ಎಂದು ಹೇಳಿದರು. ಸಂತೋಷ್ ಮಾತನಾಡಿ, ಗ್ರಾ.ಪಂ.ನವರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ನಾವೇನು ಮಾಡಬೇಕು ಎಂದು ಕೇಳಿದರು. ಪಿಡಿಓ ರವಿಚಂದ್ರ ಯು ಮಾತನಾಡಿ ನಾವು ಈ ಹಿಂದಿನ ಗ್ರಾಮ ಸಭೆ ನಿರ್ಣಯದಂತೆ ವರದಿ ಕೊಟ್ಟಿದ್ದೇವೆ. ಪರಿಸರ ಮತ್ತು ಮಾಲಿನ್ಯ ಇಲಾಖೆ ಅದಕ್ಕೆ ಜವಾಬ್ದಾರಿ ಎಂದು ಹೇಳಿದರು.
ಈ ವಿಚಾರದಲ್ಲಿ ಗ್ರಾಮ ಪಂಚಾಯತ್ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ, ನಮಗೆ ನ್ಯಾಯ ಸಿಗದಿದ್ದರೆ ನಾವು ಗ್ರಾ.ಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಸಂತೋಷ್ ಹೇಳಿದರು. ಸಲೀಂ ಮಾಯಂಗಳ ಮತ್ತಿತರರು ಧ್ವನಿಗೂಡಿಸಿದರು.

ಗ್ರಾಮಸ್ಥ ರಾಘವೇಂದ್ರ ಮಾತನಾಡಿ 2014ರಿಂದ ಈ ಸಮಸ್ಯೆ ಗ್ರಾಮ ಸಭೆಯಲ್ಲಿ ಕೇಳಿ ಬರುತ್ತಿದೆ, ಆದರೂ ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ಗ್ರಾಮಸ್ಥ ಸುಬ್ರಾಯ ಬಿ.ಎಸ್ ಚ,ಮಾತನಾಡಿ ಕಲುಷಿತ ನೀರು ಎಂದು ವರದಿ ಬಂದ ಮೇಲೆ ಕ್ರಮ ತೆಗೆದುಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ, ಈಗಾಗಲೇ ಬೋರ್‌ವೆಲ್ ಕೊರೆದು ಅಂತರ್ಜಲ ಬತ್ತಿ ಹೋಗಿದೆ ಎಂದ ಅವರು ಈ ಸಮಸ್ಯೆಗೆ ಬಿಂದು ಫ್ಯಾಕ್ಟರಿಯವರು, ಗ್ರಾಮ ಪಂಚಾಯತ್‌ನ ಮತ್ತು ಸಂತ್ರಸ್ತರು ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ರವೀಂದ್ರ ರೈ ಧ್ವನಿಗೂಡಿಸಿದರು. ಬಳಿಕ ಈ ವಿಚಾರಕ್ಕೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಬೇಕೆಂಬ ಆಗ್ರಹ ವ್ಯಕ್ತವಾಯಿತು. ಅದರಂತೆ ತೀರ್ಮಾನ ತೆಗೆದುಕೊಳ್ಳಲಾಯಿತು.

ಆಶಾ ಕಾರ್ಯಕರ್ತೆಗೆ ಗೌರವಧನ ನೀಡದ್ದಕ್ಕೆ ಆಕ್ಷೇಪ:
ಆಶಾ ಕಾರ್ಯಕರ್ತೆಯೋರ್ವರು ಇತ್ತೀಚೆಗೆ ಬಿದ್ದು ಗಾಯಗೊಂಡು ಮನೆಯಲ್ಲೇ ಇದ್ದಾರೆ. ಅವರಿಗೆ ಇಲಾಖೆಯಿಂದ ಸಿಗುವ ಸಂಬಳವೂ ಸಿಗದೆ ಕಷ್ಟದಲ್ಲಿದ್ದಾರೆ ಎಂದು ಗ್ರಾಮಸ್ಥ ವೇದನಾಥ ಸುವರ್ಣ ಪ್ರಶ್ನಿಸಿದರು. ಕಷ್ಟದಲ್ಲಿರುವ ಆಶಾ ಕಾರ್ಯಕರ್ತೆಗೆ ಯಾವ ಕಾರಣಕ್ಕೆ ಸಂಬಳ ಕೊಟ್ಟಿಲ್ಲ ಎಂದು ಸುಬ್ರಾಯ ಬಿ.ಎಸ್ ಕೇಳಿದರು. ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಮಿತಾ ನಾಯ್ಕ್ ಉತ್ತರಿಸಿ, ಅವರು ಮೀಟಿಂಗ್‌ಗೆ ಬಂದಿಲ್ಲ, ಮತ್ತು ಅವರು ಬಿದ್ದು ಗಾಯವಾದದ್ದು ನನಗೆ ಹೇಳಿಲ್ಲ, ನನಗೆ ಮಾಹಿತಿ ಇಲ್ಲದ ಕಾರಣ ಹೀಗಾಗಿದೆ ಎಂದು ಹೇಳಿದರು. ಸುಬ್ರಾಯ ಬಿ.ಎಸ್ ಮಾತನಾಡಿ ಆ ಆಶಾ ಕಾರ್ಯಕರ್ತೆ ಆಸ್ಪತ್ರೆಯಲ್ಲಿರುವಾಗ ಆರೋಗ್ಯಾಧಿಕಾರಿ ಹೋಗಿದ್ದಾರೆ. ನೀವು ಹೋಗಿಲ್ಲ, ಮಾನವೀಯ ನೆಲೆಯಲ್ಲಿ ಹೋಗಬೇಕಿತ್ತು, ಅವರು ಕಷ್ಟದಲ್ಲಿರುವಾಗ ಅವರ ಗೌರವಧನ ಕೊಡಬೇಕಿತ್ತು ಎಂದು ಹೇಳಿದರು. ಡಾ.ನಮಿತಾ ನಾಯ್ಕ್ ಮಾತನಾಡಿ ನನಗೆ ತಿಳಿಸಿಲ್ಲ, ಅವರು ಮೀಟಿಂಗ್‌ಗೆ, ಸಾಮಾನ್ಯ ಸಭೆಗೆ ಬರುವುದಿಲ್ಲ, ಫೀಲ್ಡ್ ಕೆಲಸ ಮಾಡದ ಕಾರಣ ಸ್ವಲ್ಪ ಕಷ್ಟ ಆಗಿದೆ ಎಂದು ಹೇಳಿದರು.
ನರಿಮೊಗರು ಹಾಲು ಸೊಸೈಟಿಯ ಅಧ್ಯಕ್ಷ ಸುರೇಶ್ ಪ್ರಭು ಮಾತನಾಡಿ ಅವರಿಗೆ ಸಂಬಳ ಕೊಡುವುದಿಲ್ಲದಿದ್ದರೆ ನಾವು ಗ್ರಾಮಸ್ಥರು ಕಲೆಕ್ಷನ್ ಮಾಡಿ ಕೊಡುತ್ತೇವೆ ಎಂದು ಹೇಳಿದರು. ವೇದನಾಥ ಸುವರ್ಣ ಮಾತನಾಡಿ ಆದದ್ದು ಆಯಿತು, ಅವರಿಗೆ ಬಾಕಿ ಇರುವ ಸಂಬಳ ಕೊಟ್ಟು ಬಿಡಿ ಎಂದು ಹೇಳಿದರು. ಒಕೆ ಕೊಡುವ ಎಂದು ಡಾ.ನಮಿತ ನಾಯ್ಕ್ ಹೇಳಿದಾಗ ಬಿಸಿಯೇರಿದ ಚರ್ಚೆ ಕೊನೆಗೊಂಡಿತು.

ಸಮುದಾಯ ಭವನ ಬಾಡಿಗೆಗೆ ಕೊಡಿ:
ನರಿಮೊಗರು ಸಮೀಪ ಇರುವ ಸಮುದಾಯ ಭವನ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥ ವೇದನಾಥ ಸುವರ್ಣ ಆಗ್ರಹಿಸಿದರು. ಆ ಸಮುದಾಯ ಭವನವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ನೀಡಿದರೆ ಬಾಡಿಗೆ ಸಿಗಬಹುದಲ್ಲವೇ ಎಂದು ಗ್ರಾಮಸ್ಥರು ಕೇಳಿದರು. ಪಿಡಿಓ ರವಿಚಂದ್ರ ಯು ಉತ್ತರಿಸಿ ಈಗಾಗಲೇ ಆ ಕಟ್ಟಡದ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಮುಂದಕ್ಕೆ ಅದನ್ನು ಬಾಡಿಗೆಗೆ ಕೊಡುತ್ತೇವೆ ಎಂದು ಹೇಳಿದರು.

ಗ್ರಾಮಸಭೆಗೆ ಎಲ್ಲ ಅಧಿಕಾರಿಗಳು ಬರಬೇಕು:
ನರಿಮೊಗರು ಹಾಲು ಸೊಸೈಟಿ ಅಧ್ಯಕ್ಷ ಸುರೇಶ್ ಪ್ರಭು ಮಾತನಾಡಿ ಗ್ರಾಮ ಸಭೆಗೆ ಎಲ್ಲ ಅಧಿಕಾರಿಗಳು ಬರಬೇಕು ಮತ್ತು ಬಂದ ಅಧಿಕಾರಿಗಳು ಕಳೆದ ಗ್ರಾಮ ಸಭೆಯಲ್ಲಿ ಆದ ನಿರ್ಣಯಗಳ ಅನುಷ್ಠಾನದ ಬಗ್ಗೆ ವಿವರಣೆ ನೀಡಬೇಕು ಎಂದು ಹೇಳಿದರು. ಆ ರೀತಿ ಆದರೆ ಮಾತ್ರ ಗ್ರಾಮ ಸಭೆಗೆ ಅರ್ಥ ಬರಬಹುದು, ಇಲ್ಲದಿದ್ದರೆ ಗ್ರಾಮ ಸಭೆ ಕಾಟಾಚಾರಕ್ಕೆ ಮಾಡಿದಂತಾಗುತ್ತದೆ ಎಂದು ಸುರೇಶ್ ಪ್ರಭು ಹೇಳಿದರು. ಇದಕ್ಕೆ ಗ್ರಾಮಸ್ಥರು ಚಪ್ಪಾಳೆ ತಟ್ಟುವ ಮೂಲಕ ಸಹಮತ ಸೂಚಿಸಿದರು.

ಆಶಾ ಕಾರ್ಯಕರ್ತೆಯರು ಬರುವುದಿಲ್ಲ:
ಶಾಂತಿಗೋಡು ಗ್ರಾಮದ ಕಕ್ವೆಗೆ ಆಶಾ ಕಾರ್ಯಕರ್ತೆಯರು ಬರುವುದೇ ಇಲ್ಲ ಎಂದು ಗ್ರಾಮಸ್ಥ ರುಕ್ಮಯ್ಯ ಗೌಡ ಆರೋಪಿಸಿದರು. ಆಶಾ ಕಾರ್ಯಕರ್ತೆಯೋರ್ವರು ಮಾತನಾಡಿ ನಾವು ಹೋದಾಗ ಅವರು ಇರುವುದಿಲ್ಲ ಎಂದು ಹೇಳಿದರು. ಡಾ.ನಮಿತಾ ನಾಯ್ಕ್ ಉತ್ತರಿಸಿ ಆ ಕಡೆ ಆಶಾ ಕಾರ್ಯಕರ್ತೆ ಜ್ಯೋತಿ ಅವರು ಹೋಗುವುದು, ಅವರು ಒಳ್ಳೆಯ ಕೆಲಸ ಮಾಡುವವರು, ಅವರು ಬರುವುದಿಲ್ಲ ಎಂದರೆ ನಾವು ನಂಬುವುದಿಲ್ಲ ಎಂದು ಹೇಳಿದರು.

ಸರಕಾರಿ ಶಾಲೆ ಅಭಿವೃದ್ಧಿಪಡಿಸಿ:
ಗ್ರಾಮಸ್ಥ ದಿನೇಶ್ ಕೈಪಂಗಳದೋಳ ಮಾತನಾಡಿ ಸರಕಾರಿ ಶಾಲೆಗಳನ್ನು ಉಳಿಸಬೇಕಾಗಿದ್ದು ಅದಕ್ಕಾಗಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಹೇಳಿದರು.

ಇತರ ಚರ್ಚೆಗಳು:
ತಂದೆಯ ಹೆಸರಿನಲ್ಲಿರುವ ಬೋರ್‌ವೆಲ್ ಪಂಪ್‌ಸೆಟ್ ಮಗನ ಹೆಸರಿಗೆ ಮಾಡಬೇಕಾದರೆ ಯಾವುದೇ ದರ ನಿಗದಿಪಡಿಸದೇ ಉಚಿತವಾಗಿ ಮಾಡಿಕೊಡಬೇಕೆಂದು ಸುಬ್ರಾಯ ಬಿ.ಎಸ್ ಆಗ್ರಹಿಸಿದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ವತಿಯಿಂದ ಫಾಗಿಂಗ್ ಮಾಡಬೇಕೆಂದು ವೇದನಾಥ ಸುವರ್ಣ ಒತ್ತಾಯಿಸಿದರು.

ಗ್ರಾ.ಪಂ ಅಭಿವೃದ್ಧಿ ಪಥದಲ್ಲಿದೆ-ಹರಿಣಿ
ಅಧ್ಯಕ್ಷತೆ ವಹಿಸಿದ್ದ ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ ನಮ್ಮ ಗ್ರಾ.ಪಂ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು ಉದ್ಯೋಗ ಖಾತರಿ ಯೋಜನೆಯಲ್ಲಿ ನಮ್ಮ ಗ್ರಾ.ಪಂ ಉತ್ತಮ ಸಾಧನೆ ಮಾಡಿದೆ, ಮುಂದಕ್ಕೂ ಗ್ರಾಮದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಎಂ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶೇಖ್ ಖಲಂದರ್ ಆಲಿ ವರದಿ ವಾಚಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here