ಪುತ್ತೂರಿನಲ್ಲಿ 14ನೇ ವರ್ಷದ ಮೊಸರುಕುಡಿಕೆ ಉತ್ಸವ, ವೈಭವದ ಅಟ್ಟಿಮಡಿಕೆ ಒಡೆಯುವ ಶೋಭಯಾತ್ರೆ
ನೃತ್ಯದ ಮೂಲಕ ಮಡಿಕೆ ಒಡೆದು ಅಟ್ಟಿಮಡಿಕೆ ಉತ್ಸವಕ್ಕೆ ಚಾಲನೆ
ಶೋಭಾಯಾತ್ರೆಯುದ್ಧಕ್ಕೂ ಕುಣಿತ ಭಜನೆ, ಭರತನಾಟ್ಯ ಪ್ರದರ್ಶನ, ಸಂಗೀತ ನ್ಯತ್ಯ, ಶ್ರೀಕೃಷ್ಣ ಅರ್ಜುನ ರಥ
ಪುತ್ತೂರು: ಶ್ರೀ ಕೃಷ್ಣಜನ್ಮಾಷ್ಟಮಿಯಂದು ಸ್ಥಾಪಿಸಲ್ಪಟ್ಟ ವಿಶ್ವಹಿಂದೂ ಪರಿಷದ್‌ಗೆ 60 ವರ್ಷ ತುಂಬಿದ ಹಿನ್ನೆಲೆ ಮತ್ತು ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಆ.31 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 14ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಅಟ್ಟಿ ಮಡಿಕೆ ಒಡೆಯುವ ಭವ್ಯ ಶೋಭಾಯಾತ್ರೆಗೆ ಚಾಲನೆ ದೊರೆತಿದೆ.
ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಬೆಳಗ್ಗಿನಿಂದಲೇ ವಿವಿಧ ಆಟೋಟ ಸ್ಪರ್ಧೆ ನಡೆದ ಬಳಿಕ, ಸಂಜೆ ವೈಭವದ ಶೋಭಾಯಾತ್ರೆಯೊಂದಿಗೆ ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನಕ್ಕೆ ಬೊಳುವಾರಿನಲ್ಲಿ ಚಾಲನೆ ನೀಡಲಾಯಿತು.
ಬೊಳುವಾರು ಓಂ ಶ್ರಿ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪ್ರಾರ್ಥನೆ ಮಾಡಿದ ಬಳಿಕ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಯನ್ನು ವಿಶ್ವಹಿಂದು ಪರಿಷತ್ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.
ವಿಶ್ವಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು ಪೂವಪ್ಪ ಅವರು ಧ್ವಜ ಹಸ್ತಾಂತರ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಬಳಿಕ ಬೊಳುವಾರು ವೃತ್ತದಲ್ಲಿ ವಿಶ್ವಕಲಾನಿಕೇತನ ಅರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದುಷಿ ನಯನಾ ರೈ ಮತ್ತು ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿ ಅವರ ಶಿಷ್ಯಂದಿರಿಂದ ಮಡಿಕೆ ಒಡೆಯುವ ಮೂಲಕ ಅಟ್ಟಿ ಮಡಿಕೆ ಉತ್ಸವಕ್ಕೆ ಚಾಲನೆ ನೀಡಲಾಯಿತು.