ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ಪರವಾನಿಗೆ ಆಧಾರದಲ್ಲೇ ಬಾಡಿಗೆ ಮಾಡಲು ಅವಕಾಶ ನೀಡಲು ಆಗ್ರಹ – ಜಿಲ್ಲಾಧಿಕಾರಿಗೆ ಮನವಿ

0

ಪುತ್ತೂರು: ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಮತ್ತು ಯಾವುದೇ ರಿಕ್ಷಾ ನಿಲ್ದಾಣದಲ್ಲಿ ನಿಲುಗಡೆಗೊಳಿಸಿ ಬಾಡಿಗೆ ಮಾಡಲು ಅವಕಾಶ ನೀಡಿರುವುದರಿಂದ ನ್ಯಾಯಯುತವಾಗಿ ತಾಲೂಕು ಪರವಾನಿಗೆ ಪಡೆದು ಬಾಡಿಗೆ ಮಾಡುತ್ತಿರುವ ರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಇದನ್ನು ಕೂಡಲೇ ರದ್ದುಪಡಿಸಿ ಪರವಾನಿಗೆ ಆಧಾರದಲ್ಲೇ ಬಾಡಿಗೆ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿ ಪುತ್ತೂರು ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಪುತ್ತೂರು ಸಾರಿಗೆ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.


ಬ್ಯಾಟರಿ ರಿಕ್ಷಾಗಳಿಗೆ ತಾಲೂಕು ಪರವಾನಿಗೆ ನೀಡುವ ಸಂದರ್ಭದಲ್ಲಿ ಮಾಲಕನ ವಿಳಾಸದ ಆಧಾರದಲ್ಲಿ ರಿಕ್ಷಾ ತಂಗುದಾಣ ನಿಗದಿಗೊಳಿಸಬೇಕು. ಪುತ್ತೂರು ನಗರ ಪ್ರದೇಶ ವಿಳಾಸವಿರುವವರಿಗೆ ನಗರ ಪ್ರದೇಶದಲ್ಲಿ ರಿಕ್ಷಾ ತಂಗುದಾಣವನ್ನು ಗುರುತಿಸುವುದು ಗ್ರಾಮಾಂತರ ಪ್ರದೇಶದ ವಿಳಾಸವರಿಗೆ ಗ್ರಾಮಾಂತರ ಪ್ರದೇಶದಲ್ಲಿಯೇ ನಿಲುಗಡೆಗೊಳಿಸಲು ರಿಕ್ಷಾ ಪರವಾನಿಗೆ ನೀಡುವ ಸಂದರ್ಭದಲ್ಲೇ ಸ್ಥಳ ನಿಗದಿಗೊಳಿಸಬೇಕು, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭ ರಿಕ್ಷಾ ತಂಗುದಾನಕ್ಕೂ ಸ್ಥಳವಕಾಶ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಬೇಡಿಕೆಯ ಜೊತೆಗೆ ಉಚಿತ ಬಸ್ ಯೋಜನೆಯಿಂದ ರಿಕ್ಷಾ ಚಾಲಕರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಬ್ಯಾಂಕ್ ಸಾಲ ಹಾಗು ಸ್ವಸಹಾಯ ಸಂಘಗಳಿಂದ ಪಡೆದ ಸಾಲ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ತಮ್ಮ ಸಮಸ್ಯೆಗಳನ್ನು ಮನವಿಯಲ್ಲಿ ನೀಡಲಾಗಿದೆ. ಸಂಘದ ಅಧ್ಯಕ್ಷ ಅರುಣ್ ಕುಮಾರ್ ಸಂಪ್ಯ, ಕಾರ್ಯಾಧ್ಯಕ್ಷ ಕೆ.ಜಯರಾಮ ಕುಲಾಲ್, ಕಾರ್ಯದರ್ಶಿ ಮಹಮ್ಮದ್ ಎ, ಸಲಹೆಗಾರರಾದ ಗಿರೀಶ್ ನಾಯ್ಕ್ ಸೊರಕೆ ಸಹಿತ ಹಲವಾರು ಮಂದಿ ಸದಸ್ಯರು ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here