ಬಹುಕಾಲದ ಬೇಡಿಕೆ ಈಡೇರಿಸುವಂತೆ ಸಾರ್ವಜನಿಕರ ಆಗ್ರಹ
@ಯೂಸುಫ್ ರೆಂಜಲಾಡಿ
ಪುತ್ತೂರು ಹಾಗೂ ಸುಳ್ಯ ತಾಲೂಕುಗಳನ್ನು ಸಂಪರ್ಕಿಸುವ ಪರ್ಲಿಕಜೆ-ನಿಡುಬೆ-ಕೊಚ್ಚಿ ದುಗ್ಗಳ-ಕಲ್ಲರ್ಪೆ, ಮಾವಿನಕಟ್ಟೆ ಅಂತರ್ ತಾಲೂಕು ರಸ್ತೆ ಡಾಮರೀಕರಣಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದು ರಸ್ತೆಗೆ ಡಾಮರೀಕರಣ ಮಾಡಿಕೊಡಿ ಎಂದು ಆ ಭಾಗದ ಜನರು ಆಗ್ರಹಿಸಿದ್ದಾರೆ.
ಸುಳ್ಯ ತಾಲೂಕಿನ ಪರ್ಲಿಕಜೆ, ನಿಡುಬೆ, ಜಬಳೆ ಕೊಚ್ಚಿ ದುಗ್ಗಳ-ಕಲ್ಲರ್ಪೆ ಮಾವಿನಕಟ್ಟೆ ರಸ್ತೆಯು ಸುಮಾರು 4 ಕಿ.ಮೀ.ಆಗಿದ್ದು, ಅದರಲ್ಲಿ 1 ಕಿ.ಮೀ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 22 ವರ್ಷಗಳ ಹಿಂದೆ ಡಾಮರೀಕರಣಗೊಂಡಿತ್ತು. ಸುಳ್ಯ ತಾಲೂಕಿನ 4 ಕಿ.ಮೀ ಉದ್ದದ ಭಾಗವು ಡಾಮರ್ ಮೇಲ್ಮೈಯನ್ನು ಹೊಂದಿದ್ದು, ಹಲವಾರು ವರ್ಷಗಳಿಂದ ನವೀಕರಣ ಮಾಡದೇ ತೀರಾ ನಾದುರಸ್ತಿಯಲ್ಲಿದೆ. ಕೊಚ್ಚಿ ರಸ್ತೆಯು ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಈ ರಸ್ತೆಯು ಸುಳ್ಯ ತಾಲೂಕಿನ ಪರ್ಲಿಕಜೆ-ನಿಡುಬೆ-ಕೊಚ್ಚಿ ಪ್ರದೇಶಗಳಿಗೆ ಪುತ್ತೂರು ತಾಲೂಕಿನ ದುಗ್ಗಲ ಮಾವಿನಕಟ್ಟೆ ಕಲ್ಲರ್ಪೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯು ಸುಳ್ಯ ತಾಲೂಕಿನಿಂದ ಪುತ್ತೂರು ತಾಲೂಕಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಯಾಗಿರುತ್ತದೆ. ಈ ಭಾಗದಲ್ಲಿ ಸಿ.ಆರ್.ಸಿ. ಕಾಲೋನಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸುಮಾರು 300ಕ್ಕಿಂತ ಹೆಚ್ಚು ಮನೆಗಳಿರುವ, 2000ಕ್ಕಿಂತ ಹೆಚ್ಚು ನಿವಾಸಿಗಳಿರುವ ಈ ಗ್ರಾಮದಲ್ಲಿರುವ ನಾವು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುತ್ತೇವೆ. ಈ ಭಾಗದ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಆ ಭಾಗದ ನಾಗರಿಕರು ಈ ಹಿಂದೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರು. ಮಾಧ್ಯಮಗಳಲ್ಲೂ ಅಲ್ಲಿನ ರಸ್ತೆ ಬಗ್ಗೆ ವರದಿ ಪ್ರಕಟಗೊಂಡಿತ್ತು. ಮೂರು ವರ್ಷಗಳ ಹಿಂದೆ ಮಾವಿನಕಟ್ಟೆಯಿಂದ ಅಂದಾಜು ಮೂರು ಕಿ.ಮೀ ರಸ್ತೆ ಡಾಮರೀಕರಣಗೊಂಡಿದ್ದು ಇನ್ನು ಅಂದಾಜು ಎರಡೂವರೆ ಕಿ.ಮೀ ರಸ್ತೆ ಡಾಮರೀಕರಣ ಆಗಬೇಕಾಗಿದೆ.
ಈ ರಸ್ತೆಯು ಅಭಿವೃದ್ಧಿ ಹೊಂದಿದರೆ ಎರಡು ತಾಲೂಕಿನ ಭಾಗದ ಜನರಿಗೆ ತುಂಬಾ ಉಪಯುಕ್ತವಾಗಲಿದ್ದು ವಿದ್ಯಾರ್ಥಿಗಳಿಗೂ ವರದಾನವಾಗಲಿದೆ. ಹಾಗಾಗಿ ಈ ಸಂಪರ್ಕ ರಸ್ತೆಯನ್ನು ಸಂಬಂಧಪಟ್ಟವರು ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಧಾನಿಗೆ ಪತ್ರ ಬರೆದಿದ್ದರು..!
ಇದೇ ರಸ್ತೆಯ ಅಭಿವೃದ್ಧಿ ವಿಚಾರವಾಗಿ ಸ್ಥಳೀಯ ನಾಗರಿಕರೊಬ್ಬರು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಏನೇ ಮಾಡಿದರೂ ಇಲ್ಲಿನ ರಸ್ತೆ ಸಂಪೂರ್ಣ ಅಭಿವೃದ್ಧಿ ಮಾತ್ರ ಕಾಣಲೇ ಇಲ್ಲ.
ನಿರ್ಲಕ್ಷ್ಯಕ್ಕೆ ಒಳಗಾಯಿತೇ.?
ಪೆರ್ಲಂಪಾಡಿ-ಐವರ್ನಾಡು ಸಂಪರ್ಕ ರಸ್ತೆಯ ಒಂದು ಭಾಗ ಪುತ್ತೂರು ತಾಲೂಕು ಆದರೆ ಇನ್ನೊಂದು ಭಾಗ ಸುಳ್ಯ ತಾಲೂಕಿಗೆ ಸೇರುತ್ತದೆ. ಹಾಗಾಗಿ ಗಡಿ ರಸ್ತೆ ಎನ್ನುವ ಕಾರಣಕ್ಕೆ ನಿರ್ಲಕ್ಷ್ಯಕ್ಕೆ ಒಳಗಾಯಿತೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದು. ನಾವು ಓಟು ಹಾಕಿದ್ದೇವೆ, ನಮ್ಮ ಮೂಲಭೂತ ಅವಶ್ಯಕತೆ ಈಡೇರಿಸಿ ಎಂದು ಆ ಭಾಗದವರು ಆಗ್ರಹಿಸುತ್ತಲೇ ಇದ್ದಾರೆ.
ಪೆರ್ಲಂಪಾಡಿ-ಐವರ್ನಾಡು ಸಂಪರ್ಕ ರಸ್ತೆ ಅಭಿವೃದ್ಧಿ ಕಾಣದೇ ಹಲವು ವರ್ಷಗಳಾಗಿದ್ದು ಈ ಹಿಂದೆ ನಾವು ಮನವಿ ಕೂಡಾ ಸಲ್ಲಿಸಿದ್ದೇವೆ. ಇದು ಮುಖ್ಯವಾಗಿ ಸುಳ್ಯ ಸಂಪರ್ಕಿಸುವ ರಸ್ತೆಯೂ ಆದ ಕಾರಣ ಈ ರಸ್ತೆಗೆ ಪೂರ್ಣವಾಗಿ ಡಾಮರೀಕರಣ ಮಾಡುವುದು ಅಗತ್ಯವಾಗಿದೆ. ಶಾಸಕರು, ಸಂಸದರು ಅನುದಾನ ಇಟ್ಟು ಈ ರಸ್ತೆ ಅಭಿವೃದ್ಧಿ ಮಾಡುವ ಮೂಲಕ ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಬೇಕಾಗಿದೆ.
-ನಿತಿನ್ ಕೆ.ಬಿ, ರಸ್ತೆ ಫಲಾನುಭವಿ
ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ನಾವು ಅನೇಕ ಬಾರಿ ಮನವಿ ನೀಡಿದ್ದರೂ ಪ್ರಯೋಜನ ಆಗಿಲ್ಲ. ರಸ್ತೆ ಡಾಮರೀಕರಣ ಆಗದ ಕಾರಣ ನಾವು ಅನೇಕ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದು ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಬಲು ಕಷ್ಟದಾಯಕವಾಗಿದೆ. ಹಾಗಾಗಿ ಸಂಬಂಧಪಟ್ಟವರು ಆದಷ್ಟು ಬೇಗ ಈ ರಸ್ತೆಗೆ ಡಾಮರು ಹಾಕಿಸಿಕೊಡುವ ಮೂಲ ನಮ್ಮ ಬೇಡಿಕೆ ಈಡೇರಿಸಬೇಕಾಗಿ ವಿನಂತಿ.
-ಈಶ್ವರ ನಾಯ್ಕ ಕೊಚ್ಚಿ, ಸ್ಥಳೀಯರು