ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

0

198.26 ಕೋಟಿ ರೂ. ವ್ಯವಹಾರ; 89.32 ಲಕ್ಷ ರೂ.ನಿವ್ವಳ ಲಾಭ, ಶೇ.25 ಡಿವಿಡೆಂಡ್ ಘೋಷಣೆ

ಪುತ್ತೂರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಆ.31ರಂದು ಆಲಂಕಾರಿನಲ್ಲಿರುವ ಸಂಘದ ಪ್ರಧಾನ ಕಚೇರಿಯ ಬೈದಶ್ರೀ ಸಭಾಭವನದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ಅವರು ಮಾತನಾಡಿ, 1990-91ನೇ ಸಾಲಿನಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಆರಂಭಗೊಂಡಿದ್ದು 2005ರಲ್ಲಿ ಬ್ಯಾಂಕಿಂಗ್ ವ್ಯವಹಾರ ಆರಂಭಿಸಿದೆ. ಸಂಘದ ಸದಸ್ಯರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಲಾಭದಲ್ಲಿ ಮುನ್ನಡೆಯುತ್ತಿದೆ. 2023-24ನೇ ಸಾಲಿನಲ್ಲಿ 115.15 ಕೋಟಿ ರೂ.ಠೇವಣಿ ಸಂಗ್ರಹಿಸಿದ್ದು ವರ್ಷಾಂತ್ಯಕ್ಕೆ 30.81 ಕೋಟಿ ಠೇವಣಿ ಹೊಂದಿರುತ್ತದೆ. 35.81 ಕೋಟಿ ರೂ.ಸಾಲ ವಿತರಣೆ ಮಾಡಿದ್ದು 26.53 ಕೋಟಿ ರೂ.ಹೊರ ಬಾಕಿ ಸಾಲ ಇದ್ದು ಶೇ.97.85 ಸಾಲ ವಸೂಲಾತಿಯೂ ಆಗಿದೆ. ಒಟ್ಟು 198.26 ಕೋಟಿ ರೂ. ವ್ಯವಹಾರ ನಡೆಸಿ 89.32 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.

ಸ್ವಸಹಾಯ ಸಂಘಗಳಿಗೂ ಲಾಭಾಂಶ ವಿತರಣೆ:
ಸಂಘದಲ್ಲಿ 1341 ಮಂದಿ ಎ ತರಗತಿ ಸದಸ್ಯರಿದ್ದಾರೆ. ಇವರೆಲ್ಲರೂ ಸಂಘದೊಂದಿಗೆ ಸಕ್ರೀಯರಾಗಿ ವ್ಯವಹಾರ ಮಾಡಬೇಕು. 85 ಸ್ವಸಹಾಯ ಸಂಘಗಳೂ ಇದ್ದು ಈ ಸಂಘಗಳಿಗೆ ಗ್ರೇಡ್‌ಗೆ ಅನುಗುಣವಾಗಿ ಸಾಲ ವಿತರಣೆ ಮಾಡಲಾಗುತ್ತಿದೆ. 3 ವರ್ಷಗಳಿಂದ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಿಲ್ಲ. ಇದರ ಲೆಕ್ಕ ಪರಿಶೋಧನೆಯೂ ಆಗಿದ್ದು ಮುಂದಿನ ದಿನಗಳಲ್ಲಿ ಲಾಭಾಂಶ ವಿತರಣೆ ಮಾಡಲಿದ್ದೇವೆ. ಸುಕನ್ಯ ಸಮೃದ್ಧಿ ಸಾಲ ಯೋಜನೆಯೂ ಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದ ಎನ್.ಮುತ್ತಪ್ಪ ಪೂಜಾರಿ ಅವರು ಮುಂದಿನ ದಿನಗಳಲ್ಲಿ ಸಂಘದಲ್ಲಿ ಮರಣ ನಿಧಿ ಸ್ಥಾಪನೆ ಸೇರಿದಂತೆ ಕೈಗೊಳ್ಳಲಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಪ್ರತಿಭಾ ಪುರಸ್ಕಾರ:
ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕಡಬ ಕ್ನಾನಾಯ ಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ರಿದ್ಧಿ ಶೆಟ್ಟಿ, ಕಡಬ ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಶಾಲೆಯ ಸಾನ್ವಿ ಜೆ. ರೈ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಆತೂರು ಆಯೆಶಾ ಪ.ಪೂ.ಕಾಲೇಜಿನ ವಿದ್ಯಾರ್ಥಿನಿಯರಾದ ಅಫ್ರಿದಾ, ಫಾತಿಮಾ ಅಸ್ನಾ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಸಮೀಕ್ಷಾ, ವಿಜ್ಞಾನ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಜೀವನ್ ಎಸ್., ಸಾಕ್ಷಾ ಎ., ಕಲಾ ವಿಭಾಗದಲ್ಲಿ ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾಲಯದ ಅಭಿಲಾಶಾ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರವಿಕುಮಾರ್ ಹಾಗೂ ಪದವಿ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಚೇತನಾ ಬಿ.ಎಸ್., ಶ್ರದ್ಧಾ ಯು.ಎಸ್.,(ಬಿ.ಕಾಂ.)ಹಾಗೂ ಚೈತನ್ಯ, ವರ್ಷಿನಿ ಬಿ.(ಬಿ.ಎ.)ಅವರಿಗೆ ಶಾಲು, ಹಾರ ಹಾಕಿ, ಫಲತಾಂಬೂಲ, ಸ್ಮರಣಿಕೆ, ನಗದು ನೀಡಿ ಗೌರವಿಸಲಾಯಿತು. ಈ ಪೈಕಿ ಸಾನ್ವಿ ಜೆ.ರೈ ಅವರ ತಂದೆ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆದ ಜಯಚಂದ್ರ ರೈ ಅವರು ಅನಿಸಿಕೆ ವ್ಯಕ್ತಪಡಿಸಿದರು.

ವಿದ್ಯಾರ್ಥಿ ವೇತನ:
ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಸಂಘದ ಮೂರ್ತೆದಾರರ ಮಕ್ಕಳಿಗೆ, ಸರಕಾರಿ ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ದತ್ತಿನಿಧಿಯಿಂದ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಮೂವರು ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು. ಒಟ್ಟು ಸುಮಾರು 65 ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಮೂರ್ತೆದಾರ ಸದಸ್ಯರಾದ ಬಾಳಪ್ಪ ಪೂಜಾರಿ, ವಾಸಪ್ಪ ಪೂಜಾರಿ ಅವರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಸನ್ಮಾನ:
ಸಂಘದ ಹಿರಿಯ ಮೂರ್ತೆದಾರರಾದ ಬಾಲಕೃಷ್ಣ ಪೂಜಾರಿ ಅವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಶೇ.100 ಸಾಲ ವಸೂಲಾತಿ ಮಾಡಿದ ನೆಟ್ಟಣ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಂತೋಷ್‌ಕುಮಾರ್ ಬಿಳಿನೆಲೆ ಹಾಗೂ ಶಾಖಾ ವ್ಯವಸ್ಥಾಪಕ ಸುಂದರ ಪಲ್ಲತ್ತಡ್ಕ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಡಬ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಜಿನ್ನಪ್ಪ ಸಾಲಿಯಾನ್, ನೂಜಿಬಾಳ್ತಿಲ-ಕಲ್ಲುಗುಡ್ಡೆ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಕುಸುಮಾಧರ ಎನ್ಕಾಜೆ, ನೆಟ್ಟಣ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಸಂತೋಷ್‌ಕುಮಾರ್ ಬಿಳಿನೆಲೆ, ಕೊಯಿಲ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಅಶೋಕ ಕೊಯಿಲ, ಸಂಘದ ಸದಸ್ಯರಾದ ದಯಾನಂದ ಕರ್ಕೇರ ಆಲಂಕಾರು, ಬಿ.ಎಲ್.ಜನಾರ್ದನ ಆಲಂಕಾರು, ಸದಾನಂದ ಮಡ್ಯೊಟ್ಟು ಮತ್ತಿತರರು ವಿವಿಧ ಸಲಹೆ, ಸೂಚನೆ ನೀಡಿದರು.


ಸಂಘದ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ನಿರ್ದೇಶಕರಾದ ಕೆ.ಜಯಕರ ಪೂಜಾರಿ ಕಲ್ಲೇರಿ, ಸಂತೋಷ ಕುಮಾರ್ ಮತ್ರಾಡಿ, ಗಂಗಾರತ್ನ ವಸಂತ್ ಅಗತ್ತಾಡಿ, ಜಯಂತ ಪೂಜಾರಿ ನೆಕ್ಕಿಲಾಡಿ, ಆನಂದ ಪೂಜಾರಿ ಮಠದಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ವಿಜಯ ಅಂಬಾ, ವಾಸಪ್ಪ ಪೂಜಾರಿ ಕೇಪುಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗ ವರದಿ ಮಂಡಿಸಿದರು. ಸಹಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್‌ಕುಮಾರ್ ಅಗತ್ತಾಡಿ, ಲೆಕ್ಕಿಗರಾದ ರಂಜಿನಿ ಆರ್.ಕೆ., ಶಾಖಾ ವ್ಯವಸ್ಥಾಪಕ ರಕ್ಷಿತ್ ಎ., ಸಿಬ್ಬಂದಿಗಳಾದ ಶಿಲ್ಪಾ ಕೆ.ಎಸ್., ಸ್ವಾತಿ, ಚೈತನ್ಯ, ಶರ್ಮಿಳಾ, ಸಚಿನ್ ಎಸ್.ಸಿ., ಕೀರ್ತನ್‌ಕುಮಾರ್, ದೀಕ್ಷಿತ್, ಗೀತೇಶ್, ಅನಿಲ್‌ಕುಮಾರ್ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಅಧ್ಯಕ್ಷ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ ಸ್ವಾಗತಿಸಿ, ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ ವಂದಿಸಿದರು. ನೆಟ್ಟಣ ಶಾಖಾ ವ್ಯವಸ್ಥಾಪಕ ಸುಂದರ ಪಲ್ಲತಡ್ಕ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಸಂಘದ ಸದಸ್ಯ ದೇಜಪ್ಪ ಪೂಜಾರಿ ಕಂಪ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಗರಿಷ್ಠ ಡಿವಿಡೆಂಡ್:
ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘವು ದ.ಕ.ಜಿಲ್ಲೆಯ ಮೂರ್ತೆದಾರರ ಸೇವಾ ಸಹಕಾರಿ ಸಂಘಗಳ ಪೈಕಿ ಅತೀ ಹೆಚ್ಚು ವ್ಯವಹಾರ ಹೊಂದಿದ್ದು ಜಿಲ್ಲೆಯಲ್ಲಿ ಸತತ 2ನೇ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶೇ.25ರಷ್ಟು ಡಿವಿಡೆಂಡ್ ನೀಡುತ್ತಿರುವ ಏಕೈಕ ಸಂಘವೂ ಆಗಿದೆ. ಸಂಘದ ಬೈಲಾ ಪ್ರಕಾರ ಸದಸ್ಯರಿಗೆ ಲಾಭಾಂಶದಲ್ಲಿ ಶೇ.25ಕ್ಕಿಂತ ಹೆಚ್ಚು ಡಿವಿಡೆಂಡ್ ನೀಡಲು ಅವಕಾಶವಿಲ್ಲ. ಕಳೆದ ವರ್ಷವೂ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಿದ್ದೇವೆ. ಈ ವರ್ಷವೂ ಶೇ.25 ಡಿವಿಡೆಂಡ್ ನೀಡುತ್ತೇವೆ. ಗ್ರಾಹಕರ, ಠೇವಣಿದಾರರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದೆಯೂ ಸಂಘಕ್ಕೆ ಈ ಯೋಗ, ಭಾಗ್ಯ ಸಿಗಲಿ.
-ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ
ಅಧ್ಯಕ್ಷರು, ಆಲಂಕಾರು ಮೂ.ಸೇ.ಸ.ಸಂಘ

LEAVE A REPLY

Please enter your comment!
Please enter your name here