ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ರಿಟ್ ಅರ್ಜಿಯೊಂದನ್ನು ವಿಲೇವಾರಿ ಮಾಡಿರುವ ಹೈಕೋರ್ಟ್,ಸಮಿತಿ ರಚನೆಯಲ್ಲಾಗಿರುವ ತಾಂತ್ರಿಕ ಕಾರಣಗಳ ಆಧಾರದಲ್ಲಿ ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿ 8 ವಾರದ ಒಳಗಡೆ ರಾಜ್ಯ ಧಾರ್ಮಿಕ ಪರಿಷದ್ ವ್ಯವಸ್ಥಾಪನಾ ಸಮಿತಿ ಪುನರ್ರಚನೆ ಮಾಡಬೇಕು ಎಂದು ಷರತ್ತುಬದ್ಧ ಆದೇಶ ನೀಡಿದೆ.ನೂತನ ವ್ಯವಸ್ಥಾಪನಾ ಸಮಿತಿ ರಚನೆಯಾಗುವ ತನಕ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆಯ ಹಾಲಿ ವ್ಯವಸ್ಥಾಪನಾ ಸಮಿತಿಯನ್ನು ಮುಂದುವರಿಸಿ ಆದೇಶಿಸಿದೆ.
ಬನ್ನೂರು ಗ್ರಾಮದ ಸೇಡಿಯಾಪು ಅನಿಲಕೋಡಿ ದಿ.ಅನಂತೇಶ್ವರ ಭಟ್ ಎಂಬವರ ಮಗಳು ವಸಂತಿ ಯಾನೆ ವಸಂತಲಕ್ಷ್ಮೀ ಎಂಬವರು ರಿಟ್ ಅರ್ಜಿ ಸಲ್ಲಿಸಿದ್ದರು.ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷದ್, ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಮತ್ತು ರಾಜ್ಯ ಧಾರ್ಮಿಕ ಪರಿಷದ್‌ನ ಕಾರ್ಯದರ್ಶಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪ್ರಧಾನ ಅರ್ಚಕರು ಮಹಾಲಿಂಗೇಶ್ವರ ದೇವಸ್ಥಾನ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ಬಿ.ಈಶ್ವರ ನಾಯ್ಕ,ಕೃಷ್ಣವೇಣಿ,ನಳಿನಿ ಪಿ.ಶೆಟ್ಟಿ,ದಿನೇಶ್ ಕುಲಾಲ್,ಮಹಾಬಲ ರೈ ವಳತ್ತಡ್ಕ,ಸುಭಾಸ್ ರೈ ಮತ್ತು ವಿನಯ ಕುಮಾರ್ ಬಿ.ಅವರನ್ನು ಪ್ರತಿವಾದಿಗಳಾಗಿ ಕಾಣಿಸಲಾಗಿದೆ.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ 9 ಮಂದಿ ಸದಸ್ಯರನ್ನೊಳಗೊಂಡ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ 2024ರ ಡಿ.17ರಂದು ಆದೇಶ ಹೊರಡಿಸಲಾಗಿತ್ತು.ಸಮಿತಿ ಸದಸ್ಯರು ಸಭೆ ನಡೆಸಿ ಪಂಜಿಗುಡ್ಡೆ ಈಶ್ವರ ಭಟ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು.ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆ ನಿಯಮಾನುಸಾರ ಕ್ರಮಬದ್ಧವಾಗಿ ನಡೆದಿಲ್ಲ.ಆದ್ದರಿಂದ ಸಮಿತಿಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರೆ ವಸಂತಿ ಯಾನೆ ವಸಂತಲಕ್ಷ್ಮಿಯವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ(ಡಬ್ಲ್ಯೂಪಿ:35009/2024) ಸಲ್ಲಿಸಿದ್ದರು.ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಗೆತ್ತಿಕೊಂಡಿತ್ತು.
ಕ್ರಮಬದ್ಧವಾಗಿ ನಡೆದಿಲ್ಲ:
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ 1997ರ ಸೆಕ್ಷನ್ 25ರ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿ ರಾಜ್ಯ ಧಾರ್ಮಿಕ ಪರಿಷತ್ ವ್ಯವಸ್ಥಾಪನಾ ಸಮಿತಿಯನ್ನು ರಚಿಸಬೇಕೇ ಹೊರತು ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರಿಗೆ ಪ್ರಾತಿನಿಧಿಕವಾಗಿ ವಹಿಸಿಕೊಟ್ಟು ಅವರು ಸಮಿತಿ ನೇಮಕ ಮಾಡುವ ಅಧಿಕಾರ ಹೊಂದಿರುವುದಿಲ್ಲ.ಆದರೆ ಈ ಪ್ರಕರಣದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಅಧ್ಯಕ್ಷರು, ಸಮಿತಿಯನ್ನು ರಚಿಸುವ ಆಕ್ಷೇಪಾರ್ಹ ಅಧಿಸೂಚನೆಯನ್ನು ಹೊರಡಿಸಿದ್ದಾರೆ.ಸಮಿತಿಗೆ ನೇಮಕಾತಿ ಕ್ರಮಬದ್ಧವಾಗಿ ನಡೆಯದೇ ಇರುವುದರಿಂದ ಸಮಿತಿ ಕಾರ್ಯನಿರ್ವಹಿಸದಂತೆ ತಡೆಹಿಡಿಯಬೇಕು ಎಂದು ಅರ್ಜಿದಾರೆ ವಸಂತಿ ಯಾನೆ ವಸಂತಲಕ್ಷ್ಮೀ ಅವರು ಕೋರಿದ್ದರು.ಅರ್ಜಿದಾರರ ಪರ ಹಿರಿಯ ವಕೀಲ ಅಗರ್ತ ಕೇಶವ ಭಟ್ ಅವರು ವಾದಿಸಿದ್ದರು.
ಈ ಪ್ರಕರಣದ ಅರ್ಜಿದಾರರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅರ್ಜಿದಾರರಲ್ಲ ಮತ್ತು 9ನೇ ಪ್ರತಿವಾದಿಯಾಗಿರುವ ಪಂಜಿಗುಡ್ಡೆ ಈಶ್ವರ ಭಟ್ ಅವರೊಂದಿಗಿನ ವೈಯಕ್ತಿಕ ವಿವಾದದಿಂದಾಗಿ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ.ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗಾಗಿ ಈಗಾಗಲೇ ಅನುದಾನ ಹಂಚಿಕೆಯಾಗಿದ್ದು ನಿರ್ದಿಷ್ಟ ಅವಧಿಯೊಳಗೆ ಇದರ ಬಳಕೆಯಾಗಬೇಕಾಗಿದೆ,ವ್ಯವಸ್ಥಾಪನಾ ಸಮಿತಿಯನ್ನು ರದ್ದುಗೊಳಿಸಿದ್ದೇ ಆದರೆ ಇದಕ್ಕೆ ಸಮಸ್ಯೆಯಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಪರ ವಕೀಲರಾದ ಜಿ.ಬಾಲಕೃಷ್ಣ ಶಾಸ್ತ್ರಿಯವರು ನ್ಯಾಯಪೀಠದ ಗಮನ ಸೆಳೆದಿದ್ದರು.ಈ ಸಲ್ಲಿಕೆಗಳು ಮತ್ತು ರಿಟ್ ಅರ್ಜಿದಾರರು ವ್ಯವಸ್ಥಾಪನಾ ಸಮಿತಿ ಸದಸ್ಯತ್ವ ಕೋರಿದ್ದ ಅರ್ಜಿದಾರರಲ್ಲದ ಕಾರಣ, ರಾಜ್ಯ ಧಾರ್ಮಿಕ ಪರಿಷತ್ ವ್ಯವಸ್ಥಾಪನಾ ಸಮಿತಿಯನ್ನು ಪುನರ್ರಚಿಸುವವರೆಗೆ ಪ್ರಸ್ತುತ ವ್ಯವಸ್ಥಾಪನಾ ಸಮಿತಿಯು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿದೆ.ಈ ಹಿಂದೆ ರಾಜ್ಯ ಧಾರ್ಮಿಕ ಪರಿಷತ್ 16-07-2024ರಂದು ನೀಡಿದ್ದ ಪ್ರಕಟಣೆಯನ್ವಯ ಅರ್ಜಿ ಸಲ್ಲಿಸಿರುವವರು ಮತ್ತು ಸದ್ರಿ ಸಂದರ್ಭದ ಪೊಲೀಸ್ ವರದಿಯನ್ನಷ್ಟೆ ಪರಿಗಣಿಸಿ ರಾಜ್ಯ ಧಾರ್ಮಿಕ ಪರಿಷತ್, ಈ ಆದೇಶದ ಪ್ರಮಾಣೀಕೃತ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಎಂಟು ವಾರಗಳ ಒಳಗೆ ವ್ಯವಸ್ಥಾಪನಾ ಸಮಿತಿಯನ್ನು ಪುನರ್ರಚಿಸಬೇಕು ಎಂದು ನ್ಯಾಯಪೀಠ ಷರತ್ತು ಬದ್ಧ ಆದೇಶ ಮಾಡಿದೆ.
ಒಳ್ಳೆಯ ಕೆಲಸಕ್ಕೆ ಮಹಾಲಿಂಗೇಶ್ವರ ದೇವರು ಕೈಬಿಡುವುದಿಲ್ಲ
ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಮಹಾಲಿಂಗೇಶ್ವರ ದೇವರು ಕೈ ಬಿಡುವುದಿಲ್ಲ ಎಂಬುದಕ್ಕೆ ನಮ್ಮ ಸಮಿತಿಯೇ ಸಾಕ್ಷಿಯಾಗಿದೆ.ನಮ್ಮ ಸಮಿತಿ ಆದ ತಕ್ಷಣವೇ ಸಮಿತಿಗೆ ಸ್ಟೇ ತರಲು ವಸಂತಲಕ್ಷ್ಮೀಯವರು ನ್ಯಾಯಾಲಯದ ಮೊರೆ ಹೋದರೂ ವಿಫಲರಾದರು.ಬಳಿಕ ಅವರು ನಮ್ಮ ಸಮಿತಿಯನ್ನು ರದ್ದು ಮಾಡಲು ಪ್ರಯತ್ನಿಸಿದ್ದರು.ಆದರೆ, ಧಾರ್ಮಿಕ ದತ್ತಿ ಇಲಾಖೆಯವರ ಆದೇಶದ ತಾಂತ್ರಿಕ ತಪ್ಪನ್ನು ತಿದ್ದಿಕೊಳ್ಳಲು ನ್ಯಾಯಾಲಯ ಅವಕಾಶ ಕೊಟ್ಟಿರುವುದಲ್ಲದೆ ನಮ್ಮ ಸಮಿತಿಯನ್ನೇ ಮುಂದುವರಿಸಲು ಆದೇಶ ನೀಡಿರುವುದು ನಮ್ಮ ದೇವರ ಸೇವೆಯ ಸತ್ಯತೆಗೆ ಸಾಕ್ಷಿಯಾಗಿದೆ
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು
ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ