ನಾವೀಗ ಟ್ರೈಲರ್ ಮಾತ್ರ ತೋರಿಸಿದ್ದೇವೆ – ಕಾಂಗ್ರೆಸ್ ಗೆ ಭರತ್ ಶೆಟ್ಟಿ ಎಚ್ಚರಿಕೆ
ಪುತ್ತೂರು: ರಾಜ್ಯ ಸರಕಾರ ಭ್ರಷ್ಟಾಚಾರ ಮಾಡುತ್ತಿದೆ ಮತ್ತು ಕಾಂಗ್ರೆಸ್ ನಾಯಕರಿಂದ ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಬಿಜೆಪಿ ಯುವಮೋರ್ಚಾ ಘಟಕ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲದ ನೇತೃತ್ವದಲ್ಲಿ ರಾಜ್ಯ ಸರಕಾರದ ವಿರುದ್ಧ ಆ.28ರಂದು ಸಂಜೆ ಪುತ್ತೂರು ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ಬಳಿಕ ಕೊನೆಯಲ್ಲಿ ರಸ್ತೆ ತಡೆ ಮಾಡಲಾಯಿತು. ಪೊಲೀಸರು ರಸ್ತೆ ತಡೆ ನಿಲ್ಲಿಸುವಂತೆ ಮನವಿ ಮಾಡಿದರೂ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆಗೆ ಪಟ್ಟು ಹಿಡಿದ ಘಟನೆ ನಡೆಯಿತು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿಯವರು ಮಾತನಾಡಿ ಭ್ರಷ್ಟಾಚಾರದಿಂದ ತುಂಬಿದ ಕಾಂಗ್ರೆಸ್ ಒಂದೇ ಒಂದು ಅಭಿವೃದ್ದಿ ಮಾಡಲಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ.
ಕಾಂಗ್ರೆಸ್ ಇವತ್ತು ಆನೆ ನಡೆದದ್ದೆ ದಾರಿ ಎಂಬ ಮನಸ್ಥಿತಿಗೆ ಬಂದಿದೆ. ಐವನ್ ಡಿ ಸೋಜ, ಜಮೀರ್, ಕೃಷ್ಣಬೈರೆ ಗೌಡರು ನಮ್ಮ ರಾಜ್ಯಪಾಲರಿಗೆ ರಾಷ್ಟ್ರಪತಿಗಳಿಗೆ ಅವಹೇಳನಕಾರಿ ಮಾತನಾಡಿದರೂ ಅವರ ಮೇಲೆ ಕೇಸು ದಾಖಲಿಸುವುದಿಲ್ಲ.
ಕಾಂಗ್ರೆಸ್ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಬಸ್ಸಿಗೆ ಕಲ್ಲು ತೂರಾಟ ಮಾಡುವುದು, ಟೈರ್ ಗೆ ಬೆಂಕಿ ಹಚ್ಚುವುದು ಮಾಡಿದ್ದಾರೆ. ಇದರ ಮೇಲೂ ಕೇಸ್ ಮಾಡುವುದಿಲ್ಲ. ಅದರೆ ನಾವು ಪ್ರತಿಭಟನೆ ಮಾಡಿದರೆ ನಮ್ಮ ಮೇಲೆ ತಕ್ಷಣ ಕೇಸ್ ಹಾಕಿಸುವ ಮೂಲಕ ಪೊಲೀಸ್ ಪೋರ್ಸ್ ನ್ನು ಮಿಸ್ ಯೂಸ್ ಮಾಡುತ್ತಿದ್ದಾರೆ.ಪೊಲೀಸರು ಕಾಂಗ್ರೆಸ್ ನ ಕೈಗೊಂಬೆಯಾಗಿದ್ದಾರೆ. ಆದರೆ ಕಾಂಗ್ರೆಸ್ ನೆನಪಿಡಬೇಕು. ಸಂಘರ್ಷದಿಂದ ಹುಟ್ಟಿದ ಪಕ್ಷ ನಮ್ಮದು. ಈಗ ನಾವು ಟ್ರೈಲರ್ ಮಾತ್ರ ತೋರಿಸಿದ್ದೇವೆ. ಮುಂದೆ ದೊಡ್ಡ ಮಟ್ಟದ ನಿಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದರು.